

ಹೊಸದುರ್ಗ: ಕಾಂಗ್ರೆಸ್ ಸರ್ಕಾರ ಜಾರಿಗೊಳಿಸಿರುವ ಜನಪರ ಯೋಜನೆಗಳನ್ನು ಫಲಾನುಭವಿಗಳಿಗೆ ತಲುಪಿಸುವ ಕೆಲಸವನ್ನು ಪಕ್ಷದ ಕಾರ್ಯಕರ್ತರು ಪ್ರಾಮಾಣಿಕವಾಗಿ ಮಾಡಬೇಕು ಎಂದು ಶಾಸಕ ಬಿ.ಜಿ.ಗೋವಿಂದಪ್ಪ ತಿಳಿಸಿದರು.
ಪಟ್ಟಣದ ಪುರಸಭಾ ಕಚೇರಿ ಆವರಣದಲ್ಲಿ ಶುಕ್ರವಾರ ಶಾಸಕರ ಜನಸಂಪರ್ಕ ಕಚೇರಿ ಉದ್ಘಾಟಿಸಿ ಮಾತನಾಡಿದರು.
ಕಾಂಗ್ರೆಸ್ ಚುನಾವಣೆ ವೇಳೆ ನೀಡಿದ್ದ ಆಶ್ವಾಸನೆಯಂತೆ 5 ಗ್ಯಾರಂಟಿ ಯೋಜನೆ ಜಾರಿಗೊಳಿಸಿದೆ. ಪ್ರತಿವರ್ಷ ಈ ಯೋಜನೆಗಳಿಗಾಗಿ 62 ಸಾವಿರ ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ. ಅರ್ಹ ಫಲಾನುಭವಿಗಳು ಯೋಜನೆಯ ಪ್ರಯೋಜನ ಪಡೆದುಕೊಂಡು ಬದುಕು ಕಟ್ಟಿಕೊಳ್ಳಬೇಕು. ಕಾಂಗ್ರೆಸ್ ಕಾರ್ಯಕರ್ತರು ಯೋಜನೆಗಳನ್ನು ಜನರಿಗೆ ತಲುಪಿಸುವ ಮೂಲಕ ಅವುಗಳ ಯಶಸ್ವಿಗೆ ಸಹಕಾರ ನೀಡಬೇಕು ಎಂದರು.
ಪ್ರತಿ ಮನೆಯ ಯಜಮಾನಿಗೆ ಹಣ ನೀಡುವ ಗೃಹಲಕ್ಷ್ಮೀ ಯೋಜನೆಯ ನೋಂದಣಿ ಕಾರ್ಯ ಅರಂಭವಾಗಿದೆ. ಗ್ರಾಮ ಒನ್, ಬಾಪೂಜಿ ಸೇವಾಕೇಂದ್ರ ಹಾಗೂ ಕರ್ನಾಟಕ ಒನ್ ಕೇಂದ್ರಗಳ ಮೂಲಕ ನೋಂದಣಿ ಮಾಡಿಸಲಾಗುತ್ತಿದೆ. ಪ್ರತಿ ಗ್ರಾಮಕ್ಕೆ ಒಬ್ಬರಂತೆ ಸೇವಾ ಪ್ರತಿನಿಧಿ ನೇಮಿಸಲಾಗುತ್ತಿದ್ದು, 200 ಜನ ಸೇವಾ ಪ್ರತಿನಿಧಿಗಳ ಪಟ್ಟಿಯನ್ನು ಜಿಲ್ಲಾಧಿಕಾರಿಗಳಿಗೆ ಕಳುಹಿಸಲಾಗುತ್ತಿದೆ. ಇವರು ಪ್ರತಿ ಮನೆಗೆ ಬಂದು ಯೋಜನೆಯ ಅರ್ಜಿಯನ್ನು ನೋಂದಣಿ ಮಾಡಲಿದ್ದಾರೆ ಎಂದು ಹೇಳಿದರು.
ತಾಲೂಕಿನಲ್ಲಿ ಬಗರ್ ಹುಕುಂ ಸಮಿತಿ ರಚನೆಗಾಗಿ ಸದಸ್ಯರ ಪಟ್ಟಿಯನ್ನು ಸರ್ಕಾರಕ್ಕೆ ರವಾನಿಸಲಾಗಿದೆ. ಸಮಿತಿಯು ರಚನೆಯಾದ ತಕ್ಷಣ ಸಭೆ ನಡೆಸಿ ಅರ್ಹರಿಗೆ ಸಾಗುವಳಿ ಚೀಟಿ ನೀಡಲಾಗುವುದು ಎಂದರು.
ಪುರಸಭೆ ಆವರಣದಲ್ಲಿ ಜನಸಂಪರ್ಕ ಕಚೇರಿ ಆರಂಭಿಸಲಾಗಿದ್ದು, ಸಿಬ್ಬಂದಿ ನೇಮಿಸಲಾಗಿದೆ. ತಾಲೂಕಿನಲ್ಲಿದ್ದಾಗ ಪ್ರತಿ ದಿನ ಕಚೇರಿಗೆ ಭೇಟಿ ನೀಡಿ, ಜನರಿಂದ ಅಹವಾಲು ಸ್ವೀಕರಿಸಲಾಗುವುದು ಎಂದು ಹೇಳಿದರು.
ಕೆಪಿಸಿಸಿ ಸದಸ್ಯರಾದ ಅಲ್ತಾಪ್ ಪಾಷಾ, ಎಂ.ಪಿ.ಶಂಕರ್, ಟಿಎಪಿಸಿಎಂಎಸ್ ಅಧ್ಯಕ್ಷ ಕಾರೇಹಳ್ಳಿ ಬಸವರಾಜ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪದ್ಮನಾಬ್, ಆಗ್ರೋ ಶಿವಣ್ಣ, ದೀಪಿಕಾ, ಪುರಸಭಾ ಸದಸ್ಯರಾದ ಶಂಕರಪ್ಪ, ಜಾಫ್‌ರ್ ಸಾಧಿಕ್ ಇತರರಿದ್ದರು.