ಗೋಮಾಳ ಉಳಿಸಿ ಕೌಶಿಕ ಗ್ರಾಮಸ್ಥರ ಪ್ರತಿಭಟನೆ

ಗೋಮಾಳ ಉಳಿಸಿ ಕೌಶಿಕ ಗ್ರಾಮಸ್ಥರ ಪ್ರತಿಭಟನೆ
Published on

ಹಾಸನ: ಸರ್ಕಾರಿ ಗೋಮಾಳದ ಜಮೀನನ್ನು ಗ್ರಾಮಸ್ಥರ ಅನುಭೋಗಕ್ಕೆ ಬಿಡುವಂತೆ ಆಗ್ರಹಿಸಿ ಶಾಂತಿಗ್ರಾಮ ಹೋಬಳಿ ಕೌಶಿಕ ಗ್ರಾಮಸ್ಥರು ಜಿಲ್ಲಾ ಪಂಚಾಯಿತಿ ಕಚೇರಿ ಎದುರು ಧರಣಿ ನಡೆಸಿ ಲ್ಲಾ ಉಸ್ತುವಾರಿ ಸಚಿವ ಕೆ.ಎನ್. ರಾಜಣ್ಣ ಅವರಿಗೆ ಮನವಿ ಸಲ್ಲಿಸಿದರು.
ಗ್ರಾಮದ ಸರ್ಕಾರಿ ಗೋಮಾಳದ ಜಮೀನನ್ನು ಯಾವುದೇ ಅನ್ಯ ಉದ್ದೇಶಗಳಿಗೆ ಮಂಜೂರು ಮಾಡದೆ ಜಾನುವಾರು ಮೇಯಿಸಲು ಹಾಗೂ ಗ್ರಾಮದ ಬಳಕೆಗೆ ಬಿಡಬೇಕು. ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್. ರಾಜಣ್ಣ, ಒಳಗೆ ಕೆಡಿಪಿ ಸಭೆ ನಡೆಸುತ್ತಿದ್ದರು. ಹೊರಗೆ ಜೆಡಿಎಸ್ ತಾಲೂಕು ಅಧ್ಯಕ್ಷ ಎಸ್.ದ್ಯಾವೇಗೌಡ, ಆಲೂರು ತಾಲೂಕು ಅಧ್ಯಕ್ಷ ಕೆ.ಎಸ್ ಮಂಜೇಗೌಡರು ಮತ್ತು ಗ್ರಾಮಸ್ಥರು ಜಿಪಂ ಎದುರು ಧರಣಿ ಕುಳಿತರು.
ಈ ವೇಳೆ ಎಸ್.ದ್ಯಾವೇಗೌಡ ಮಾತನಾಡಿ, ಕೌಶಿಕ ಗ್ರಾಮದ ಸರ್ವೆ ನಂಬರ್ 328 ಮತ್ತು 329 ರಲ್ಲಿ ಒಟ್ಟು 72.23 ಎಕರೆ ಗೋಮಾಳದ ಜಮೀನಿದ್ದು, ಇದರಿಂದ ನಮಗೆ ತುಂಬಾ ಅನುಕೂಲವಾಗಿದೆ. ಈ ಜಾಗದಿಂದಲೇ ಗ್ರಾಮದ ಹಲವಾರು ಕುಟುಂಬ ಹೈನುಗಾರಿಕೆ ಅವಲಂಬಿಸಿ ಜೀವನ ನಿರ್ವಹಣೆ ಮಾಡಿಕೊಳ್ಳುತ್ತಿವೆ ಎಂದರು.
ಗ್ರಾಮದ ಜಾನುವಾರುಗಳಿಗೆ ಈ ಗೋಮಾಳ ಬಿಟ್ಟರೆ ಬೇರೆ ಜಾಗ ಇಲ್ಲ. ಗೋಮಾಳಕ್ಕೆ ಹೊಂದಿ ಕೊಂಡಂತೆ ಒಂದು ಕೆರೆ ಸಹ ಇದ್ದು, ಗ್ರಾಮದ ನೂರಾರು ಎಕರೆ ಜಮೀನಿಗೆ ನೀರಿನ ಆಸರೆಯಾಗಿದೆ. ಹೀಗಾಗಿ ಹಲವು ರೀತಿಯಲ್ಲಿ ಅನುಕೂಲವಾಗಿರುವ ಗೋಮಾಳವನ್ನು ನಮಗೇ ಉಳಿಸಿಕೊಡಬೇಕು ಎಂದು ಮನವಿ ಮಾಡಿದರು.
ಕೆಲ ದಿನಗಳ ಹಿಂದೆ ಕೆಐಎಡಿಬಿ ಅಧಿಕಾರಿಗಳು ಗೋಮಾಳದ ಜಮೀನಿನ ಬಳಿ ಬಂದು ಈ ಜಮೀನು ತಮ್ಮ ಸಂಸ್ಥೆಗೆ ಮಂಜೂರಾಗಿದೆ ಎಂದು ಹೇಳಿದ್ದಾರೆ. ಅವರಿಗೆ ನಮ್ಮ ಅನಿವಾರ್ಯತೆ ಮನವರಿಕೆ ಮಾಡಿದ್ದೇವೆ. ನಮಗೆ ಗೋಮಾಳದ ಜಮೀನು ಅತ್ಯಗತ್ಯವಾಗಿ ಬೇಕಾಗಿದೆ. ಈ ಸಂಬಂಧ ಹಲವು ಪ್ರತಿಭಟನೆ ಸಹ ಮಾಡಿದ್ದೇನೆ. ಆದ್ದರಿಂದ ಸದರಿ ಗೋಮಾಳವನ್ನು ನಮಗೇ ಉಳಿಸಿಕೊಡಬೇಕು ಎಂದು ಗ್ರಾಮಸ್ಥರು ಮನವಿ ಮಾಡಿದರು.
ಈ ವೇಳೆ ಗ್ರಾಮಸ್ಥರಾದ ಅಶೋಕ್, ರಂಗಸ್ವಾಮಿ, ಹನುಮಂತೇಗೌಡ, ನರಸಿಂಹ, ಪ್ರಭು, ರಾಣಿ, ಗಂಗಮ್ಮ, ಪದ್ಮಮ್ಮ, ಈರೇಗೌಡ ಮೊದಲಾದವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net