

ಚಿತ್ರದುರ್ಗ: ಪ್ರತಿ ವರ್ಷದಂತೆ ಈ ಬಾರಿಯೂ ಹೊಳಲ್ಕೆರೆ ರಸ್ತೆಯಲ್ಲಿ ಇರುವ ಗೌರಸಂದ್ರ ಮಾರಮ್ಮ ದೇವತೆಯ ಜಾತ್ರಾ ಮಹೋತ್ಸವ ಶಾಸ್ತ್ರೋಕ್ತವಾಗಿ ಪೂಜಾ ವಿಧಿ-ವಿಧಾನಗಳ ಸಮೇತ ಮಂಗಳವಾರ ಅದ್ದೂರಿಯಾಗಿ ಜರುಗಿತು.
ಬುಧವಾರ ರಾತ್ರಿ ನಡೆದ ಅಗ್ನಿಕುಂಡ ಮಹೋತ್ಸವಕ್ಕೆ ನೂರಾರು ಭಕ್ತರು ಸಾಕ್ಷಿಯಾದರು. ಜಾತ್ರೆ ಪ್ರಯುಕ್ತ ವಿವಿಧ ಬಗೆಯ ಪುಷ್ಪಗಳಿಂದ ದೇವಿಯ ಗರ್ಭಗುಡಿ ಮೂರ್ತಿ ಹಾಗೂ ಉತ್ಸವ ಮೂರ್ತಿಗೆ ವಿಶೇಷ ಪುಷ್ಪಾಲಂಕಾರ ಸೇವೆ, ಪೂಜೆ, ಹಿಟ್ಟಿನ ಆರತಿ ಸೇವೆ ನಡೆಯಿತು.
ಬೆಳಗ್ಗೆಯಿಂದ ರಾತ್ರಿವರೆಗೂ ನಗರದ ವಿವಿಧ ಬಡಾವಣೆಗಳ ಭಕ್ತರು ದೇಗುಲಕ್ಕೆ ಭೇಟಿ ನೀಡಿ ದರ್ಶನ ಪಡೆದು ಕಣ್ತುಂಬಿಕೊಂಡು ಪುನೀತರಾದರು. ಮಹಾಮಂಗಳಾರತಿ, ತೀರ್ಥ, ಪ್ರಸಾದ ಸ್ವೀಕರಿಸಿದರು. ಹೂವು, ಹಣ್ಣು, ಕಾಯಿ, ಅಕ್ಕಿ, ಬೇಳೆ, ಬೆಲ್ಲ ಮೀಸಲನ್ನು ಭಕ್ತಿಪೂರ್ವಕವಾಗಿ ಸಮರ್ಪಿಸಿದರು.
ಚಳ್ಳಕೆರೆ ತಾಲೂಕಿನ ಗೌರಸಂದ್ರ ಮಾರಮ್ಮ ದೇವಿಯ ಜಾತ್ರೆ ನಡೆದ 15 ದಿನಗಳ ನಂತರ ಚಿತ್ರದುರ್ಗದ ದೇಗುಲದಲ್ಲೂ ಒಂದು ವಾರ ವಿಶೇಷವಾಗಿ ಜಾತ್ರಾ ಮಹೋತ್ಸವ ಆಚರಿಸುತ್ತ ಬರಲಾಗಿದೆ.
ಈಗಾಗಲೇ ಮದುವಣಗಿತ್ತಿ ಶಾಸ್ತ್ರ, ಚಂದ್ರವಳ್ಳಿಯಲ್ಲಿ ಗಂಗಾಪೂಜೆಯೊಂದಿಗೆ ಜಾತ್ರೆಯೂ ಆರಂಭವಾಗಿದ್ದು, ಅ. 5ರ ಬೆಳಗ್ಗೆ 10ಕ್ಕೆ ಓಕಳಿ ಸೇವೆ, ನಂತರ ಮುರುಘಾಮಠ ಹಾಗೂ ವಿವಿಧ ಭಕ್ತರ ಮನೆಗಳಲ್ಲಿ ಪೂಜೆ ಸ್ವೀಕಾರ, ಗುಡಿದುಂಬುವ ಮೂಲಕ ಸಂಪನ್ನಗೊಳ್ಳಲಿದೆ ಎಂದು ದೇಗುಲದ ಅರ್ಚಕರು ತಿಳಿಸಿದ್ದಾರೆ.