

ಹಾಸನ: ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಭೂಸ್ವಾಧೀನ ಕೌಶಿಕ ಗ್ರಾಮದ ಸರ್ವೇ ನಂ.328 ಮತ್ತು 329ರನ್ನು ಪಡಿಸಿಕೊಂಡಿರುವ ಗೋಮಾಳ ಜಾಗವನ್ನು ಗ್ರಾಮಕ್ಕೆ ಬಿಟ್ಟುಕೊಡುವಂತೆ ಒತ್ತಾಯಿಸಿ ಗ್ರಾಮಸ್ಥರು ಕೈಗಾರಿಕಾ ವಲಯದಲ್ಲಿ ಅನಿರ್ಧಿಷ್ಟಾವಧಿ ಧರಣಿ ಮುಂದುವೆರೆಸಿದ್ದಾರೆ.
ಈ ವೇಳೆ ಜೆಡಿಎಸ್ ತಾಲ್ಲೂಕು ಅಧ್ಯಕ್ಷ, ವಕೀಲ ಎಸ್.ದ್ಯಾವೇಗೌಡ ಅವರು ಮಾತನಾಡಿ, ಸ.ನಂ.328 ಹಾಗು 329 ರಲ್ಲಿ ಒಟ್ಟು 71.23 ಎಕರೆ ಜಮೀನನ್ನು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಗೆ ಕೈಗಾರಿಕೆ ಪ್ರದೇಶ ಸ್ಥಾಪನೆಗೆ ಭೂ ಸ್ವಾಧೀನ ಮಾಡಿಕೊಳ್ಳಲಾಗಿದೆ. ಕೈಗಾರಿಕೆ ಸ್ಥಾಪನೆಗೆ ಗೋಮಾಳ ಜಾಗವನ್ನು ಬಳಸಿಕೊಳ್ಳುತ್ತಿರುವುದರಿಂದ ಜಾನುವಾರುಗಳು ಮೇಯಲು ಜಾಗವೇ ಇಲ್ಲದಂತಾಗುತ್ತದೆ. ಆದ್ದರಿಂದ ಸ್ವಧೀನ ಪಡಿಸಿಕೊಂಡಿರುವ ಭೂಮಿಯನ್ನು ರೈತರಿಗೆ ಬಿಟ್ಟುಕೊಡಬೇಕು. ಇಲ್ಲದಿದ್ದರೆ ನ್ಯಾಯ ಸಿಗುವವರೆಗೂ ಅನಿರ್ಧಿಷ್ಟಾವಧಿ ಧರಣಿ ನಡೆಸುವುದಾಗಿ ಎಚ್ಚರಿಸಿದರು.
ಊರಿನ ಅನುಕೂಲಕ್ಕಾಗಿ ಜಾಗವನ್ನು ಕೈಗಾರಿಕಾ ಸ್ಥಾಪನೆ ಮಾಡಲು ಸ್ವಾಧೀನ ಪಡಿಸಿಕೊಂಡಿರುವುದು ಖಂಡನೀಯ. ಈ ಜಾಗದಲ್ಲಿ ಗ್ರಾಮಸ್ಥರು ವಸತಿ ಬಡಾವಣೆ ನಿರ್ಮಿಸಿಕೊಂಡು ವಾಸವಾಗಿದ್ದಾರೆ. ಈ ಹಿಂದೆ ಹಲವು ಬಾರಿ ಮನವಿ ಸಂಬಂಧಪಟ್ಟ ಸಚಿವರಿಗೆ ಹಾಗು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಕ್ರಮಕೈಗೊಂಡಿಲ್ಲ. ಈಗಲಾದರೂ ಜಿಲ್ಲಾಧಿಕಾರಿ ಕೂಡಲೇ ಕ್ರಮ ತೆಗೆದುಕೊಳ್ಳದಿದ್ದರೆ ಜಾನುವಾರುಗಳ ಸಮೇತ ಜಿಲ್ಲಾಧಿಕಾರಿ ಕಚೇರಿಯ ಮುಂದೆ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ತಿಳಿಸಿದರು.
ಕೌಶಿಕ ಗ್ರಾಮದ ರಂಗಸ್ವಾಮಿ, ಚಂದ್ರಣ್ಣ, ಪ್ರಭು, ಹನುಮಂತೇಗೌಡ, ನರಸಿಂಹ, ಪದ್ಮಮ್ಮ, ಸುಸೀಲಮ್ಮ, ರಾಧಾ, ಗೋಪಿನಾಥ್ ಹಾಜರಿದ್ದರು.