ಗೋಪಾಲಸ್ವಾಮಿ ಬೆಟ್ಟಕ್ಕೆ ಪ್ರವಾಸಿಗರ ದಂಡು

31-GPT-1
ಗುಂಡ್ಲುಪೇಟೆ ತಾಲೂಕಿನ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಹೋಗಲು ತಪ್ಪಲಿನಲ್ಲಿ ಬಸ್‌ಗಾಗಿ ಮೈಲಿಗಟ್ಟಲೆ ಸಾರದಿ ಸಾಲಿನಲ್ಲಿ ಕಾದು ನಿಂತಿರುವ ಪ್ರವಾಸಿಗರು.
Published on

ಗುಂಡ್ಲುಪೇಟೆ: ವರ್ಷಾಂತ್ಯ ಹಾಗೂ ರಜೆ ಹಿನ್ನೆಲೆಯಲ್ಲಿ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಪ್ರವಾಸಿಗರ ದಂಡೇ ಹರಿದು ಬರುತ್ತಿದೆ.

ಶನಿವಾರ, ಭಾನುವಾರ ಹಾಗೂ ವರ್ಷಾಂತ್ಯದ ರಜೆ ಹಿನ್ನೆಲೆಯಲ್ಲಿ ಪ್ರವಾಸಿಗರ ದಂಡು ಬಂಡೀಪುರದತ್ತ ಹರಿದು ಬರುತ್ತಿದ್ದು, ಇಲ್ಲಿಗೆ ಬರುವ ಬಹುತೇಕ ಪ್ರವಾಸಿಗರು ಹಿಮವದ್ ಗೋಪಾಲಸ್ವಾಮಿ ದೇಸ್ಥಾನಕ್ಕೆ ಆಗಮಿಸುವುದು ವಾಡಿಕೆ. ಇದರಿಂದ ಬೆಟ್ಟಕ್ಕೆ ಹೋಗಲು ಪ್ರವಾಸಿಗರು ಮೈಲಿಗಟ್ಟಲೇ ಸರದಿ ಸಾಲಿನಲ್ಲಿ ನಿಲ್ಲುತ್ತಿದ್ದಾರೆ. ಸಾರಿಗೆ ಸಂಸ್ಥೆ ಪ್ರವಾಸಿಗರ ಸಂಖ್ಯೆಗೆ ಅನುಗುಣವಾಗಿ ಬಸ್‌ಗಳನ್ನು ನಿಯೋಜಿಸಿ ನೂಕುನುಗ್ಗಲು ನಿಯಂತ್ರಿಸಲು ಮುಂದಾಗಿದೆ.

ಊಟಿ ಹಾಗೂ ಬಂಡೀಪುರಕ್ಕೆ ಆಗಮಿಸುವವರು ಬೆಟ್ಟಕ್ಕೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಸಾರಿಗೆ ಸಂಸ್ಥೆ ಹಲವು ಬಸ್‌ಗಳನ್ನು ಬೆಟ್ಟದ ತಪ್ಪಲಿನಲ್ಲಿ ಸಿದ್ಧವಾಗಿರಿಸಿದೆ. ಶನಿವಾರವೂ ಬೆಟ್ಟಕ್ಕೆ ದೊಡ್ಡ ಪ್ರಮಾಣದಲ್ಲಿ ಪ್ರವಾಸಿಗರು ಆಗಮಿಸಿದ್ದರಿಂದ ಸಂಸ್ಥೆಯು 10 ಬಸ್‌ಗಳನ್ನು ನಿಯೋಜಿಸಿತ್ತು.

ಭಾನುವಾರ ಹೊಸ ವರ್ಷ ಆರಂಭವಾಗುವುದರಿಂದ ದೂರದೂರುಗಳಿಂದ ಬರುವ ಪ್ರವಾಸಿಗರ ಜತೆಗೆ ಸ್ಥಳೀಯ ಭಕ್ತರೂ ಹೆಚ್ಚಿನ ಸಂಖ್ಯೆಯಲ್ಲಿ ದೇವಸ್ಥಾನಕ್ಕೆ ಆಗಮಿಸುವ ನಿರೀಕ್ಷೆ ಇದೆ. ಹೀಗಾಗಿ ನೂಕುನುಗ್ಗುಲು ಹೆಚ್ಚಾಗುವ ಸಂಭವವಿದೆ. ಪ್ರಯಾಣಿಕರ ಅನುಕೂಲಕ್ಕೆ ತಕ್ಕಂತೆ ಸಂಸ್ಥೆಯು ಬೆಟ್ಟದ ತಪ್ಪಲಿನಿಂದ ದೇವಸ್ಥಾನಕ್ಕೆ 20 ಬಸ್‌ಗಳನ್ನು ನಿಯೋಜಿಸಿದೆ. ಅಲ್ಲದೆ ಪಟ್ಟಣದ ಬಸ್ ನಿಲ್ದಾಣದಿಂದಲೂ ಹತ್ತು ಬಸ್‌ಗಳನ್ನು ಸಿದ್ಧವಾಗಿರಿಸಲಾಗಿದೆ ಎಂದು ಸಾರಿಗೆ ಡಿಪೋ ಮ್ಯಾನೇಜರ್ ಪುಷ್ಪಾ ವಿಜಯವಾಣಿಗೆ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net