

ಕೂಡ್ಲಿಗಿ: ಅಂಗನವಾಡಿ ನೌಕರರ ಕೆಲಸವನ್ನು ನಾಗರಿಕ ಸೇವೆಯಾಗಿ ಪರಿಗಣಿಸಿ ಕಾರ್ಯಕರ್ತೆಯರನ್ನು ಸಿ ಮತ್ತು ಸಹಾಯಕಿಯರನ್ನು ಡಿ ದರ್ಜೆಯ ನೌಕರರಾಗಿ ಪರಿಗಣಿಸಬೇಕು ಎಂದು ಆಗ್ರಹಿಸಿ ಪ್ರಧಾನಿ ನರೇಂದ್ರ ಮೋದಿಗೆ ಬರೆದ ಮನವಿಯನ್ನು ತಹಸೀಲ್ದಾರ್ ವಿ.ಕೆ.ನೇತ್ರಾವತಿಗೆ ಎಐಟಿಯುಸಿ ತಾಲೂಕು ಸಮಿತಿ ಪದಾಧಿಕಾರಿಗಳು ಸಲ್ಲಿಸಿದರು.
ಸಿಪಿಐ ಜಿಲ್ಲಾ ಕಾರ್ಯದರ್ಶಿ ಎಚ್.ವೀರಣ್ಣ ಮಾತನಾಡಿ, ನಿವೃತ್ತರಾದ ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಗೆ ಗ್ರಾಚ್ಯೂಟಿ ಪಾವತಿಸಬೇಕು. ರಾಜ್ಯ ಸರ್ಕಾರ ಗ್ರಾಚ್ಯೂಟಿ ಹಣವನ್ನು 2023ರಲ್ಲಿ ನಿವೃತ್ತಿಯಾದವರಿಗೆ ಮಾತ್ರ ನೀಡಿದ್ದು, ಇದು ಕಾಯ್ದೆಗೆ ವಿರುದ್ದವಾಗಿದೆ. 2011, 12 ನೇ ಸಾಲಿನಲ್ಲಿ ನಿವೃತ್ತಿಯಾದವರಿಗೂ ಗ್ರಾಚ್ಯೂಟಿ ನೀಡಬೇಕು. ಅಂಗನವಾಡಿ ಉದ್ಯೋಗಿಗಳಿಗೆ ಗೌರವಧನ ನೀಡುವ ಪದ್ಧತಿ ಕೈಬಿಟ್ಟು ಕನಿಷ್ಠ ವೇತನ ನಿಗದಿಪಡಿಸಬೇಕು. ಕೇಂದ್ರ ಸರ್ಕಾರ 2018 ರಿಂದಲೂ ಗೌರವಧನ ಹೆಚ್ಚಳ ಮಾಡಿಲ್ಲ ಎಂದು ಹೇಳಿದರು.
ಸಿಪಿಐ ತಾಲೂಕು ಕಾರ್ಯದರ್ಶಿ ಕರಿಯಪ್ಪ, ಪ್ರಮುಖರಾದ ರತ್ನಮ್ಮ, ದ್ರಾಕ್ಷಾಯಿಣಿ, ಕೆ.ಪದ್ಮಾ, ಸುಮಂಗಳ, ಕರಿಬಸಮ್ಮ, ಮೀನಾಕ್ಷಿ, ಶಕುಂತಲಾ, ಚೌಡಮ್ಮ, ಶಿವಲೀಲಾ, ಗಾಯಿತ್ರಿ, ಸುಮಲತಾ, ಸಾಕಮ್ಮ ಇದ್ದರು.