

ಹಿರೀಸಾವೆ: ಗ್ಯಾರಂಟಿ ಯೋಜನೆಗಳ ಜತೆಗೆ ರಾಜ್ಯ ಸರ್ಕಾರ ಇತರ ಅಭಿವೃದ್ಧಿ ಕೆಲಸಗಳಿಗೂ ಆದ್ಯತೆ ನೀಡಿ, ಅಗತ್ಯ ಅನುದಾನ ನೀಡಬೇಕು ಎಂದು ಶಾಸಕ ಸಿ.ಎನ್.ಬಾಲಕೃಷ್ಣ ಆಗ್ರಹಿಸಿದರು.
ಹೋಬಳಿಯ ಸೋರೆಕಾಯಿಪುರ ಗ್ರಾಮದಲ್ಲಿ 6 ಕೋಟಿ ರೂ. ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಗುರುವಾರ ಚಾಲನೆ ನೀಡಿ, ಗ್ಯಾರಂಟಿ ಯೋಜನೆಗಳಿಂದ ಜನರಿಗೆ ಅನುಕೂಲವಾಗುತ್ತದೆ ಎಂದು ಅಭಿವೃದ್ಧಿ ಕಾರ್ಯಗಳ ಹಣವನ್ನು ತಡೆ ಹಿಡಿಯುವುದು ಸರಿಯಲ್ಲ ಎಂದು ಹೇಳಿದರು.
ರಸ್ತೆ ನಿರ್ಮಾಣ, ಶಾಲೆಗಳ ಅಭಿವೃದ್ಧಿ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಅಗತ್ಯ ಮೂಲಸೌಲಭ್ಯಗಳು ಜನರಿಗೆ ಅತ್ಯಗತ್ಯವಿದೆ. ಈ ಹಿಂದಿನ ಸರ್ಕಾರದ ಅವಧಿಯಲ್ಲಿ ಟೆಂಡರ್ ಆಗಿರುವ ಕಾಮಗಾರಿಗಳಿಗೆ ಅನುದಾನವನ್ನು ಬಿಡುಗಡೆ ಮಾಡುವಂತೆ ಲೋಕೋಪಯೋಗಿ ಸಚಿವರಿಗೆ ಮನವಿ ಮಾಡಲಾಗಿದೆ ಎಂದು ತಿಳಿಸಿದರು.
6 ಕೋಟಿ ರೂ. ವೆಚ್ಚದಲ್ಲಿ ಸೋರೆಕಾಯಿಪುರ, ಬೋರೇಗೌಡನ ಕೊಪ್ಪಲು, ಆಯರಹಳ್ಳಿ, ಚೊಳಂಬಹಳ್ಳಿ ಹಾಗೂ ಕಮರವಳ್ಳಿವರೆಗೆ ರಸ್ತೆ ಅಭಿವೃದ್ಧಿಪಡಿಸಲಾಗುವುದು. ಎರಡು ಸೇತುವೆಗಳನ್ನು ನಿರ್ಮಾಣ ಮಾಡಲಾಗಿದೆ. ತಾಲೂಕು ಕೇಂದ್ರದಿಂದ ಜಿಲ್ಲೆಯ ಗಡಿಭಾಗದ ಕೆಲವು ರಸ್ತೆಗಳನ್ನು ಮುಂದಿನ ದಿನದಲ್ಲಿ ಅಭಿವೃದ್ಧಿಪಡಿಸಲಾಗುವುದು ಎಂದು ಭರವಸೆ ನೀಡಿದರು.
ರಾಜ್ಯ ಜೆಡಿಎಸ್ ಉಪಾಧ್ಯಕ್ಷ ಎಚ್.ಜಿ.ರಾಮಕೃಷ್ಣ, ಪಿಎಸಿಸಿಬಿ ಅಧ್ಯಕ್ಷ ಪ್ರಭಾಕರ್, ನಿರ್ದೇಶಕ ಸುರೇಶ್, ಎಪಿಎಂಸಿ ನಿರ್ದೇಶಕ ಮಂಜುನಾಥ್, ಗ್ರಾಮ ಪಂಚಾಯಿತಿ ಸದಸ್ಯರಾದ ಪ್ರಕಾಶ್, ಸಬ್ಬನಹಳ್ಳಿ ಮಂಜುನಾಥ್, ಅರಕೆರೆ ಸಂತೋಷ್, ಲೋಕೋಪಯೋಗಿ ಇಲಾಖೆ ಪ್ರಭಾರ ಎಇಇ ಮಂಜಣ್ಣಗೌಡ, ಮುಖಂಡರಾದ ಬಿ.ಎಂ.ರಂಗೇಗೌಡ, ಮಹೇಶ್, ಕೃಷ್ಣಪ್ಪ, ಗಿರೀಶ್, ಮದನೆ ಸುನಿಲ್ ಇತರರು ಇದ್ದರು.