

ಗೌರಿಬಿದನೂರು : ನಗರಸಭೆ ಕಾರ್ಯಾಲಯದಲ್ಲಿ ಮಂಗಳವಾರ ಅಧ್ಯಕ್ಷೆ ಕೆ.ಎಂ.ಗಾಯತ್ರಿ ಬಸವರಾಜ್ ನೇತೃತ್ವದಲ್ಲಿ 2020-21ನೇ ಸಾಲಿನ 35.09 ಕೋಟಿ ರೂ. ಗಾತ್ರದ ಬಜೆಟ್ ಮಂಡನೆ ಮಾಡಲಾಯಿತು.
ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ಹಾಗೂ ನಗರಸಭೆ ಅಪರ ಆಯುಕ್ತೆ ರೇಣುಕಾ ಮಾತನಾಡಿ, ನಗರಸಭೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಬರುವ ಅನುದಾನಗಳು, ಸ್ಥಳೀಯ ಹುಟ್ಟುವಳಿ ಆದಾಯ, ಕಟ್ಟಡಗಳ ಬಾಡಿಗೆ, ಕಂದಾಯ ಸಂಗ್ರಹ, ಖಾತೆ ಬದಲಾವಣೆ ಸೇರಿ ಇನ್ನಿತರ ಮೂಲಗಳಿಂದ ಬರುವ ಹಣವನ್ನು ಒಂದು ವರ್ಷದಲ್ಲಿ ಹಂತ ಹಂತವಾಗಿ ಅಭಿವೃದ್ಧಿ ಕಾರ್ಯಗಳಿಗೆ ಬಳಕೆ ಮಾಡಲಾಗುತ್ತದೆ ಎಂದು ತಿಳಿಸಿದರು.
ಈ ಬಾರಿಯ ಆಯವ್ಯಯ ಗಾತ್ರವು 35,09,30,000 ರೂ.ಗಳಾಗಿದ್ದು, ಮುಂದಿನ ವರ್ಷದ ಅಭಿವೃದ್ಧಿ ಕಾರ್ಯಗಳು ಹಾಗೂ ಇನ್ನಿತರ ಖರ್ಚು ವೆಚ್ಚಗಳಿಗೆ ಸಂಬಂಧಿಸಿದಂತೆ ಮುಂದಿನ ಸಭೆಯಲ್ಲಿ ತೀರ್ಮಾನಿಸಲಾಗುವುದು. ಎಲ್ಲ ಸದಸ್ಯರ ತೀರ್ಮಾನದ ಮೇರೆಗೆ ಈ ಬಾರಿಯ ಬಜೆಟ್ ಮಂಡನೆ ಮಾಡಲಾಗಿದೆ ಎಂದರು.
ನಗರಸಭೆ 31 ವಾರ್ಡ್‌ಗಳ ಸರ್ವಾಂಗೀಣ ಅಭಿವೃದ್ಧಿಗಾಗಿ ಹಣಕಾಸಿನ ಆಯವ್ಯಯವನ್ನು ಎಲ್ಲ ಸದಸ್ಯರ ಸಮ್ಮುಖದಲ್ಲಿ ತೀರ್ಮಾನಿಸಲಾಗುವುದು. ಜನತೆಗೆ ಮೂಲಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಕಾಮಗಾರಿಗಳನ್ನು ಕೈಗೊಳ್ಳಲಾಗಿವುದು ಎಂದು ಅಧ್ಯಕ್ಷೆ ಕೆ.ಎಂ.ಗಾಯತ್ರಿ ಬಸವರಾಜ್ ಹೇಳಿದರು. ಉಪಾಧ್ಯಕ್ಷೆ ಭಾಗ್ಯಮ್ಮ, ಇಂಜಿನಿಯರ್ ಚಕ್ರಪಾಣಿ, ಎಇಇ ಸುಭಾಷ್ ಕಾಂಬ್ಳಿ, ಸದಸ್ಯರು ಇದ್ದರು.