ಗೌರಸಂದ್ರ ಮಾರಮ್ಮ ದೇವಿ ಜಾತ್ರೆ ಅದ್ದೂರಿ

Gowrasandra Maramma
Published on

ಚಿತ್ರದುರ್ಗ: ಹೊಳಲ್ಕೆರೆ ರಸ್ತೆಯ ಗೌರಸಂದ್ರ ಮಾರಮ್ಮ ದೇವಿಯ ಜಾತ್ರಾ ಮಹೋತ್ಸವ ಮಂಗಳವಾರ ಶ್ರದ್ಧಾಭಕ್ತಿಯ ಜೊತೆಗೆ ಅದ್ದೂರಿಯಾಗಿ ಜರುಗಿತು. ವಿಶೇಷ ಪುಷ್ಪಾಲಂಕಾರವೂ ಭಕ್ತರ ಗಮನ ಸೆಳೆಯಿತು.

ಮಹೋತ್ಸವದ ಅಂಗವಾಗಿ ದೇವಿಗೆ ಪೂಜೆ, ಹಿಟ್ಟಿನ ಆರತಿ ಸೇವೆ ನೆರವೇರಿತು. ಗರ್ಭಗುಡಿ ಹಾಗೂ ಉತ್ಸವ ಮೂರ್ತಿಗೂ ಆಭರಣ, ಸೇರಿ ವಿವಿಧ ವರ್ಣದ ವೈವಿಧ್ಯಮಯ ಸೀರೆಗಳಿಂದ ಅಲಂಕರಿಸಲಾಗಿತ್ತು.

ಬೆಳಗ್ಗೆಯಿಂದ ರಾತ್ರಿವರೆಗೂ ನಗರದ ವಿವಿಧ ಬಡಾವಣೆಗಳ ಭಕ್ತರು ದೇಗುಲಕ್ಕೆ ಭೇಟಿ ನೀಡಿ, ಸರದಿ ಸಾಲಿನಲ್ಲಿ ನಿಂತು ದೇವಿಯ ದರ್ಶನ ಪಡೆದರು. ಹೂವು, ಹಣ್ಣು, ಕಾಯಿ, ಅಕ್ಕಿ, ಬೇಳೆ, ಬೆಲ್ಲ ಮೀಸಲಿನೊಂದಿಗೆ ಭಕ್ತಿ ಸಮರ್ಪಿಸಿದರು.

ಚಳ್ಳಕೆರೆ ತಾಲೂಕಿನ ಗೌರಸಂದ್ರ ಮಾರಮ್ಮ ದೇವಿಯ ಜಾತ್ರೆಯಾದ 15 ದಿನಕ್ಕೆ ಜಿಲ್ಲಾ ಕೇಂದ್ರ ಚಿತ್ರದುರ್ಗದ ದೇಗುಲದಲ್ಲೂ ಒಂದು ವಾರ ಅಮ್ಮನ ಜಾತ್ರಾ ಮಹೋತ್ಸವ ನಡೆಯುವ ವಾಡಿಕೆ ಇದ್ದು, ಅದರಂತೆ ಸಂಭ್ರಮದಿಂದ ಆಚರಿಸುತ್ತ ಬರಲಾಗುತ್ತಿದೆ.

ಸೋಮವಾರ ರಾತ್ರಿ ಐತಿಹಾಸಿಕ ಚಂದ್ರವಳ್ಳಿ ಕೆರೆಯಲ್ಲಿ ಗಂಗಾಪೂಜೆ ಶಾಸ್ತ್ರೋಕ್ತವಾಗಿ ನಡೆಯಿತು. ಸೆ. 18ರ ರಾತ್ರಿ 8ಕ್ಕೆ ಅಗ್ನಿಕುಂಡ, 19ರ ಬೆಳಗ್ಗೆ 11ಕ್ಕೆ ಓಕಳಿ ಸೇವೆ ನೆರವೇರಲಿದೆ. ನಂತರ ಮುರುಘಾಮಠ ಮತ್ತು ಭಕ್ತರ ಮನೆಗಳಲ್ಲಿ ದೇವಿಗೆ ಪೂಜೆ ಸಲ್ಲಿಕೆಯಾಗಲಿದೆ ಎಂದು ಸಮಿತಿ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net