ಗೋಹತ್ಯೆ ಖಂಡಿಸಿ ಕಮಲನಗರ ಬಂದ್

oplus_1048576
ಹತ್ಯೆಗೀಡಾದ ಗೋವನ್ನು ವಾಹನದಲ್ಲಿರಿಸಿ ಹಿಂದುಪರ ಕಾರ್ಯಕರ್ತರು, ಸಾರ್ವಜನಿಕರು ಕಮಲನಗರದಲ್ಲಿ ಮೆರವಣಿಗೆ ನಡೆಸಿದರು.
Published on

ಕಮಲನಗರ: ಪಟ್ಟಣ ಹೊರವಲಯದ ರಾಂಪುರ ರಸ್ತೆಯಲ್ಲಿರುವ ಸರ್ವೇ ನಂ.೮೬ರ ಹೊಲದ ಶೆಡ್‌ನಲ್ಲಿ ಗೋಹತ್ಯೆ ಮಾಡಿರುವುದನ್ನು ಖಂಡಿಸಿ ವಿವಿಧ ಹಿಂದುಪರ ಸಂಘಟನೆಗಳಿಂದ ದಿಢೀರ್ ಮಾರುಕಟ್ಟೆ ಬಂದ್ ಮಾಡಿ ಭಾನುವಾರ ಪ್ರತಿಭಟನೆ ನಡೆಯಿತು.

ಪ್ರತಿಭಟನಾಕಾರರು ಅಲ್ಲಮಪ್ರಭು ವೃತ್ತದಲ್ಲಿ ಟೈರ್‌ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ ನಂತರ ಬೈಕ್ ರ‍್ಯಾಲಿ ಮೂಲಕ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ ಪ್ರತಿಭಟನೆಗೆ ಸಹಕರಿಸುವಂತೆ ವ್ಯಾಪಾರಿಗಳಲ್ಲಿ ಮನವಿ ಮಾಡಿದರು. ನೋಡನೋಡುತ್ತಲೇ ಗೋಹತ್ಯೆ ವಿಷಯ ಎಲ್ಲರಿಗೂ ಗೊತ್ತಾಗಿ ಪರಿಸ್ಥಿತಿ ಕೈಮಿರುವ ಮೊದಲು ಪೊಲೀಸರು ಘಟನಾ ಸ್ಥಳಕ್ಕೆ ದೌಡಾಯಿಸಿ ಹತೋಟಿಗೆ ತರುವಲ್ಲಿ ಯಶಸ್ವಿಯಾದರು.

ಪಶು ವೈದ್ಯಾಧಿಕಾರಿ ಡಾ.ಸುರೇಶ ದಿನಕರ್ ಅವರು ಶೆಡ್‌ನಲ್ಲಿರುವ ಗೋವು ಮತ್ತು ಮಾಂಸದ ತುಂಡುಗಳನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆ ನಡೆಸಿದರು. ಘಟನೆಗೆ ಸಂಬಂಧಿಸಿದಂತೆ ಯಾಕತ್ ಅಲಿ (೪೬), ಸದ್ದಾಂ (೩೬), ರಿಯಾಜ್ (೬೧), ಹಾಗೂ ಉಮರ್ (೩೦) ಎಂಬುವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಸ್ಥಳಕ್ಕೆ ತಹಸೀಲ್ದಾರ್ ಅಮೀತಕುಮಾರ ಕುಲಕರ್ಣಿ, ಭಾಲ್ಕಿ ಡಿವೈಎಸ್‌ಪಿ ಶಿವಾನಂದ ಪವಾಡಶೆಟ್ಟಿ, ಸಿಪಿಐ ಅಡಿವೆಪ್ಪ ಬನ್ನಿ, ಪಿಎಸ್‌ಐ ಚಂದ್ರಶೇಖರ ನಿರ್ಣೆ ಭೇಟಿ ನೀಡಿ ಪರಿಸ್ಥಿತಿ ಬಿಗಡಾಯಿಸದಂತೆ ನೋಡಿಕೊಂಡರು.

ಬಂದ್ ಪ್ರತಿಭಟನೆ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಪಟ್ಟಣದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಸಹಾಯಕ ಆಯುಕ್ತ ಮಹ್ಮದ್ ಶಕೀಲ್ ಸಹ ಭೇಟಿ ನೀಡಿ ಪರಿಸ್ಥಿತಿಯ ಅವಲೋಕನ ನಡೆಸಿದರು.

ಶ್ರದ್ಧಾ ಭಕ್ತಿಯ ಮೆರವಣಿಗೆ: ಹತ್ಯೆಗೀಡಾದ ಗೋವಿನ ಮೆರವಣಿಗೆಯನ್ನು ಹಿಂದುಪರ ಕಾರ್ಯಕರ್ತರು, ಸಾರ್ವಜನಿಕರು ಅತ್ಯಂತ ಶ್ರದ್ಧಾ ಭಕ್ತಿಯಿಂದ ನಡೆಸಿದ ಬಳಿಕ ಅಂತ್ಯಕ್ರಿಯೆ ನೆರವೇರಿಸಿದರು. ರಾಂಪುರ ಕ್ರಾಸ್‌ನಿಂದ ಶುರುವಾದ ಮೆರವಣಿಗೆ ಡಾ.ಚನ್ನಬಸವ ಪಟ್ಟದ್ದೇವರ ವೃತ್ತ, ಅಲ್ಲಮಪ್ರಭು ವೃತ್ತ, ಪ್ರವಾಸಿ ಮಂದಿರ ಮಾರ್ಗವಾಗಿ ಬಸವೇಶ್ವರ ವೃತ್ತದ ಮೂಲಕ ಅಂತ್ಯಕ್ರಿಯೆ ಸ್ಥಳವಾದ ಸೈಯದ್‌ಬಾಷಾ ದರ್ಗಾ ಪಕ್ಕದವರೆಗೆ ನಡೆಯಿತು. ದಾರಿಯುದ್ದಕ್ಕೂ ಮೃತ ಗೋವಿಗೆ ಮಹಿಳೆಯರು ಪೂಜೆ ಸಲ್ಲಿಸಿ ಕಣ್ಣೀರ ಕೋಡಿ ಹರಿಸಿ ಮಮ್ಮಲ ಮರುಗಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net