ಗೋಹತ್ಯೆ ನಿಷೇಧ ಕಟ್ಟುನಿಟ್ಟಿನ ಜಾರಿ

dc meeting
Published on

ಬೀದರ್: ರಾಜ್ಯ ಸರ್ಕಾರ ನೂತನವಾಗಿ ಜಾರಿಗೆ ತಂದಿರುವ ಗೋಹತ್ಯೆ ನಿಷೇಧ ಕಾಯ್ದೆ ಕಟ್ಟುನಿಟ್ಟಾಗಿ ಜಾರಿಗೆ ತರಬೇಕು. ಈ ಕಾಯ್ದೆಯಲ್ಲಿನ ಎಲ್ಲ ಅಂಶಗಳ ಕುರಿತು ವ್ಯಾಪಕ ಜನಜಾಗೃತಿ ಮೂಡಿಸುವ ಕಾರ್ಯಕ್ರಮ ಸಹ ಹಮ್ಮಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ರಾಮಚಂದ್ರನ್ ಆರ್. ಅವರು ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ಜಿಲ್ಲಾ ಪ್ರಾಣಿ ದಯಾ ಸಂಘದ ಸಭೆಯಲ್ಲಿ ಮಾತನಾಡಿ, ನೂತನವಾಗಿ ಜಾರಿಗೆ ತಂದಿರುವ ಕಾಯ್ದೆ ಅನ್ವಯ ಹಸು, ಕರು, ಹೋರಿ ಎತ್ತು ಹಾಗೂ 13 ವರ್ಷದೊಳಗಿನ ಎಮ್ಮ್ಮೆ ಹತ್ಯೆ ಮಾಡುವುದನ್ನು ನಿಷೇಧಿಸಲಾಗಿದೆ. ಇದರಂತೆ ಅಗತ್ಯ ಕ್ರಮ ಕೈಗೊಳ್ಳಬೇಕು. ಕಾಯ್ದೆ ಪಾಲನೆ ಹಾಗೂ ಉಲ್ಲಂಘನೆ ಮಾಡಿದರೆ ಕೈಗೊಳ್ಳಬಹುದಾದ ಕ್ರಮದ ಬಗ್ಗೆ ಜಾಗೃತಿ ಮೂಡಿಸುವ ಕೆಲಸವೂ ಮಾಡಬೇಕೆಂದು ಹೇಳಿದರು.

ಗೋಹತ್ಯೆ ನಿಷೇಧ ಕಾಯ್ದೆ ಕರಡಿನ ಬಗ್ಗೆ ಹಾಗೂ ಈ ಕಾಯ್ದೆಯ ಅನುಷ್ಠಾನದಲ್ಲಿ ಪೊಲೀಸ್, ಸಾರಿಗೆ ಹಾಗೂ ಪಶುಪಾಲನಾ ಮತ್ತು ಪಶು ವೈದ್ಯಕೀಯ ಇಲಾಖೆಗಳ ಅಧಿಕಾರಿಗಳ ಜವಾಬ್ದಾರಿ ಕುರಿತು ಸಭೆಯಲ್ಲಿ ಸುದೀರ್ಘವಾಗಿ ಚರ್ಚೆ ನಡೆಯಿತು. ಕಾಯ್ದೆಯ ಜಾರಿಗೆ ಅನುಸರಿಸಬೇಕಾದ ಕ್ರಮ, ಪರಸ್ಪರ ಸಮನ್ವಯತೆ ಕುರಿತು ಮಾಹಿತಿ ನೀಡಲಾಯಿತು.

ಜಿಲ್ಲೆಯಲ್ಲಿ ಸದ್ಯಕ್ಕೆ 10 ಗೋಶಾಲೆಗಳಿದ್ದು, ಸುವರ್ಣ ಗೋತಳಿ ಸಂವರ್ಧನೆ, ಪಿಂಜಾರಾಪೋಲ ಇತರೆ ಗೋಶಾಲೆಗಳಿಗೆ ಸಹಾಯ ಅನುದಾನ ಕಾರ್ಯಕ್ರಮದಡಿಯಲ್ಲಿ ನಾಲ್ಕು ಗೋಶಾಲೆಗಳು ಮೂಲಭೂತ ಸೌಕರ್ಯಕ್ಕಾಗಿ ಅನುದಾನ ಪಡೆದಿವೆ. ಮೂಲಸೌಕರ್ಯ ಅನುದಾನ ಪಡೆಯದ ಇನ್ನುಳಿದ ಆರು ಗೋಶಾಲೆಗಳಿವೆ. ಇಲ್ಲಿನ ಜಾನುವಾರುಗಳ ನಿರ್ವಹಣೆ, ಮೇವು, ಔಷಧ, ನೀರು, ಇತ್ಯಾದಿಗೆ ತಗಲುವ ವೆಚ್ಚಕ್ಕಾಗಿ ಅನುದಾನ ನೀಡುವ ಬಗ್ಗೆ ಚರ್ಚಿಸಿ, 120 ದಿನಗಳಿಗೆ ತಗಲುವ ನಿರ್ವಹಣಾ ವೆಚ್ಚಕ್ಕೆ ಸರ್ಕಾರದ ಮಾರ್ಗಸೂಚಿಯ ಅನ್ವಯ ಈ ಗೋಶಾಲೆಗಳಿಗೆ ಅನುದಾನದ ನೀಡಲು ಸಭೆಯಲ್ಲಿ ನಿರ್ಣಯಿಸಲಾಯಿತು.

ಅಪರ ಜಿಲ್ಲಾಧಿಕಾರಿ ರುದ್ರೇಶ ಘಾಳಿ, ಸಹಾಯಕ ಆಯುಕ್ತೆ ಗರೀಮಾ ಪನ್ವಾರ್, ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ಉಪ ನಿರ್ದೇಶಕ ಡಾ. ಮಲ್ಲಿಕಾರ್ಜುನ ಹಂಚಿನಾಳ, ನಗರಸಭೆ ಎಇಇ ರಾಜಶೇಖರ ಮಠ, ಪ್ರಾಣಿದಯಾ ಸಂಘದ ಪದಾಧಿಕಾರಿಗಳಾದ ರಮೇಶ ದೇವಕತ್ತೆ, ಸಾರಿಗೆ ಇಲಾಖೆ ಅಧಿಕಾರಿಗಳು, ವಿವಿಧ ಗೋಶಾಲೆಗಳ ಪ್ರತಿನಿಧಿಗಳು, ಪಶುವೈದ್ಯಾಧಿಕಾರಿಗಳು ಇದ್ದರು.

ಶ್ರೀ ರಾಮಕೃಷ್ಣ ಆಶ್ರಮ
ಗೋಶಾಲೆಗೆ ಅನುದಾನ

ಬೀದರ್ ನ ಶಿವನಗರದಲ್ಲಿರುವ ಶ್ರೀ ರಾಮಕೃಷ್ಣ ವಿವೇಕಾನಂದ ಆಶ್ರಮ ಗೋ ಶಾಲೆಯಲ್ಲಿ ಸದ್ಯ 70 ಹಸುಗಳಿವೆ. ಗೋ ಶಾಲೆಗಳಿಗೆ ಸಹಾಯ ಅನುದಾನದ ಕಾರ್ಯಕ್ರಮದಲ್ಲಿ ನೀಡಿದ ಮಾರ್ಗಸೂಚಿಯನ್ವಯ ಅಗತ್ಯ ದಾಖಲಾತಿ ಹಾಗೂ ಷರತ್ತುಗಳನ್ನು ಪೂರೈಸಿರುವ ಕಾರಣ ಈ ಗೋಶಾಲೆಗೆ ಮೂಲಭೂತ ಸೌಕರ್ಯಕ್ಕಾಗಿ ಅನುದಾನ ಮಂಜೂರಿ ಮಾಡಲು ಸರ್ಕಾರಕ್ಕೆ ಶಿಫಾರಸ್ಸು ಮಾಡಲು ಸಭೆಯಲ್ಲಿ ನಿರ್ಧರಿಸಲಾಗಿದೆ.

ರೈತರು ಕೃಷಿ ಚಟುವಟಿಕೆಗೆ ಹಾಗೂ ಜಾನುವಾರುಗಳನ್ನು ಮಾರಾಟಕ್ಕಾಗಿ ಸಂತೆಗೆ ದನಗಳನ್ನು ಸಾಗಣೆ ಮಾಡುವುದಕ್ಕೆ ಯಾವುದೇ ಅಭ್ಯಂತರವಿಲ್ಲ. ಆದರೆ ಸಾಗಣೆಗಾಗಿ ಸರ್ಕಾರವು ಸೂಚಿಸಿದ ದಾಖಲಾತಿಗಳನ್ನು ಹೊಂದಿರುವುದು ಅವಶ್ಯಕತೆ ಇರುತ್ತದೆ. ಸಾಗಣೆಯ ಸಮಯದಲ್ಲಿ ವಾಹನದಲ್ಲಿ ಜಾನುವಾರುಗಳಿಗೆ ನಿಗದಿತ ಪ್ರಮಾಣದ ಸ್ಥಳವಕಾಶ ಇರಬೇಕು.| ರಾಮಚಂದ್ರನ್, ಜಿಲ್ಲಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net