ಗೌಡಗೆರೆ ಗ್ರಾಮದಲ್ಲಿ ಅಡ್ಡಪಲ್ಲಕ್ಕಿ ಹಾಗೂ ಬಂಡಿ ಉತ್ಸವ

ಗೌಡಗೆರೆ ಗ್ರಾಮದಲ್ಲಿ ಅಡ್ಡಪಲ್ಲಕ್ಕಿ ಹಾಗೂ ಬಂಡಿ ಉತ್ಸವ
Published on

ಚನ್ನರಾಯಪಟ್ಟಣ : ತಾಲೂಕಿನ ಗೌಡಗೆರೆ ಗ್ರಾಮದಲ್ಲಿ ಶ್ರೀ ಶೆಟ್ಟಿಹಳ್ಳಮ್ಮ ದೇವಿಯ ಹಬ್ಬದ ಪ್ರಯುಕ್ತ ಅಡ್ಡಪಲ್ಲಕ್ಕಿ ಉತ್ಸವ ಹಾಗೂ ಬಂಡಿ ಉತ್ಸವ ಶನಿವಾರ ವಿಜೃಂಭಣೆಯಿಂದ ನಡೆಯಿತು.


ಹಿನ್ನೆಲೆಯಲ್ಲಿ ಗ್ರಾಮದ ಎಲ್ಲ ದೇಗುಲಗಳಿಗೂ ಹಸಿರು ಚಪ್ಪರ ಹಾಕಲಾಗಿದ್ದು ಬಾಳಿಕಂದು ಕಟ್ಟಿ ತಳಿರು-ತೋರಣಗಳಿಂದ ಸಿಂಗರಿಸಲಾಗಿತ್ತು.


ದೇವಿಗೆ ಒಡವೆ, ವಸ್ತ್ರ ಹಾಗೂ ವಿವಿಧ ಬಗೆಯ ಪುಷ್ಪಗಳಿಂದ ಅಲಂಕರಿಸಿದ್ದು ಮುಂಜಾನೆಯಿಂದಲೇ ವಿಶೇಷ ಪೂಜಾ ಕೈಂಕರ್ಯಗಳು ಪ್ರಾರಂಭಗೊಂಡು ಭಕ್ತರು ಹಣ್ಣು-ಕಾಯಿ ಅರ್ಪಿಸಿ ದೇವಿಯ ದರ್ಶನ ಪಡೆದು ಪುನೀತರಾದರು.


ಮಧ್ಯಾಹ್ನ ಸುಮಾರಿನಲ್ಲಿ ಎತ್ತಿನ ಬಂಡಿಗೆ ಬಾಳೆಕಂದು, ಕಬ್ಬಿನಗರಿ ಹಾಗೂ ಮಾವಿನ ಸೊಪ್ಪು ಕಟ್ಟಿ ಸಿಂಗರಿಸಲಾಯಿತು. ಜತೆಗೆ ಉತ್ಸವ ಮೂರ್ತಿಯನ್ನು ಒಡವೆ-ವಸ್ತ್ರಗಳಿಂದ ಅಲಂಕರಿಸಲಾಯಿತು.


ಹಸಿರು ಬಂಡಿ ಹಾಗೂ ದೇವಿಯ ಅಡ್ಡ ಪಲ್ಲಕ್ಕಿ ಉತ್ಸವ ಮಂಗಳವಾದ್ಯದೊಂದಿಗೆ ಪ್ರಾರಂಭಗೊಂಡು ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಾಗಿತು. ಭಕ್ತರು ಈಡುಗಾಯಿ ಹಾಕಿ ಹರಕೆ ಸಲ್ಲಿಸಿದರು.

ಹಸಿರು ಬಂಡಿಗೆ ಅನ್ನ ಬಲಿಶಾಂತಿ ಜರುಗಿತು. ಉತ್ಸವ ಪೂರ್ಣಗೊಂಡ ಬಳಿಕ ದೇವಿಗೆ ಮಹಾಮಂಗಳಾರತಿ ಬೆಳಗಿಸಲಾಯಿತು. ಪ್ರಸಾದ ವಿನಿಯೋಗ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net