

ನಾಪೋಕ್ಲು: ಗೌರಿ-ಗಣೇಶೋತ್ಸವದ ಅಂಗವಾಗಿ ಪಟ್ಟಣದ ವಿವಿಧ ಗಣೇಶ ಸೇವಾ ಸಮಿತಿಗಳ ವತಿಯಿಂದ ಪ್ರತಿಷ್ಠಾಪಿಸಲಾಗಿದ್ದ ಗೌರಿ-ಗಣೇಶ ಮೂರ್ತಿಗಳ ವಿಸರ್ಜನೋತ್ಸವ ಅತ್ಯಂತ ವಿಜೃಂಭಣೆಯಿಂದ ಬುಧವಾರ ನಡೆಯಿತು.
ಇಲ್ಲಿನ ಕಕ್ಕುಂದ ಕಾಡಿನ ವೆಂಕಟರಮಣ ದೇವಸ್ಥಾನದ ಗಣಪತಿ ಸೇವಾ ವತಿಯಿಂದ 19ನೇ ವರ್ಷದ ಅದ್ದೂರಿ ಗೌರಿ-ಗಣೇಶ ಉತ್ಸವ ಸಮಿತಿ ವತಿಯಿಂದ ಬುಧವಾರ ಮಧ್ಯಾಹ್ನ ಮಹಾ ಪೂಜೆಯ ಬಳಿಕ ಭಕ್ತರಿಗೆ ಅನ್ನಸಂತರ್ಪಣೆ ನಡೆಯಿತು. ಗದಗದ ಮಹಿಳಾ ತಂಡದಿಂದ ಡೊಳ್ಳು ಕುಣಿತ, ಉಡುಪಿಯ ಕೀಲು ಗೊಂಬೆಗಳು ಸೇರಿದಂತೆ ಇತರ ಕಲಾತಂಡದೊಂದಿಗೆ ಪಟ್ಟಣದಲ್ಲಿ ಅಲಂಕೃತ ಮಂಟಪದೊಂದಿಗೆ ಸಾಗಿದ ಮೆರವಣಿಗೆಯಲ್ಲಿ ಕಲಾತಂಡಗಳ ನೃತ್ಯ ಜನಮನ ರಂಜಿಸಿತು.
ಇಂದಿರಾನಗರದ ಗಣೇಶೋತ್ಸವ ಸೇವಾ ಸಮಿತಿ ವತಿಯಿಂದ 19ನೇ ವರ್ಷದ ಅದ್ದೂರಿ ಗೌರಿ-ಗಣೇಶ ಉತ್ಸವದಲ್ಲಿ ಸ್ಥಳೀಯರಿಂದ ಹಾಡುಗಾರಿಕೆ, ರವಿ ಬಳಗದಿಂದ ಸಂಗೀತ ಸಂಜೆ, ಸ್ಥಳೀಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು. ಬುಧವಾರ ಸಂಜೆ ಅತ್ಯಾಕರ್ಷಕ ಕೇರಳದ ಕೊಯ್ಕೋಡ್‌ನ ಲೈಟಿಂಗ್ಸ್ ವೇಷಭೂಷಣ ತೊಟ್ಟ ದೇವಕನ್ಯೆಯರಿಂದ ನೃತ್ಯ, ಶಬರಿಮಲೆ ಅಯ್ಯಪ್ಪನ ಬೃಹತ್ ಆಕಾರದ ಪ್ರತಿರೂಪದೊಂದಿಗೆ ಆಕರ್ಷಕ ಮಂಟಪ ಹಾಗೂ ವಿಶೇಷ ಪಟಾಕಿ ಚಿತ್ತಾರ ವಿಶೇಷವಾಗಿತ್ತು.
ಶ್ರೀ ಪೊನ್ನುಮುತ್ತಪ್ಪ ವಿನಾಯಕ ಸೇವಾ ಸಮಿತಿ ವತಿಯಿಂದ 15ನೇ ವರ್ಷದ ಅದ್ದೂರಿ ಗೌರಿ-ಗಣೇಶ ಉತ್ಸವದಲ್ಲಿ ಮಡಿಕೇರಿಯ ಈವೆಂಟ್ಸ್ ತಂಡದವರಿಂದ ಚಲಿಸುವ ಬೃಹತ್ ಗಾತ್ರದ ದೇವತೆಗಳ, ರಾಕ್ಷಸರ ಪ್ರತಿರೂಪದೊಂದಿಗೆ ಗಣೇಶನ ಕಥಾವಸ್ತು ಹಾಗೂ ಆಕರ್ಷಕ ಲೈಟಿಂಗ್ ಸೌಂಡ್ಸ್ ಪ್ರದರ್ಶನದೊಂದಿಗೆ ಸಿಡಿಮದ್ದು ಪ್ರದರ್ಶನ ಸಾರ್ವಜನಿಕರನ್ನು ರೋಮಾಂಚನಗೊಳಿಸಿತು.
ನಾಪೋಕ್ಲುನಾಡು ಗೌರಿ-ಗಣೇಶ ಸಮಿತಿ ವತಿಯಿಂದ ಭಗವತಿ ದೇವಾಲಯದಲ್ಲಿ ಪ್ರತಿಷ್ಠಾಪಿಸಲಾಗಿದ್ದ ಗೌರಿ-ಗಣೇಶನ ಮಂಟಪ ಹಾಗೂ ಶ್ರೀರಾಮ ಟ್ರಸ್ಟ್ ವತಿಯಿಂದ ಸ್ಥಾಪಿಸಲಾಗಿದ್ದ ಗಣೇಶ ಮೂರ್ತಿಯ ಮಂಟಪಗಳು ವಿಶೇಷ ಆಕರ್ಷಣೆಯೊಂದಿಗೆ ಸಾಗಿ ಮೆರವಣಿಗೆಯ ವೈಭವವನ್ನು ಹೆಚ್ಚಿಸಿತು.
ವಿವಿಧ ಸೇವಾ ಸಮಿತಿಗಳು ಪ್ರತಿಷ್ಠಾಪಿಸಲಾಗಿದ್ದ ಗಣೇಶ ಮೂರ್ತಿಗಳನ್ನು ಆಕರ್ಷಕ ಕಾಲ ತಂಡಗಳ ವೇಷಭೂಷಣ ನೃತ್ಯದ ಜೊತೆ ಸಾರ್ವಜನಿಕರು ಕುಣಿದು ಕುಪ್ಪಳಿಸುವುದರೊಂದಿಗೆ ಅದ್ದೂರಿ ಮೆರವಣಿಗೆಯಲ್ಲಿ, ಅಲಂಕೃತ ವಾಹನಗಳಲ್ಲಿ ಕೊಂಡೊಯ್ದು ಕಾವೇರಿ ನದಿಯಲ್ಲಿ ವಿಸರ್ಜಿಸಲಾಯಿತು.
ಪೊಲೀಸ್ ಇಲಾಖೆ ವತಿಯಿಂದ ಡಿಎಸ್ಪಿ ಮಹೇಶ್‌ಕುಮಾರ್, ವೃತ ನಿರೀಕ್ಷಕ ಅನುಪ್ ಮಾದಪ್ಪ, ನಾಪೋಕ್ಲು ಠಾಣಾಧಿಕಾರಿ ಮಂಜುನಾಥ್ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.