ಗೌರಿಬಿದನೂರಿನಲ್ಲಿ ಸುರಿದ ದಾಖಲೆ ಮಳೆ:ಉತ್ತರ ಪಿನಾಕಿನಿಗೆ ಜೀವ ಕಳೆ ನದಿ ದಡದ ವಾಸಿಗಳಲ್ಲಿ ಆತಂಕ

18 gbd 1a
Published on

ಗೌರಿಬಿದನೂರು: ಮೂರು ದಿನಗಳಿಂದ ಸುರಿಯುತ್ತಿರುವ ದಾಖಲೆ ಪ್ರಮಾಣದ ಮಳೆಗೆ ಉತ್ತರಪಿನಾಕಿನಿ ನದಿ ಜೀವ ಕಳೆ ಪಡೆದುಕೊಂಡಿದ್ದು, ನದಿ ದಡದ ವಾಸಿಗಳಲ್ಲಿ ಆತಂಕ ಮನೆ ಮಾಡಿದೆ.

ಮಂಗಳವಾರ ಒಂದೇ ದಿನ ತಾಲೂಕಿನ ತೊಂಡೇಬಾವಿ ವ್ಯಾಪ್ತಿಯಲ್ಲಿ 85, ಮಂಚೇನಹಳ್ಳಿ 66, ತಿಪ್ಪಗಾನಹಳ್ಳಿ 76, ಡಿ.ಪಾಳ್ಯ 52, ಹೊಸೂರು 54 ಹಾಗೂ ವಾಟದಹೊಸಹಳ್ಳಿ ವ್ಯಾಪ್ತಿಯಲ್ಲಿ 35 ಮಿ.ಮೀ ಮಳೆಯಾಗಿದೆ. ಒಟ್ಟಾರೆ ತಾಲೂಕಿನಲ್ಲಿ ಸರಾಸರಿ 87 ಮಿ.ಮೀ ಮಳೆಯಾಗಿದೆ. ಉತ್ತಮ ಮಳೆಯಾಗುತ್ತಿರುವುದು ರೈತರಿಗೆ ಖುಷಿ ತಂದಿದೆಯಾದರೂ ಜನ ಸಾಮಾನ್ಯರು ಮಾತ್ರ ಹೈರಾಣಾಗಿದ್ದಾರೆ.

ಭೋರ್ಗರೆಯುತ್ತಿದೆ ಉತ್ತರ ಪಿನಾಕಿನಿ: ಕಳೆದ 2021 ಅಕ್ಟೋಬರ್‌ನಲ್ಲಿ ಉಕ್ಕಿ ಹರಿದಿದ್ದ ಉತ್ತರ ಪಿನಾಕಿ ನದಿ ಇನ್ನಿಲ್ಲದ ಅವಾಂತರಗಳನ್ನು ಸೃಷ್ಠಿಸಿತ್ತು. ನದಿ ದಡದ ವಾಸಿಗಳನ್ನು ಸ್ಥಳಾಂತರಗೊಳಿಸಲಾಗಿತ್ತು. ಈಗ ಮುಂಗಾರಿನ ಆರಂಭದಲ್ಲೇ ಉತ್ತರ ಪಿನಾಕಿನಿ ಬೋರ್ಗರೆಯಲಾರಂಭಿಸಿದ್ದಾಳೆ. ಕಿಂಡಿ ಅಣೆಕಟ್ಟೆವರೆಗೆ ನೀರು ಹರಿದು ನಗರದ ಕಡೆಗೆ ಸಾಗುತ್ತಿದೆ. ನಗರದ ಮೂಲಕ ಹಾದು ಹೋಗುವ ಪಿನಾಕಿನಿ ಮುಂದಿನ ದಿನಗಳಲ್ಲಿ ಎಲ್ಲಿ ತನ್ನ ರೌದ್ರಾವತಾರ ತಾಳುತ್ತಾಳೋ ಎಂದು ನದಿ ದಡದ ವಾಸಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

ಒಂದೂ ಕಾರ್ಯರೂಪಕ್ಕೆ ಬರಲಿಲ್ಲ: ನೆರೆ ಸಂತ್ರಸ್ತರ ವಿಚಾರವಾಗಿ 2021ರ ಅ.25ರಂದು ಅಂದಿನ ನಗರಸಭೆಯ ಅಧ್ಯಕ್ಷರಾಗಿದ್ದ ಗಾಯತ್ರಿ ಬಸವರಾಜ್ ವಿಶೇಷ ಸಭೆ ಕರೆದು, ನಗರದಲ್ಲಿ ಒತ್ತುವರಿಗೆ ಒಳಗಾಗಿರುವ ರಾಜಕಾಲುವೆಗಳ ತೆರವು, ನದಿ ಪಾತ್ರದಲ್ಲಿ ವಾಸಿಸುವವರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವುದು ಸೇರಿ ಹಲವು ಮಹತ್ವದ ತೀರ್ಮಾನ ತೆಗೆದುಕೊಳ್ಳಲಾಗಿತ್ತು. ಶಾಸಕ ಎನ್.ಎಚ್.ಶಿವಶಂಕರರೆಡ್ಡಿ, ತಹಸೀಲ್ದಾರ್ ಸೇರಿ ವಿವಿಧ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು. ಆದರೆ ವರ್ಷ ಕಳೆದರೂ ಅಂದು ತೆಗೆದುಕೊಂಡ ನಿರ್ಣಯಗಳು ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ. ಈಗ ಉತ್ತರ ಪಿನಾಕಿನಿ ಮತ್ತೆ ಶಕ್ತಿ ತೋರಿಸಲಾರಂಭಿಸಿದ್ದಾಳೆ.

ಜನರು ಹೈರಾಣ:ಧಾರಾಕಾರ ಮಳೆಯಿಂದಾಗಿ ಜನರ ಓಡಾಟಕ್ಕೆ ಅಡ್ಡಿಯಾಗಿತ್ತು. ಗುಂಡಾಪುರ ಬಳಿ ಎರಡು ಮನೆಗಳು ಗೋಡೆ ಕುಸಿದಿದ್ದು, ನಗರದ ಅಭಿಲಾಶ್ ಲೇಔಟ್ ಬಡಾವಣೆ ರಸ್ತೆ ಹಾಗೂ ಚರಂಡಿ ಕೆಸರು ಗದ್ದೆಯಾದೆ. ಮುನೇಶ್ವರ ಬಡಾವಣೆ, ರೈಲ್ವೆ ಅಂಡರ್ ಪಾಸ್‌ನಲ್ಲಿ ನೀರು ತುಂಬಿದ್ದು, ಸಾರ್ವಜನಿಕರ ಸಂಚಾರಕ್ಕೆ ಅಡ್ಡಿ ಉಂಟಾಗಿದೆ. ಸ್ಥಳಕ್ಕೆ ನಗರಸಭೆ ಅಧ್ಯಕ್ಷ ರೂಪಾ ಅನಂತರಾಜು, ಪೌರಾಯುಕ್ತ ಗೀತಾ ನಗರದ ವಿವಿಧ ಬಡಾವಣೆಗಳಿಗೆ ತೆರಳಿ ಪರಿಶೀಲನೆ ನಡೆಸಿ ಅಧಿಕಾರಿಗಳಿಗೆ ತಾತ್ಕಾಲಿಕವಾಗಿ ದುರಸ್ತಿ ಕಾರ್ಯ ಮಾಡುವಂತೆ ಸೂಚಿಸಿದ್ದಾರೆ. ನಗರದ ನ್ಯಾಯಾಲಯ ಆವರಣದಲ್ಲಿ ಲೋಕೋಪಯೋಗಿ ಇಲಾಖೆ ಕೇವಲ ಹತ್ತು ದಿನಗಳ ಹಿಂದೆ ನಿರ್ಮಿಸಿರುವ ಪಿಟ್ ಕಳಪೆ ಕಾಮಗಾರಿಯ ಕಾರಣಕ್ಕೆ ಕುಸಿದು ಬಿದ್ದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net