ಗೌರಿಬಿದನೂರು ಅಭಿವೃದ್ಧಿಗೆ ಮುನ್ನುಡಿ ಬರೆಯಿರಿ

02_GBD_Swamy
Published on

ಗೌರಿಬಿದನೂರು: ಮುಂಬರುವ ಗ್ರಾಪಂ, ತಾಪಂ ಹಾಗೂ ಜಿಪಂ ಚುನಾವಣೆಗಳಲ್ಲಿ ಬೆಂಬಲಿತ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳುವ ಮೂಲಕ ಕ್ಷೇತ್ರದ ಅಭಿವೃದ್ಧಿಗೆ ಮುನ್ನುಡಿ ಬರೆಯೋಣ ಎಂದು ಉದ್ಯಮಿ ಕೆ.ಎಚ್.ಪುಟ್ಟಸ್ವಾಮಿಗೌಡ ಮನವಿ ಮಾಡಿದರು.

ತಾಲೂಕಿನ ಗೋಟಕನಪುರದ ಬೈಲಾಂಜನೇಯಸ್ವಾಮಿ ದೇವಸ್ಥಾನದ ಬಳಿ ಭಾನುವಾರ ಹಮ್ಮಿಕೊಂಡಿದ್ದ ಬೆಂಬಲಿಗರ ಸಭೆಯಲ್ಲಿ ಮಾತನಾಡಿ, ತಾಲೂಕಿನ ಜನತೆ ಎಚ್ಚೆತ್ತುಕೊಳ್ಳಬೇಕು. ಗ್ರಾಮಗಳ ಮೂಲಸೌಲಭ್ಯ, ಆರ್ಥಿಕತೆ ಹಾಗೂ ನಿರುದ್ಯೋಗ ಸಮಸ್ಯೆ ನಿವಾರಣೆಗೆ ನಮ್ಮಲ್ಲೇ ಪರಿಹಾರ ಕಂಡುಕೊಳ್ಳಬೇಕು ಎಂದರು.

ಯುವಕರಲ್ಲಿ ರಾಜಕೀಯ ಇಚ್ಚಾಶಕ್ತಿ ಬೆಳೆಸುವ, ಸ್ವಾವಲಂಬಿ ಬದುಕು ರೂಪಿಸುವ. ಮಹಿಳೆಯರಿಗೆ ಸ್ವ-ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ನಮ್ಮ ಹೋರಾಟ ನಡೆಯುತ್ತಿದೆ ಎಂದರು.

ತಾಲೂಕಿನ ಜನ ಬದಲಾವಣೆ ಬಯಸಿದ್ದಾರೆ ಎಂಬುದಕ್ಕೆ ಇತ್ತೀಚೆಗೆ ನಡೆದ ನಗರಸಭೆ ಚುನಾವಣೆಯ ಫಲಿತಾಂಶವೇ ಸಾಕ್ಷಿ. ಪಕ್ಷಾತೀತವಾಗಿ ಎಲ್ಲರೂ ಸಹ ನಮಗೆ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ. ವಿವಿಧ ಪಕ್ಷಗಳನ್ನು ತೊರೆದು ನಮ್ಮ ಬಳಗ ಸೇರ್ಪಡೆಯಾಗುತ್ತಿದ್ದಾರೆ ಎಂದು ಜಿಪಂ ಸದಸ್ಯ ಎಚ್.ವಿ.ಮಂಜುನಾಥ್ ಸಂತಸ ವ್ಯಕ್ತಪಡಿಸಿದರು.

ತಾಲೂಕಿನ ಜನತೆಗೆ ಪರ್ಯಾಯ ರಾಜಕೀಯ ಶಕ್ತಿ ಲಭಿಸಿದೆ. ನಾವೆಲ್ಲರೂ ಗೌರಿಬಿದನೂರು ಅಭಿವೃದ್ಧಿ ನಮ್ಮ ಸಂಕಲ್ಪ ಧ್ಯೇಯದೊಂದಿಗೆ ಮುನ್ನಡೆಯೋಣ ಎಂದು ಕೋಚಿಮುಲ್ ಮಾಜಿ ಅಧ್ಯಕ್ಷ ಜೆ.ಕಾಂತರಾಜು ಕರೆ ನೀಡಿದರು.

ನಗರಸಭಾ ವ್ಯಾಪ್ತಿಯ ಸುಮಾರು 500ಕ್ಕೂ ಹೆಚ್ಚಿನ ಯುವಕರು ಬಣಕ್ಕೆ ಸೇರ್ಪಡೆಗೊಂಡರು. ನಗರಸಭೆ ಸದಸ್ಯರಾದ ಗೋಪಾಲ್, ಲಕ್ಷ್ಮೀನಾರಾಯಣಪ್ಪ, ಮಾಜಿ ಸದಸ್ಯರಾದ ಎಂ.ನರಸಿಂಹಮೂರ್ತಿ, ಕೆ.ಎಸ್. ಅನಂತರಾಜು. ಮುಖಂಡರಾದ ಜಿ.ಕೆ.ಸತೀಶ್, ಶ್ರೀನಿವಾಸ್‌ಗೌಡ, ನಾಗಸಂದ್ರ ಶ್ರೀನಾಥ್, ಅಸ್ಲಾಂ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net