

ಜಿ.ಕೆ.ಸುಗ್ಗರಾಜು ನೆಲಮಂಗಲ
ಬೆಂಗಳೂರು ಉತ್ತರ ತಾಲೂಕು ಗೌಡಹಳ್ಳಿಯ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಉದ್ಭವಿಸಿರುವ ಸರ್ವರ್ ಸಮಸ್ಯೆ ಜನರನ್ನು ಹೈರಾಣಾಗಿಸಿದೆ.
ಕಲಿಕಾ ಪರವಾನಗಿ, ಚಾಲನಾ ಪರವಾನಗಿ, ತೆರಿಗೆ ಪಾವತಿಯಂಥ ಹಲವು ಕಾರ್ಯಗಳಿಗೆ ಬರುವ ಸಾರ್ವಜನಿಕರು, ವಾಹನ ಮಾಲೀಕರು, ಚಾಲಕರಿಗೆ ದೊಡ್ಡ ತಲೆನೋವಾಗಿದೆ.
ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ದಿನಕ್ಕೊಂದು ಸಮಸ್ಯೆ ಎದುರಾಗುತ್ತಿದೆ. ಒಂದೊಂದು ದಿನ ಸಂಪೂರ್ಣ ನೆಟ್‌ವರ್ಕ್ ಇರುವುದಿಲ್ಲ. ಮತ್ತೊಂದು ದಿನ ಸರ್ವರ್ ಡೌನ್ ಆಗಿರುತ್ತದೆ. ಇದರಿಂದಾಗಿ ಸಣ್ಣಪುಟ್ಟ ಕೆಲಸಗಳಿಗೆ ಇಡೀ ದಿನ ಕಾದು ನಿಲ್ಲುವ ಸ್ಥಿತಿ ನಿರ್ಮಾಣವಾಗಿದೆ.
ತ್ವರಿತ ಸೇವೆ, ಪಾರದರ್ಶಕ ಆಡಳಿತ ನೀಡುವ ಉದ್ದೇಶದಿಂದ ಸರ್ಕಾರ ಆರ್‌ಟಿಒದ ಎಲ್ಲ ಸೇವೆಗಳನ್ನು ಆನ್‌ಲೈನ್ ಮೂಲಕ ನೀಡಲಾಗುತ್ತಿದೆ. ಇದಕ್ಕಾಗಿ ಡಿಜಿಟಲ್ ಪೇಮೆಂಟ್ ವ್ಯವಸ್ಥೆಯನ್ನೂ ಹೊಂದಿದೆ. ಆದರೆ ಸರ್ವರ್‌ಡೌನ್ ಸಮಸ್ಯೆಯಿಂದ ಕೆಲಸಗಳು ಆಗದೆ ಜನಸಾಮಾನ್ಯರು ಮತ್ತು ವಾಹನ ಮಾಲೀಕರು ಆಕ್ರೋಶಗೊಳ್ಳುವುದು ಸಾಮಾನ್ಯವಾಗುತ್ತಿದೆ.
ಪ್ರತಿನಿತ್ಯ 400 ಮಂದಿ ಭೇಟಿ: ಎಲ್‌ಎಲ್‌ಆರ್, ಡಿಎಲ್, ಎಫ್‌ಸಿ, ದಾಖಲೆಗಳ ನವೀಕರಣ, ಆರ್‌ಸಿ ವರ್ಗಾವಣೆ, ಹೊಸ ವಾಹನ ನೋಂದಣಿ, ಲಾರಿಗಳ ಪರವಾನಗಿ, ವಾಹನಗಳ ತೆರಿಗೆ ಪಾವತಿ ಸೇರಿ ಅನೇಕ ಸೇವೆಗಳಿಗಾಗಿ ನಿತ್ಯ 400ಕ್ಕೂ ಹೆಚ್ಚು ಜನರು ಪ್ರಾದೇಶಿಕ ಸಾರಿಗೆ ಕಚೇರಿಗೆ ಭೇಟಿ ನೀಡುತ್ತಾರೆ. ಆದರೆ, ಯಾರೋಬ್ಬರ ಕೆಲಸ ಕಾರ್ಯಗಳು ನಿಗದಿತ ಅವಧಿಯಲ್ಲಿ ಆಗುತ್ತಿಲ್ಲ.
ನೆಟ್‌ವರ್ಕ್ ಸಮಸ್ಯೆ: ಗೌಡಹಳ್ಳಿ ಬಳಿಯ ಆರ್‌ಟಿಒ ಕಚೇರಿಯಲ್ಲಿ ಯಾವುದೇ ಕಂಪನಿಯ ನೆಟ್‌ವರ್ಕ್ ಪೋಲ್ ನಿರ್ಮಿಸಿಲ್ಲ. ಇದರಿಂದಾಗಿ ನೆಟ್‌ವರ್ಕ್ ಸಮಸ್ಯೆ ಉಂಟಾಗಿ ಕಚೇರಿಯಲ್ಲಿ ಕೆಲಸ ಕಾರ್ಯಗಳು ವಿಳಂಬವಾಗುತ್ತಿವೆ. ಕೆಲವೊಮ್ಮೆ ಮೊಬೈಲ್ ಸಂಪರ್ಕ ಕೂಡ ಸಿಗದೆ ಪರದಾಡುವ ಸ್ಥಿತಿ ಇಲ್ಲಿದೆ.
ಮಧ್ಯವರ್ತಿಗಳ ಹಾವಳಿ: ವಾಹನ ತೆರಿಗೆಯನ್ನು ರಿನೀವಲ್ ಮಾಡಿಸಿಕೊಳ್ಳಲು ಸಾರಿಗೆ ಕಚೇರಿಗೆ ನಾಲ್ಕೈದು ದಿನಗಳಿಂದ ಬರುತ್ತಿದ್ದರೂ ಕೆಲಸ ಆಗುತ್ತಿಲ್ಲ. ಸರ್ವರ್‌ಡೌನ್ ಎಂದು ಕಚೇರಿ ಸಿಬ್ಬಂದಿ ಬೇಜವಾಬ್ದಾರಿ ಉತ್ತರ ನೀಡುತ್ತಾರೆ. ಮಧ್ಯವರ್ತಿಗಳ ಮೂಲಕ ಬಂದಾಗ ಕೆಲಸಗಳು ಸಲೀಸಾಗಿ ಆಗುತ್ತವೆ. ಇಲ್ಲವಾದಲ್ಲಿ ಕಾಯುವಿಕೆ ಅನಿವಾರ್ಯ. ಸರ್ವರ್‌ಡೌನ್ ನೆಪದಲ್ಲಿ ಅಧಿಕಾರಿಗಳು ಜನರಿಂದ ಹಣ ಪೀಕುತ್ತಿದ್ದಾರೆ ಎಂದು ಹೆಸರು ಹೇಳಲು ಇಚ್ಛಿಸದ ಟ್ರಾನ್ಸ್‌ಪೋಟ್ ಕಂಪನಿ ಮಾಲೀಕರೊಬ್ಬರು ತಿಳಿಸಿದರು.
ಕೆ 2 ಚಲನ್‌ಗೆ ಒಂದೇ ಕೌಂಟರ್: ಕೆ2 ಚಲನ್ ಮೂಲಕ ನಗದು ಪಾವತಿಸಲು ಆರ್‌ಟಿಒ ಕಚೇರಿಯಲ್ಲಿ ಒಂದು ಕೌಂಟರ್ ವ್ಯವಸ್ಥೆ ಮಾಡಲಾಗಿದೆ. ಇದೂ ಕೂಡ ಸಮಸ್ಯೆಗೆ ಕಾರಣವಾಗಿದೆ. ನೆರ್ಟ್‌ವರ್ಕ್ ಇಲ್ಲ, ಸರ್ವರ್‌ಡೌನ್ ಎಂಬ ಸಬೂಬು ಸಾಮಾನ್ಯವಾಗುತ್ತಿದೆ ಎಂದು ಹೆಸರು ಹೇಳಲಿಚ್ಛಿಸದ ಮತ್ತೊಬ್ಬರು ದೂರಿದರು. ಆರ್‌ಟಿಒ ಕಚೇರಿಗೆ ಬರಲು ಸಮರ್ಪಕವಾದ ಬಸ್ ವ್ಯವಸ್ಥೆ ಇಲ್ಲದಾಗಿದೆ. ಕೂಡಲೇ ಮೇಲಧಿಕಾರಿಗಳು ಇತ್ತ ಗಮನಹರಿಸಿ ಕಚೇರಿಗೆ ಬಸ್ ವ್ಯವಸ್ಥೆ ಕಲ್ಪಿಸಬೇಕು. ಕೆ 2 ಚಲನ್ ಪಾವತಿಗೆ ಹೆಚ್ಚುವರಿ ಕೌಂಟರ್ ವ್ಯವಸ್ಥೆಗೊಳಿಸಬೇಕು ಎಂದು ಆಗ್ರಹಿಸಿದರು.
ಆರ್‌ಟಿಒದಲ್ಲಿ 15 ದಿನಗಳ ಹಿಂದೆ ಆಕಸ್ಮಿಕವಾಗಿ ಎಲೆಕ್ಟ್ರಿಕಲ್ ವಸ್ತುಗಳು ಸುಟ್ಟು ಸಮಸ್ಯೆ ಉಂಟಾಗಿತ್ತು. ಮೇಲಧಿಕಾರಿಗಳಿಗೆ ಈ ವಿಷಯ ತಿಳಿಸಿ, ಕೂಡಲೇ ದುರಸ್ತಿಗೊಳಿಸಲಾಗಿದೆ. ಬಸ್ ವ್ಯವಸ್ಥೆ ಕಲ್ಪಿಸಲು ಬಿಎಂಟಿಸಿ ವ್ಯವಸ್ಥಾಪಕರಿಗೆ ಪತ್ರ ಬರೆಯಲಾಗುವುದು. ಸಾರ್ವಜನಿಕರು ಅತಿಹೆಚ್ಚು ಇ-ಪೇಮೆಂಟ್ ಮಾಡುತ್ತಿದ್ದು, ಕೆಲವರು ಮಾತ್ರ ಚಲನ್ ಮೂಲಕ ವ್ಯವಹಾರ ಮಾಡುತ್ತಿದ್ದಾರೆ. ಕಚೇರಿ ಗ್ರಾಮೀಣ ಭಾಗದಲ್ಲಿರುವ ಕಾರ್ಯ ನೆಟ್‌ವರ್ಕ್ ಮತ್ತು ಸರ್ವರ್‌ಡೌನ್ ಆಗುವುದು ಸಾಮಾನ್ಯವಾಗಿದೆ. ಇದನ್ನೂ ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ. ಜಿ.ಎಸ್.ಗುರುಮೂರ್ತಿ, ಪ್ರಾದೇಶಿಕ ಸಾರಿಗೆ ಅಧಿಕಾರಿ