

ಪಾಂಡವಪುರ: ತಾಲೂಕಿನ ಹೊರವಲಯದಲ್ಲಿರುವ ಗೋಮಾಳವನ್ನು ಅತಿಕ್ರಮಿಸಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಹಾಗೂ ಈ ಭೂಮಿಯನ್ನು ಅರಣ್ಯೀಕರಣಗೊಳಿಸಬಾರದು ಎಂದು ಆಗ್ರಹಿಸಿ ತಾಲೂಕಿನ ಆನುವಾಳು ಗ್ರಾಮಸ್ಥರು ಮಂಗಳವಾರ ಪ್ರತಿಭಟನೆ ನಡೆಸಿದರು.
ಗ್ರಾಮದ ಹೊರವಲಯದಲ್ಲಿರುವ ಗೋಮಾಳದಲ್ಲಿ ಜಮಾವಣೆಗೊಂಡ ಪ್ರತಿಭಟನಾಕಾರರು ಅರಣ್ಯ ಮತ್ತು ಕಂದಾಯ ಇಲಾಖೆ ಅಧಿಕಾರಿಗಳ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಮಹಿಳೆಯರು, ಮಕ್ಕಳು ಸ್ಥಳದಲ್ಲೇ ಶಾಮಿಯಾನ ಹಾಕಿಕೊಂಡು ಅಡುಗೆ ತಯಾರಿಸಿದರು. ತಹಸೀಲ್ದಾರ್ ಹಾಗೂ ಶಾಸಕರು ಸ್ಥಳಕ್ಕೆ ಆಗಮಿಸಿ ಸಮಸ್ಯೆ ಇತ್ಯರ್ಥಪಡಿಸುವವರೆಗೆ ಅಹೋರಾತ್ರಿ ಹೋರಾಟ ಮುಂದುವರಿಸುವುದಾಗಿ ಹೇಳಿದರು.
ಗ್ರಾಮದ ನೂರಾರು ರೈತರು ಹೈನುಗಾರಿಕೆ ಮೇಲೆ ಅವಲಂಬಿತರಾಗಿ ಕುಟುಂಬ ನಿರ್ವಹಣೆ ಮಾಡುತ್ತಿದ್ದಾರೆ. ಗ್ರಾಮದ ವಲಯದಲ್ಲಿರುವ ಸರ್ವೇ ನಂಬರ್ 79ರ 112 ಎಕರೆ ಗೋಮಾಳದಲ್ಲಿ ಹಸು, ಕರು, ಮೇಕೆ, ಕುರಿಗಳನ್ನು ಮೇಯಿಸಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಈ ಗೋಮಾಳವನ್ನು ಅರಣ್ಯಾಧಿಕಾರಿಗಳು ಇಲಾಖೆಗೆ ಸೇರಿದ್ದು ಎನ್ನುತ್ತಾರೆ. ಆದರೆ, ಇದೇ ಭೂಮಿಯ 22 ಎಕರೆ ಜಾಗವನ್ನು ಕಂದಾಯ ಅಧಿಕಾರಿಗಳು ಬೇರೆ ಗ್ರಾಮದ ಪ್ರಭಾವಿಗಳಿಗೆ ಹಂಚಿಕೆ ಮಾಡಿ ಖಾತೆ ಮಾಡಿಕೊಡುವ ಮೂಲಕ ಅಕ್ರಮ ಎಸಗಿದ್ದಾರೆ. ಹಾಗಾದರೆ ಅರಣ್ಯ ಭೂಮಿಯನ್ನು ಪರಭಾರೆ ಮಾಡುವ ಹಕ್ಕು ಕಂದಾಯ ಇಲಾಖೆಗೆ ಇದೆಯೇ ಎಂದು ಪ್ರಶ್ನಿಸಿದರು.
ವಿಶ್ವಾನಾಥ್, ಬಸವರಾಜು, ಕುಮಾರ್, ಈರಣ್ಣ, ಪಾಪಯ್ಯ, ಕೆಂಪರಾಜು, ಶಿವಕುಮಾರ್, ಮಹೇಶ, ವೀರಪ್ಪ, ಉಮಾಶಂಕರ್, ಎ.ವಿ.ನಾಗರಾಜು, ಪರಮೇಶ್‌ಮೂರ್ತಿ, ಪ್ರಾಣೇಶ್, ಜ್ಯೋತಿಪ್ರಕಾಶ್, ಧರ್ಮರಾಜು, ಚನ್ನಮ್ಮ, ಲೀಲಾವತಿ, ವರಲಕ್ಷ್ಮೀ, ಪದ್ಮಮಮ್ಮ, ವನಜಾಕ್ಷಿ ಇತರರಿದ್ದರು.