

ಮೈಸೂರು: ಅತಿಯಾದ ಮೊಬೈಲ್ ಬಳಕೆ ಮಕ್ಕಳ ದೃಷ್ಟಿಯ ಮೇಲೆ ಪರಿಣಾಮ ಬೀರುತ್ತಿದ್ದು, ಪಾಲಕರು ಮಕ್ಕಳನ್ನು ಮೊಬೈಲ್‌ನಿಂದ ದೂರ ಇಡುವ ಪ್ರಯತ್ನ ಮಾಡಬೇಕು ಎಂದು ಕಲಾವಿದೆ ಸುಮಾ ರಾಜಕುಮಾರ್ ಹೇಳಿದರು.
ಲಕ್ಷ್ಮೀಪುರಂನ ಗೋಪಾಲಸ್ವಾಮಿ ಶಿಶುವಿಹಾರ ಪೂರ್ವಪ್ರಾಥಮಿಕ, ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಗುರುವಾರ ಹಮ್ಮಿಕೊ ಂಡಿದ್ದ ಶಾಲಾ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿ, ಮೊಬೈಲ್ ಬಳಕೆಯಿಂದ ಸಾಕಷ್ಟು ಮಕ್ಕಳ ದೃಷ್ಟಿ ಕಡಿಮೆಯಾಗುತ್ತಿದ್ದು, ಪಾಲಕರು ಈ ಬಗ್ಗೆ ಎಚ್ಚರ ವಹಿಸಬೇಕು. ಮಕ್ಕಳು ಹಠ ಹಿಡಿಯುತ್ತಾರೆ ಎಂಬ ಕಾರಣಕ್ಕೆ ಮೊಬೈಲ್ ನೀಡುವುದು ಸರಿಯಲ್ಲ. ಮಕ್ಕಳು ಸಹ ಮೊಬೈಲ್‌ನಿಂದ ದೂರ ಇರಲು ಪ್ರಯತ್ನ ಮಾಡಬೇಕು ಎಂದರು.
ಮಕ್ಕಳು ತಂದೆ ತಾಯಿಗೆ ನಮಸ್ಕರಿಸಿ ಅವರ ಆಶೀರ್ವಾದ ಪಡೆಯಬೇಕು. ತಂದೆ, ತಾಯಿ ಆಶೀರ್ವಾದ ಇದ್ದರೆ ಜೀವನದಲ್ಲಿ ಯಶಸ್ಸು ನಿಶ್ಚಿತ. ತಂದೆ, ತಾಯಿ ಹಾಗೂ ಗುರುಗಳು ತೋರುವ ಮಾರ್ಗದಲ್ಲಿ ವಿದ್ಯಾರ್ಥಿಗಳು ಮುನ್ನಡೆಯಬೇಕು ಎಂದು ಕಿವಿಮಾತು ಹೇಳಿದರು.
ಶಾಲಾ ಮುಖ್ಯೋಪಾದಯ ರಾಮಪ್ರಸಾದ್, ಮಹಾರಾಜ ಎಜುಕೇಷನ್ ಟ್ರಸ್ಟ್ ಖಜಾಂಚಿ ಡಾ.ಡಿ.ಎಸ್. ಗುರು, ಗೋಪಾಲಸ್ವಾಮಿ ಶಿಶುವಿಹಾರ ಸಂಸ್ಥೆಯ ಅಧ್ಯಕ್ಷ ಡಾ.ಎ.ಎಸ್. ಚಂದ್ರಶೇಖರ್, ಕಾರ್ಯದರ್ಶಿ ಎನ್. ಅನಂತರಾಮ್, ಕರೆಸ್ಪಾಂಡೆಂಟ್ ಎನ್.ಆರ್. ಮಂಜುನಾಥ್, ಶೈಕ್ಷಣಿಕ ಸಲಹೆಗಾರ ಪಾಂಡುರಂಗವಿಠಲ ಹಾಗೂ ಇತರರು ಇದ್ದರು.