

ಕಳಸ: ತಾಲೂಕಿನಾದ್ಯಂತ ಧಾರಾಕಾರ ಮಳೆಯಲ್ಲೂ ದೀಪಾವಳಿ ಹಬ್ಬವನ್ನು ಸಂಪ್ರದಾಯಬದ್ಧವಾಗಿ ಮತ್ತು ಸಡಗರದಿಂದ ಆಚರಿಸಲಾಯಿತು. ಮಳೆಯಿಂದಾಗಿ ಪಟಾಕಿ ವ್ಯಾಪಾರ ಇಲ್ಲದೆ ಮಾರಾಟಗಾರರು ನಷ್ಟ ಅನುಭವಿಸಿದರು.
ಮನೆ, ಅಂಗಡಿ, ಬ್ಯಾಂಕ್ ಇತರ ವ್ಯಾಪಾರ ಸ್ಥಳಗಳಲ್ಲಿ ಮಹಾಲಕ್ಷ್ಮೀ ಪೂಜೆ ನೆರವೇರಿಸಲಾಯಿತು. ಬಲಿಪಾಡ್ಯಮಿಯಂದು ಗೋಪೂಜೆ ಮತ್ತು ಬಲೀಂದ್ರ ಪೂಜೆ ನೆರವೇರಿಸಲಾಯಿತು. ಗೋವುಗಳನ್ನು ಸಿಂಗರಿಸಿ ಪೂಜಿಸಲಾಯಿತು. ಬಲೀಂದ್ರನನ್ನು ಸ್ಮರಿಸುವ ಪೂಜಾ ಕಾರ್ಯಕ್ರಮಗಳಂತೂ ಹಳ್ಳಿಗಳಲ್ಲಿ ವಿಶೇಷ ಕಳೆ ತಂದಿತ್ತು. ಮನೆಗಳಲ್ಲಿ ನಂಬಿಕೊಂಡು ಬಂದಿರುವ ದೈವ ದೇವರುಗಳಿಗೆ, ಮೃತಪಟ್ಟವರಿಗೆ ಪೂಜೆ ಸಲ್ಲಿಸಲಾಯಿತು.
ಹಬ್ಬದಲ್ಲಿ ಪಟಾಕಿ ಸಿಡಿಸುವುದಕ್ಕೆ ಮಳೆ ಅಡ್ಡಿಪಡಿಸಿತು. ಬಲಿಪಾಡ್ಯಮಿಯಂದು ನಿರಂತರವಾಗಿ ಮಳೆಯಾಗಿದ್ದರಿಂದ ಪಟಾಕಿ ಸಿಡಿಸಲು ಆಗಲಿಲ್ಲ. ಹೀಗಾಗಿ ಪಟಾಕಿ ಮಾರಾಟ ಮಳಿಗೆಗಳಲ್ಲಿ ವ್ಯಾಪಾರಕ್ಕೆ ಜನರು ಬರುತ್ತಿರಲಿಲ್ಲ. ಪಟ್ಟಣದ ಕೆಪಿಎಸ್ ಕ್ರೀಡಾಂಗಣದಲ್ಲಿ ತೆರೆದಿದ್ದ ಪಟಾಕಿ ಮಳಿಗೆಳಲ್ಲಿ ಪಟಾಕಿ ವ್ಯಾಪಾರ ಗಣನೀಯವಾಗಿ ಕುಸಿಯಿತು. ಲಕ್ಷಾಂತರ ರೂಪಾಯಿ ಮೌಲ್ಯದ ಪಟಾಕಿಗಳನ್ನು ತಂದಿದ್ದೆವು. ಆದರೆ ಮಳೆಯಿಂದಾಗಿ ನಿರೀಕ್ಷೆಯ ಶೇ.40ರಷ್ಟೂ ಮಾರಾಟ ಆಗಿಲ್ಲ. ಈ ವರ್ಷ ಭಾರಿ ನಷ್ಟವಾಗಿದೆ ಎಂದು ಸ್ಥಳೀಯ ಪಟಾಕಿ ವ್ಯಾಪಾರಿಯೊಬ್ಬರು ಅಳಲು ತೋಡಿಕೊಂಡರು.