

ಗುಂಡ್ಲುಪೇಟೆ: ಕೇಂದ್ರ ಸಾಮಾಜಿಕ ನ್ಯಾಯ ಸಬಲೀಕರಣ ಇಲಾಖೆ ಸಚಿವ ಎ.ನಾರಾಯಣಸ್ವಾಮಿ ತಾಲೂಕಿನ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಭೇಟಿ ನೀಡಿ ಗೋಪಾಲನ ದರ್ಶನ ಪಡೆದರು.
ಶುಕ್ರವಾರ ಮಧ್ಯಾಹ್ನ ಆಗಮಿಸಿದ ಸಚಿವರನ್ನು ತಹಸೀಲ್ದಾರ್ ಸಿ.ಜೆ.ರವಿಶಂಕರ್ ತಾಲೂಕಿನ ಹಿರೀಕಾಟಿ ಗೇಟ್ ಸಮೀಪ ಸ್ವಾಗತಿಸಿ ದೇವಾಲಯಕ್ಕೆ ಕರೆದೊಯ್ದರು.
ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲಿ ಪ್ರಧಾನ ಅರ್ಚಕ ಗೋಪಾಲಕೃಷ್ಣಭಟ್ ಸಾಂಪ್ರದಾಯಿಕವಾಗಿ ಪೂರ್ಣಕುಂಭ ಸ್ವಾಗತದೊಂದಿಗೆ ದೇವಾಲಯಕ್ಕೆ ಬರಮಾಡಿಕೊಂಡರು. ಗೋಪಾಲನ ದರ್ಶನ ಪಡೆದ ಸಚಿವರು ಪ್ರಸಾದ ಸ್ವೀಕರಿಸಿದರು. ನಂತರ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಪರಿಸರ ಸೂಕ್ಷ್ಮ ಪ್ರದೇಶದಲ್ಲಿರುವ ದೇವಾಲಯವನ್ನು ಸುತ್ತುಹಾಕಿ ಪ್ರಕೃತಿ ಸೌಂದರ್ಯ ಸವಿದರು.
ಸಮಾಜಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ನಂಜುಂಡೇಗೌಡ, ಸರ್ಕಲ್ ಇನ್ಸ್‌ಪೆಕ್ಟರ್ ಮುದ್ದುರಾಜ್ ಹಾಗೂ ಇತರರು ಇದ್ದರು.