ಗೋರನಳ್ಳಿ ಬಳಿ ಯಡಿಯೂರಪ್ಪ ಬಡಾವಣೆ

babu wali new
Published on

ಬೀದರ್: ಬೀದರ್ ಹೊರವಲಯದ ಗೋರನಳ್ಳಿ ಹತ್ತಿರ 32 ಎಕರೆಯಲ್ಲಿ ನಿರ್ಮಾಣವಾಗಿರುವ ಎರಡು ವಸತಿ ಯೋಜನೆಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಹೆಸರಿಡಲು ನಿರ್ಣಯಿಸಲಾಗಿದೆ ಎಂದು ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದ (ಬಿಡಿಎ) ನೂತನ ಅಧ್ಯಕ್ಷ ಬಾಬು ವಾಲಿ ತಿಳಿಸಿದ್ದಾರೆ.

ಗೋರನಳ್ಳಿಯ ಸರ್ವೆ ನಂ.22/2 ರಲ್ಲಿ 14.35 ಎಕರೆ ಮತ್ತು ಸರ್ವೆ ನಂ. 21/1ರಲ್ಲಿ 17.20 ಎಕರೆ ಜಾಗದಲ್ಲಿ ಪ್ರಾಧಿಕಾರದ ಜನವಸತಿ ಯೋಜನೆ ಕಾರ್ಯ ನಡೆದಿದೆ. ಇದರಲ್ಲಿ ಖಾಸಗಿಯವರ ಅರ್ಧ ಪಾಲಿದ್ದು, ಪ್ರಾಧಿಕಾರವೇ ಇದನ್ನು ಅಭಿವೃದ್ಧಿಪಡಿಸುವ ಕೆಲಸ ಮಾಡುತ್ತಿದೆ. ಶೀಘ್ರವೇ ಇಲ್ಲಿ ನಿವೇಶನ ಹಂಚಿಕೆ ನಡೆಯಲಿದೆ. ಸೋಮವಾರ ನನ್ನ ಅಧ್ಯಕ್ಷತೆಯಲ್ಲಿ ಜರುಗಿದ ಪ್ರಾಧಿಕಾರದ ಮೊದಲ ಸಭೆಯಲ್ಲಿ ಈ ಬಡಾವಣೆಗೆ ಯಡಿಯೂರಪ್ಪ ಅವರ ಹೆಸರಿಡುವ ನಿರ್ಣಯ ಕೈಗೊಳ್ಳಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಪ್ರಾಧಿಕಾರದಿಂದ ಅನುಮೋದನೆಗೊಂಡ ನಗರದ ಮಧ್ಯೆ ಭಾಗದಲ್ಲಿಯ ಖಾಸಗಿ ಬಡಾವಣೆಗಳಲ್ಲಿ ಕಾಯ್ದಿರಿಸಿದ ನಾಗರಿಕ ಸೌಲಭ್ಯ ನಿವೇಶನಗಳಲ್ಲಿ (ಸಿಎ ಸೈಟ್ ನಲ್ಲಿ) ಪ್ರಾಧಿಕಾರಕ್ಕೆ ಮಾಸಿಕ ಆದಾಯ ಬರುವಂತೆ ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಲು ನಿರ್ಧರಿಸಲಾಗಿದೆ. ಪ್ರಾಧಿಕಾರದಿಂದ ಅನುಮೋದನೆಗೊಂಡ 14 ಪಾಕ್೯ಗಳನ್ನು ನಗರಸಭೆಗೆ ಹಸ್ತಾಂತರಿಸಿ ಮಾದರಿಯಾಗಿ ಅಭಿವೃದ್ಧಿಪಡಿಸಲು ತೀರ್ಮಾನಿಸಲಾಗಿದೆ. ಪಾಕ್೯ಗಳಿಗೆ ಮಹಾಪುರುಷರ, ಗಣ್ಯರ, ದೇಶಕ್ಕೆ ಮಹಾನ್ ಸೇವೆ ಸಲ್ಲಿಸಿದ ಮಹಾಪುರುಷರ ಹೆಸರಿಡಲಾಗುವುದು. ಈವರೆಗೆ ಪ್ರಾಧಿಕಾರವು 64 ಸಿಎ ಸೈಟ್ ಹಂಚಿಕೆ ಮಾಡಿದೆ. ಇನ್ನೂ 30 ಸಿಎ ಸೈಟ್ ಲಭ್ಯವಿದ್ದು, ನಿಯಮದ ಪ್ರಕಾರ ಹಂಚಿಕೆಗೆ ಕ್ರಮ ಕೈಗೊಳ್ಳುವುದಾಗಿ ಎಂದರು.

1988ರಲ್ಲಿ ಪ್ರಾಧಿಕಾರ ರಚನೆಯಾಗಿದೆ. ಅಂದಿನಿಂದ ಈವರೆಗೆ ಕೇವಲ 2 ಬಡಾವಣೆ ರಚಿಸಲಾಗಿದೆ. ನಗರದ ಹೊರವಲಯದಲ್ಲಿ 25 ಅಥವಾ 50 ಎಕರೆ ಜಾಗ ಪಡೆದು ಹೊಸ ಲೇ ಔಟ್ ನಿರ್ಮಿಸುವ ಪ್ರಯತ್ನ ನಡೆದಿದೆ. ಬೀದರ್ ನಗರಕ್ಕೆ ಸೇರುವ ವಿವಿಧೆಡೆಯ ಐದು ಪ್ರಮುಖ ಸರಹದ್ದುಗಳಲ್ಲಿ ಪ್ರಾಧಿಕಾರದಿಂದ ಸ್ವಾಗತ ಕಮಾನು ನಿರ್ಮಿಸಲಾಗುತ್ತಿದೆ. ಜನರಿಗೆ ಅನುಕೂಲ ಮಾಡಿಕೊಡುವುದೇ ಪ್ರಾಧಿಕಾರದ ಕೆಲಸ. ಈ ದಿಸೆಯಲ್ಲಿ ಪ್ರಾಧಿಕಾರಕ್ಕೆ ಹೊಸ ರೂಪ ನೀಡಿ ಜನಸ್ನೇಹಿ ಮಾಡಲಾಗುವುದು. ಎಲ್ಲ ದಾಖಲಾತಿ ಹೊಂದಿದ್ದರೆ ಕೆಲಸ ಕೂಡಲೇ ಮಾಡಿಕೊಡಲಾಗುವುದು. ಲೇಔಟ್ ಮಾಡುವವರಿಗೆ ಅನುಕೂಲವಾಗಲು ಶೀಘ್ರ ಡೆವಲಪರ್ ಮೀಟ್ ಆಯೋಜಿಸುವುದಾಗಿ ಹೇಳಿದರು. ಬಿಜೆಪಿ ನಗರಾಧ್ಯಕ್ಷ ಹಣಮಂತ ಬುಳ್ಳಾ ಇದ್ದರು.

ನಿಯಮಬಾಹಿರವಿದ್ದರೆ ಕ್ರಮ
ನಗರದ ವಿವಿಧ ಬಡಾವಣೆಗಳಲ್ಲಿನ ಪ್ರಾಧಿಕಾರದಿಂದ ಅನುಮೋದನೆಗೊಂಡ ಪಾಕ್೯ ಹಾಗೂ ಸಿಎ ಸೈಟ್ ಜಾಗ ಕಬಳಿಕೆ ಸಂಬಂಧ ಸರ್ವೆ ನಡೆಸಲು ಸೂಚಿಸಲಾಗಿದೆ. ಇಲ್ಲಿ 114 ಲೇಔಟ್ ಗಳಿವೆ. ಮೂಲ ಉದ್ದೇಶಕ್ಕೆ ಇರಿಸಿದ ಜಾಗ ಅದಕ್ಕಾಗಿಯೇ ಬಳಕೆಯಾಗದಿದ್ದರೆ ಕ್ರಮ ಅನಿವಾರ್ಯ ಎಂದರು. ಈ ಹಿಂದೆ ಪ್ರಾಧಿಕಾರದಿಂದ ಅಭಿವೃದ್ಧಿಪಡಿಸಲು ನೀಡಿದ ಅನುಮೋದಿತ ಕರಡು ವಿನ್ಯಾಸಗಳಲ್ಲಿ ನಿಯಮಬಾಹಿರ ಸ್ಥಳೀಯ ಸಂಸ್ಥೆಯಿಂದ(ಗ್ರಾಪಂನಿಂದ) ಖಾತೆ ಪಡೆದು ನೋಂದಣಿಯಾಗಿರುವ ನಿವೇಶನ/ವಿನ್ಯಾಸದ ಮಾಲೀಕರ ವಿರುದ್ಧ ಕ್ರಮ ಜರುಗಿಸಲಾಗುವುದು. ಭೂ ಪರಿವರ್ತನೆ ಹೊಂದದೆ, ಪ್ರಾಧಿಕಾರದಿಂದ ವಿನ್ಯಾಸ ಅನುಮೋದನೆ ಪಡೆಯದೆ ಹಾಗೂ ಕೃಷಿಗಾಗಿ ಕಾದಿರಿಸಿದ ಜಮೀನುಗಳಲ್ಲಿ ಸ್ಥಳೀಯ ಸಂಸ್ಥೆಯಿಂದ ನಿಯಮಬಾಹಿರವಾಗಿ ಖಾತೆ, ಮುಟೇಷನ್ ಪಡೆದು ನೋಂದಣಿ ಮಾಡುತ್ತಿರುವ ಪ್ರಾಧಿಕಾರದ ವ್ಯಾಪ್ತಿಗೊಳಪಡುವ ಅನಧಿಕೃತ ಬಡಾವಣೆ ತಡೆಗಟ್ಟಲು ಕ್ರಮ ಜರುಗಿಸಲಾಗುವುದು ಎಂದರು.

ಈ ಭಾಗಕ್ಕೆ ಯಡಿಯೂರಪ್ಪ ಅವರ ಕೊಡುಗೆ ಅಪಾರವಿದೆ. ಹೈಕ ಭಾಗಕ್ಕೆ ಕಲ್ಯಾಣ ಕರ್ನಾಟಕ, ರಂಗಮಂದಿರಕ್ಕೆ ಡಾ.ಚನ್ನಬಸವ ಪಟ್ಟದ್ದೇವರು ಹೆಸರಿಟ್ಟಿದ್ದಾರೆ. ನೂತನ ಅನುಭವ ಮಂಟಪಕ್ಕೆ 500 ಕೋಟಿ ರೂ. ಕಲ್ಪಿಸಿ ಕಾಮಗಾರಿಗೆ ಚಾಲನೆ ನೀಡುತ್ತಿದ್ದಾರೆ. ಬಿಡಿಎ ಅಧ್ಯಕ್ಷನಾಗಿ ನಡೆಸಿದ ಮೊದಲ ಸಭೆಯಲ್ಲೇ ಬಡಾವಣೆಗೆ ಅವರ ಹೆಸರಿಡುವ ನಿರ್ಣಯ ಕೈಗೊಂಡಿರುವುದು ಖುಷಿ ತಂದಿದೆ.| ಬಾಬು ವಾಲಿ, ಬಿಡಿಎ ಅಧ್ಯಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net