ಗೌರಿಬಿದನೂರು ಟಿಎಪಿಸಿಎಂಎಸ್ ಚುನಾವಣೆ; 31 ಮಂದಿ ನಾಮಪತ್ರ ಸಲ್ಲಿಕೆ

IMG-20201107-WA0054
Published on

ಗೌರಿಬಿದನೂರು: ನ.15ರಂದು ನಡೆಯುವ ಟಿಎಪಿಸಿಎಂಎಸ್ ನ 14 ಸ್ಥಾನಗಳ ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆಗೆ 31 ಮಂದಿ ನಾಮಪತ್ರ ಸಲ್ಲಿಸಿದ್ದಾರೆ. ಎ ವರ್ಗದ 6 ನಿರ್ದೇಶಕ ಸ್ಥಾನಕ್ಕೆ 13 ನಾಮಪತ್ರ ಹಾಗೂ ಬಿ ವರ್ಗದ 8 ನಿರ್ದೇಶಕ ಸ್ಥಾನಕ್ಕೆ 18 ನಾಮಪತ್ರ ಸಲ್ಲಿಕೆಯಾಗಿದೆ ಎಂದು ಚುನಾವಣಾಧಿಕಾರಿ ಲಿಯಾಕತ್ ಅಲಿಖಾನ್ ತಿಳಿಸಿದ್ದಾರೆ.

ಸ್ಪರ್ಧೆಗೆ ಅವಕಾಶ ಕೋರಿ ನ್ಯಾಯಾಲಯದ ಮೊರೆ ಹೋಗಿ ಗೆಲುವು ಸಾಧಿಸಿದ್ದ ಪುಟ್ಟಸ್ವಾಮಿ ಗೌಡ ಬಣದಿಂದ 14 ಸ್ಥಾನಗಳಿಗೂ ಬೆಂಬಲಿತ ಅಭ್ಯರ್ಥಿಗಳನ್ನು ಕಣಕ್ಕಿಳಿಸಿರುವುದು ವಿಶೇಷ. ಪಕ್ಷದ ಚಿನ್ಹೆಯಡಿ ಚುನಾವಣೆ ನಡೆಯದಿದ್ದರೂ ಸಹ ರಾಜಕೀಯ ಪಕ್ಷಗಳು ತಮ್ಮ ಹಿಡಿತ ಸಾಧಿಸುವ ನಿಟ್ಟಿನಲ್ಲಿ ಬೆಂಬಲಿಗರನ್ನು ಕಣಕ್ಕಿಳಿಸಿ ಗೆಲ್ಲಿಸಿಕೊಳ್ಳಲು ತಂತ್ರಗಾರಿಕೆ ಹೂಡಿವೆ. ಆದ್ದರಿಂದ ತಾಲೂಕಿನಲ್ಲಿ ಮಿನಿ ರಾಜಕೀಯ ಸಮರದ ಛಾಯೆ ಕಂಡು ಬರುತ್ತಿದೆ. ನಾಮಪತ್ರ ಹಿಂಪಡೆಯಲು ನ.9 ಅಂತಿಮ ದಿನವಾಗಿರುವುದರಿಂದ ಕೆಲವು ಅಭ್ಯರ್ಥಿಗಳ ಉಮೇದುವಾರಿಕೆ ಹಿಂಪಡೆಯುವಂತೆ ಮನವೊಲಿಸುವ ಕಸರತ್ತು ನಡೆಯುತ್ತಿದೆ.

ಬಣದ ಪ್ರತಿಷ್ಠೆ: ಪ್ರಸ್ತುತ ಟಿಎಪಿಸಿಎಂಎಸ್ ಕಾಂಗ್ರೆಸ್ ಹಿಡಿತದಲ್ಲಿದೆ. ಚುನಾವಣೆಗೆ ಬಿಜೆಪಿ ಹಾಗೂ ಜೆಡಿಎಸ್ ಹೆಚ್ಚಿನ ಉತ್ಸಾಹ ತೋರುತ್ತಿಲ್ಲ. ಆದರೆ ಕೈವಶದಲ್ಲಿರುವ ಸಂಘದ ಆಡಳಿತವನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳಬೇಕೆಂದು ನಿರ್ಧರಿಸಿರುವ ಪುಟ್ಟಸ್ವಾಮಿ ಗೌಡ ಬಣ ಚುನಾವಣೆಯನ್ನು ಪ್ರತಿಷ್ಠೆಯಾಗಿ ಸ್ವೀಕರಿಸಿ ಬಿಜೆಪಿ ಮತ್ತು ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳಿಗೂ ಚುನಾವಣೆಗೆ ಸ್ಪರ್ಧಿಸಲು ಮೈತ್ರಿ ಮಾಡಿಕೊಂಡು ನಾಮಪತ್ರ ಸಲ್ಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net