ಗೋವಾ ಪ್ರವಾಸ ಮುಗಿಸಿ ಊರಿಗೆ ಮರಳುತ್ತಿದ್ದವರು ಸಾವು

07
Published on

ಕೊರಟಗೆರೆ: ಕಾರು ಮತ್ತು ಲಾರಿ ನಡುವೆ ಸಂಭವಿಸಿದ ಭೀಕರ ಡಿಕ್ಕಿಯಲ್ಲಿ ಯುವಕರಿಬ್ಬರು ದುರ್ಮರಣಕ್ಕೀಡಾಗಿದ್ದಾರೆ. ಗೋವಾ ಪ್ರವಾಸ ಮುಗಿಸಿ ಊರಿಗೆ ಹಿಂದಿರುಗುತ್ತಿದ್ದ ವೇಳೆ ಸೋಮವಾರ ಬೆಳಗಿನ ಜಾವ 3.10ರ ಸಮಯದಲ್ಲಿ ತಾಲೂಕಿನ ಕಾಮೇನಹಳ್ಳಿಯ ಬಳಿ ತುಮಕೂರು&-ಮಧುಗಿರಿ ಮುಖ್ಯರಸ್ತೆಯ ಕಂಭದಹಳ್ಳಿ ಬಳಿ ಲಾರಿಗೆ ಡಿಕ್ಕಿ ಹೊಡೆದಿದ್ದು, ಕಾರಿನಲ್ಲಿದ್ದ ಹರ್ಷಿತ್​ (24) ಹಾಗೂ ಪ್ರವಿಣ್​ (21) ಸ್ಥಳದಲ್ಲೇ ಮೃತಪಟ್ಟಿದ್ದಾರೆ.

10 ಕಿಮೀ ಇತ್ತು: ಶಿರಾ ನಗರದಲ್ಲಿ ಸ್ನೇಹಿತನನ್ನು ಇಳಿಸಿ ಊರಿಗೆ ತಲುಪುವ ಲೆಕ್ಕಾಚಾರದಲ್ಲಿದ್ದ ಹರ್ಷಿತ್​ ಹಾಗೂ ಪ್ರವಿಣ್​ ಮೇಲೆ ಕಂಭದಹಳ್ಳಿ ಬಳಿ ಕಾದುಕುಳಿತಿದ್ದ ಜವರಾಯ ಅಟ್ಟಹಾಸ ಮೆರೆದಿದ್ದಾನೆ. ಹೊಳವನಹಳ್ಳಿ 10 ಕಿಮೀ ದೂರವಿದ್ದು, ಅಷ್ಟರಲ್ಲಿ ಎದುರಿಗೆ ಬಂದ ಲಾರಿಗೆ ನಿದ್ರೆ ಮಂಪರಿನಲ್ಲಿ ಡಿಕ್ಕಿ ಹೊಡೆದಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಕುಟುಂಬದ ಆಕ್ರಂದನ ಮುಗಿಲುಮುಟ್ಟಿತ್ತು. ಶಿರಾ ನಗರದಲ್ಲಿ ಇಳಿದ ಸ್ನೇಹಿತ ಬೆಳಗ್ಗೆ ಎದ್ದು ಹೋಗುವಂತೆ ಹೇಳಿದರೂ ಇನ್ನೊಂದು ಗಂಟೆಯಲ್ಲಿ ಊರು ತಲುಪಿತ್ತೇವೆಂದು ಹೇಳಿ ಹೊರಟಿದ್ದರು. ಮರಣೋತ್ತರ ಪರೀೆ ಬಳಿಕ ಮೃತರ ಪಾರ್ಥಿವ ಶರೀರರವನ್ನು ಕುಟುಂಬದವರಿಗೆ ನೀಡಿದ್ದು, ಸಂಜೆ ವೇಳೆ ಗ್ರಾಮದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು. ಕೊರಟಗೆರೆ ಪಿಎಸ್​ಐ ಚೇತನ್​ಕುಮಾರ್​ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಲಾರಿ ಚಾಲಕನನ್ನು ಬಂಧಿಸಲಾಗಿದೆ.

ನಾಲೆಗೆ ಬಿದ್ದಿದ್ದ ವ್ಯಕ್ತಿಯ ಶವ ಪತ್ತೆ

ತಿಪಟೂರು: ಬೈಕ್​ ಸಮೇತ ಹೇಮಾವತಿ ನಾಲೆಗೆ ಬಿದ್ದಿದ್ದ ವ್ಯಕ್ತಿಯ ಶವ ಮೂರು ದಿನಗಳ ಬಳಿಕ ಪತ್ತೆಯಾಗಿದೆ. ತಾಲೂಕಿನ ಕೆ.ಬಿ.ಕ್ರಾಸ್​ನ ಅಬೀಬ್​ಉಲ್ಲಾಖಾನ್​ (33) ಮೃತ. ಕುಂದೂರು ಬಳಿ ವ್ಯಕ್ತಿ ಹೇಮಾವತಿ ನಾಲೆಗೆ ಬಿದ್ದಿರುವ ಕುರಿತು ಸ್ಥಳಿಯರು ಕೆ.ಬಿ.ಕ್ರಾಸ್​ ಠಾಣೆಗೆ ಮಾಹಿತಿ ನೀಡಿದ್ದರು. ಸ್ಥಳಕ್ಕಾಗಮಿಸಿದ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ, ಈಜುಗಾರರ ತಂಡ ಬೋಟ್​ ಸಹಾಯದಿಂದ ಮೂರು ದಿನಗಳಿಂದ ಹುಡುಕಾಟ ನಡೆಸಿದರೂ ಪತ್ತೆಯಾಗಿರಲಿಲ್ಲ. ಭಾನುವಾರ ಹೇಮಾವತಿ ನಾಲೆಯಿಂದ 28 ಕಿ.ಮೀ ದೂರದ ಸೋಮಲಾಪುರದ ಬಳಿ ಶವ ಪತ್ತೆಯಾಗಿದೆ. ಜ.2ರಂದು ಹಬೀಬುಲ್ಲಾಖಾನ್​ ನಾಲೆಗೆ ಬಿದ್ದಿದ್ದರು ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net