ಗೋಶಾಲೆ ತೆರೆಯುವ ನಿರ್ಧಾರ ಕೈಬಿಟ್ಟಿದ್ದು ಸರಿಯಲ್ಲ

ex dcm eshwarappa
ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ
Published on

ಶಿವಮೊಗ್ಗ: ಗೋಶಾಲೆಗಳನ್ನು ಸ್ಥಾಪನೆ ಮಾಡುವುದಿಲ್ಲವೆಂಬ ನಿರ್ಣಯ ತೆಗೆದುಕೊಳ್ಳುವ ಮೂಲಕ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಹಿಂದು ಸಮಾಜದ ತಾಳ್ಮೆಯನ್ನು ಪರೀಕ್ಷೆ ಮಾಡುತ್ತಿದೆ. ತಕ್ಷಣವೇ ಸಚಿವ ಸಂಪುಟದಲ್ಲಿ ತೆಗೆದುಕೊಂಡ ತೀರ್ಮಾನವನ್ನು ಹಿಂಪಡೆಯಬೇಕು. ಇಲ್ಲದಿದ್ದರೆ ರಾಜ್ಯದಲ್ಲಿ ಏನೇ ಘಟನೆಗಳು ನಡೆದರೂ ಅದಕ್ಕೆ ಸರ್ಕಾರವೇ ಹೊಣೆ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಎಚ್ಚರಿಸಿದರು.

ಹಿಂದಿನ ಬಿಜೆಪಿ ಸರ್ಕಾರ ಪ್ರತಿ ಜಿಲ್ಲೆಗೊಂದು ಗೋಶಾಲೆ ಆರಂಭಿಸುವುದಾಗಿ ಘೋಷಣೆ ಮಾಡಿತ್ತು. 14 ಗೋಶಾಲೆಗಳನ್ನೂ ತೆರೆದಿತ್ತು. ಗುರುವಾರ ನಡೆದ ಸಂಪುಟ ಸಭೆಯಲ್ಲಿ ಉಳಿದ ಜಿಲ್ಲೆಗಳಲ್ಲಿ ಗೋಶಾಲೆ ನಿರ್ಮಾಣಕ್ಕೆ ತೀರ್ಮಾನ ತೆಗೆದುಕೊಳ್ಳುವರೆಂಬ ನಿರೀಕ್ಷೆ ಇತ್ತು. ಆದರೆ ಗೋವುಗಳು ಬಾರದಿರುವ ಕಾರಣ ಯಾವುದೇ ಹೊಸ ಗೋಶಾಲೆ ತೆರೆಯಲ್ಲ ಎಂಬ ನಿರ್ಧಾರಕ್ಕೆ ಬಂದಿರುವುದು ಸರಿಯಲ್ಲ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.

ಶಿವಮೊಗ್ಗದ ಮೂರ್ನಾಲ್ಕು ಕಡೆ ಗೋಶಾಲೆಗಳಿವೆ. ಜಾನುವಾರುಗಳಿಗೆ ಜಾಗದ ಕೊರತೆ ಎದುರಾಗಿದೆ. ಆದರೆ ಸಚಿವ ಎಚ್.ಕೆ.ಪಾಟೀಲ್ ಹೇಳಿಕೆ ಹಾಸ್ಪಾಸ್ಪದವಾಗಿದೆ. ಸರ್ಕಾರವೂ ಗೋಶಾಲೆಗಳನ್ನು ತೆರೆಯುತ್ತಿಲ್ಲ, ಬೇರೆಯವರಿಗೂ ಅವಕಾಶ ನೀಡುವುದಿಲ್ಲ ಎನ್ನುತ್ತಿದ್ದಾರೆ. ರಾಜ್ಯದಲ್ಲಿ ಹಲವೆಡೆ ಉರ್ದು ಶಾಲೆಗಳು, ಮದರಸಾಗಳಿಗೆ ಮಕ್ಕಳೇ ಇಲ್ಲ. ಹಾಗಂತ ಅವುಗಳನ್ನು ಸರ್ಕಾರ ಮುಚ್ಚುತ್ತದೆಯಾ ಎಂದು ಪ್ರಶ್ನಿಸಿದ ಅವರು, ಹಿಂದು ಸಮಾಜ ಏನೇ ಮಾಡಿದರೂ ತಡೆದುಕೊಳ್ಳುತ್ತದೆಂಬ ಭಾವನೆ ಸರ್ಕಾರಕ್ಕಿದೆ. ಆದರೆ ಇನ್ಮುಂದೆ ಹಿಂದು ಸಮಾಜ ಸುಮ್ಮನಿರಲ್ಲ ಎಂದು ನೇರವಾಗಿ ಎಚ್ಚರಿಸಿದರು.

ರಾಷ್ಟ್ರಭಕ್ತರ ಬಳಗದ ಎಸ್.ಎಂ.ಮಹಾಲಿಂಗ ಶಾಸ್ತ್ರಿ, ಎಂ.ಶಂಕರ್, ಎಸ್.ಜಿ.ಬಾಲು, ಉಮೇಶ್ ಆರಾಧ್ಯ, ಚನ್ನಬಸಪ್ಪ, ಜಾಧವ್, ವಾಗೇಶ್ ಮಠದ್, ಶಂಕರ್ ನಾಯ್ಕ, ಶಿವು, ಕುಬೇರಪ್ಪ ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net