

ಚಳ್ಳಕೆರೆ: ಗೌರಸಮುದ್ರ-ಪುತ್ಲಾರಹಟ್ಟಿ ಗ್ರಾಮಗಳ ಮಧ್ಯೆ 20 ವರ್ಷಗಳಿಂದ ಇದ್ದ ದಾರಿ ಸಮಸ್ಯೆಯನ್ನು ತಹಶೀಲ್ದಾರ್ ಎನ್.ರಘುಮೂರ್ತಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ದಾರಿ ಒತ್ತುವರಿ ಮಾಡಿಕೊಂಡಿರುವ ಬಗ್ಗೆ ತಿಳಿದ ತಹಶೀಲ್ದಾರ್ ಖುದ್ದು ಭೇಟಿ ನೀಡಿ ಪರಿಶೀಲಿಸಿದರಲ್ಲದೆ, ಸರ್ವೆ ಇಲಾಖೆ ನೀಡಿದ ವರದಿಯಂತೆ ತೆರವಿಗೆ ಕ್ರಮ ಕೈಗೊಂಡರು.
ಸರ್ವೇ ನಂಬರ್ 66, 67, 41, 40ರ ಜಮೀನುದಾರರು ಈ ಮಾರ್ಗವಾಗಿ ತಿಮ್ಲಾಪುರಕ್ಕೆ ಹೋಗುವ ದಾರಿಗೆ ಅಡ್ಡಿಪಡಿಸಿದ್ದರು. ಪರಿಣಾಮ ಸಾರ್ವಜನಿಕರು ಕಳೆದ ಇಪ್ಪತ್ತು ವರ್ಷಗಳಿಂದ ದಾರಿ ಸಮಸ್ಯೆಯಿಂದ ತೊಂದರೆ ಅನುಭವಿಸುತ್ತಿದ್ದರು. ಗ್ರಾಮಸ್ಥರು ತಾಲೂಕು ಕಚೇರಿಗೆ ಮನವಿ ಸಲ್ಲಿಸಿದ್ದರು.
ಅದರಂತೆ ಸ್ಥಳ ಪರಿಶೀಲನೆ ನಡೆಸಿದ ತಹಶೀಲ್ದಾರ್ ಒತ್ತುವರಿದಾರರಿಂದ ದಾರಿ ತೆರವುಗೊಳಿಸಿದ್ದಾರೆ. ಅಲ್ಲದೇ, ಕೂಡಲೇ ಉದ್ಯೋಗ ಖಾತ್ರಿ ಯೋಜನೆಯಡಿ ಇಲ್ಲಿ ರಸ್ತೆ ಅಭಿವೃದ್ಧಿ ಕಾರ್ಯ ಕೈಗೊಳ್ಳಬೇಕು ಎಂದು ಪಿಡಿಒಗೆ ಸೂಚಿಸಿದರು.