

ಚನ್ನರಾಯಪಟ್ಟಣ: ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಲಾಭ ಪಡೆಯಲು ಆಧಾರ್ ಕಾರ್ಡ್ ಪ್ರಮುಖ ದಾಖಲೆಯಾಗಿದ್ದು, ಆಧಾರ್ ಕಾರ್ಡ್ ಇಲ್ಲದೆ ಯಾವುದೇ ಸೌಲಭ್ಯವಿಲ್ಲ ಎನ್ನುವಷ್ಟು ಅಗತ್ಯತೆ ಇರುವುದರಿಂದ, ಈ ನಿಟ್ಟಿನಲ್ಲಿ ಹೊಸ ಕಾರ್ಡ್ ಮಾಡಿಸಲು ಹಾಗೂ ಕಾರ್ಡ್‌ನಲ್ಲಿನ ನ್ಯೂನತೆ ತಿದ್ದುಪಡಿಗಾಗಿ ಜನರು ತಾಲೂಕಿನ ಆಧಾರ್ ಕೇಂದ್ರಗಳಿಗೆ ಮುಗಿಬೀಳುತ್ತಿದ್ದಾರೆ.
ಆದಾಯ ತೆರಿಗೆ ಇಲಾಖೆಗಾಗಿ ಆಧಾರ್-ಪಾನ್ ಲಿಂಕ್ ಒಂದೆಡೆಯಾದರೆ, ಶಾಲೆಗಳು ಆರಂಭವಾಗಿರುವ ಹಿನ್ನೆಲೆಯಲ್ಲಿ ಮಕ್ಕಳ ಆಧಾರ್ ಕಾರ್ಡ್‌ನಲ್ಲಿನ ಕೆಲ ತಿದ್ದುಪಡಿಗೆ ಪೋಷಕರು ಮುಂದಾಗಿರುವುದು ಜನದಟ್ಟಣೆ ಹೆಚ್ಚಾಗಲು ಕಾರಣವಾಗಿದೆ. ಕಳೆದ ಒಂದು ತಿಂಗಳಿಂದ ಜನದಟ್ಟಣೆ ಹೆಚ್ಚಾಗಿದ್ದು, ಶಾಲೆ ಆರಂಭದ ಪೂರ್ವ, ಮೊಬೈಲ್ ನಂಬರ್ ಬದಲಾವಣೆ, ವಿಳಾಸ, ಹೆಸರು, ತಿದ್ದುಪಡಿ ಸೇರಿದಂತೆ ಇತರೆ ಯಾವುದೇ ಕಾರ್ಯಕ್ಕೂ ಎಂದೂ ಇಷ್ಟೊಂದು ಜನರ ಕ್ಯೂ ಇರಲಿಲ್ಲ. ಇದೀಗ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದಾಗಿ ಆಧಾರ್ ಸೇವಾ ಕೇಂದ್ರಗಳು ಗಿಜಿಗುಡುವಂತಾಗಿವೆ. ಜನದಟ್ಟಣೆ ನಿಯಂತ್ರಣಕ್ಕಾಗಿ ಕೆಲವು ಕೇಂದ್ರಗಳಲ್ಲಿ ಪ್ರತಿ ದಿನ ಟೋಕನ್ ನೀಡುವ ವ್ಯವಸ್ಥೆ ಮಾಡಲಾಗಿದೆ.
ಬ್ಯಾಂಕ್‌ಗಳಲ್ಲಿನ ಆಧಾರ್ ತಿದ್ದುಪಡಿ ಕೇಂದ್ರ ಸೇರಿದಂತೆ ಖಾಸಗಿ ಕೇಂದ್ರಗಳಲ್ಲಿ ಆಧಾರ್ ಕಾರ್ಡ್ ಸರಿಪಡಿಸುವ ಕಾರ್ಯಗಳಿಗಾಗಿ ಜನರ ಮುಗಿಬಿದ್ದಿದ್ದಾರೆ. ಪಟ್ಟಣದಲ್ಲಿ ಹಲವು ಬ್ಯಾಂಕ್‌ಗಳಲ್ಲಿ ಸರ್ವರ್ ಸಮಸ್ಯೆಯಿಂದ ಅಪ್‌ಡೇಟ್ ಮಾಡಲು ವಿಳಂಬವಾಗುತ್ತಿರುವುದರಿಂದ ಗಂಟೆಗಟ್ಟಲೇ ಜನರು ಕ್ಯೂ ನಿಲ್ಲುತ್ತಿದ್ದಾರೆ. ಜನಸಂದಣಿ ಹಿನ್ನೆಲೆಯಲ್ಲಿ ಮುಂದಿನ ದಿನಕ್ಕೆ ಕೂಪನ್ ನೀಡಿ ಕಳುಹಿಸಲಾಗುತ್ತಿದೆ.
ಗ್ರಾಮೀಣ ಭಾಗದಿಂದ ಆಧಾರ್ ತಿದ್ದುಪಡಿಗಾಗಿ ಪಟ್ಟಣಕ್ಕೆ ಬರುವುದನ್ನು ತಪ್ಪಿಸುವ ಸಲುವಾಗಿ ತಾಲೂಕಿನ ಪ್ರತಿ ಗ್ರಾಮ ಪಂಚಾಯಿತಿ ಕೇಂದ್ರದಲ್ಲಿ ಆಧಾರ್ ತಿದ್ದುಪಡಿ ಹಾಗೂ ನೋಂದಣಿ ಮಾಡಬೇಕು. ಪಟ್ಟಣದಲ್ಲಿಯೂ ಹೆಚ್ಚುವರಿ ಕೌಂಟರ್ ತೆರೆಯಬೇಕು ಎಂದು ಸಾರ್ವಜನಿಕರು ತಾಲೂಕು ಆಡಳಿತವನ್ನು ಒತ್ತಾಯಿಸಿದ್ದಾರೆ.