

ಬೇಲೂರು: ತಾಲೂಕಿನ ಬಾವಿಕಟ್ಟೆ(ಚಿಕ್ಕಸಾಲಾವರ) ಅಕ್ಕಪಕ್ಕದ ಗ್ರಾಮಗಳಲ್ಲೆ ಬೀಡು ಬಿಟ್ಟಿರುವ ಒಂಟಿ ಮಖ್ನ ಆನೆ, ಮಂಗಳವಾರ ಬೆಳಗ್ಗೆ 3 ಗಂಟೆ ಸಮಯದಲ್ಲಿ ಕರೀಂ ಸಾಬ್ ಮತ್ತು ಕುಮಾರ್ ಎಂಬುವವರ ಮನೆಯ ಕಿಟಕಿ ಬಾಗಿಲು ಮುರಿದಿತ್ತು. ಅದೇ ಆನೆ ಬುಧವಾರ ಬೆಳಗ್ಗೆ 4 ಗಂಟೆ ಸಮಯದಲ್ಲಿ ಅನುಘಟ್ಟ ಪ್ರಾಥಾಮಿಕ ಕೃಷಿ ಪತ್ತಿನ ಸಹಕಾರ ಸಂಘದ ಗೋದಾಮಿನ ಕಬ್ಬಿಣದ ಬಾಗಿಲು ಮುರಿದು ಪಡಿತರ ವಿತರಣೆಗಿಟ್ಟಿದ್ದ ಅಕ್ಕಿ ತಿಂದಿರುವ ಘಟನೆ ನಡೆದಿದೆ.
ಬೇಲೂರು ತಾಲೂಕಿನಲ್ಲಿ ಎರಡರಿಂದ ಮೂರು ಭಾಗದಲ್ಲಿ ಕಾಡಾನೆಗಳ ಹಿಂಡು ಬೀಡು ಬಿಟ್ಟಿದ್ದು, ಅಡಕೆ, ಕಾಫಿ ಮೆಣಸು ಬೆಳೆ ನಾಶ ಮಾಡುವುದು ಸಾಮಾನ್ಯವಾಗಿದೆ. ಇದರ ನಡುವೆಯೇ ಮಖ್ನ ಆನೆಯೊಂದು ಒಂಟಿಯಾಗಿ ತಾಲೂಕಿನ ಚಿಕ್ಕಸಾಲಾವರ ಹಾಗೂ ಅಕ್ಕಪಕ್ಕದ ಕಾನನಹಳ್ಳಿ, ನೇರಲೇಕಟ್ಟೆ, ಕೋಗೋಡು, ನೇರಲಮಕ್ಕಿ, ಅನುಘಟ್ಟ ಗ್ರಾಮಗಳ ಆಸುಪಾಸಿನ ತೋಟಗಳಲ್ಲಿ ಬೀಡು ಬಿಟ್ಟು ರಾತ್ರಿ ಸಮಯದಲ್ಲಿ ಆಹಾರಕ್ಕಾಗಿ ಮನೆ ಕಿಟಕಿ, ಬಾಗಿಲು ಮುರಿಯುವುದಲ್ಲದೆ, ಅನುಘಟ್ಟ ಕೃಷಿ ಪತ್ತಿನ ಸಹಕಾರ ಸಂಘದ ಗೋದಾಮಿನ ಕಬ್ಬಿಣದ ಬಾಗಿಲು ಮುರಿದು ಅಕ್ಕಿ ಚೀಲ ಎಳೆದು ತಿಂದು ಹಾಕಿದ್ದಲ್ಲದೆ ಹಾಳು ಸಹ ಮಾಡಿದೆ. ಅನ್ನ ಭಾಗ್ಯದ ಅಕ್ಕಿಯ ರುಚಿ ಕಂಡಿರುವ ಕಾಡಾನೆ ಸತತ ಎರಡನೇ ಬಾರಿಗೆ ಅನುಘಟ್ಟ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಗೋದಾಮಿಗೆ ದಾಳಿ ನಡೆಸಿ ರೋಲಿಂಗ್ ಶಲ್ಟರ್ ಮುರಿದು ಒಂದು ಮೂಟೆ ಅಕ್ಕಿಯನ್ನು ತಿಂದು ಹಾಕಿದ ಘಟನೆಗಳು ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಗಂಟೆಗೂ ಹೆಚ್ಚು ಕಾಲ ರೋಲಿಂಗ್ ಶಲ್ಟರ್ ಮುರಿಯಲು ಯತ್ನಿಸಿದ ಆನೆ, ಕೊನೆಗೂ ಒಂದು ಚೀಲ ಅಕ್ಕಿಯನ್ನು ಹೊರಗೆಳೆದು ಅರ್ಧ ತಿಂದು ಹೋಗಿದೆ. ಇದೇ ಆನೆ ಕಳೆದ 2022ರ ಏಪ್ರಿಲ್ ತಿಂಗಳಲ್ಲಿ ಇದೇ ಅನುಘಟ್ಟ ಸಹಕಾರ ಸಂಘದ ಗೋದಾಮಿಗೆ ನುಗ್ಗಿ ಅಕ್ಕಿ ತಿಂದು ಹೋಗಿತ್ತು. ಆದರೆ ಈಗ ಮತ್ತೆ ಅದೇ ಮಖ್ನ ಆನೆ ದಾಳಿ ಮಾಡಿರುವುದು ವಿಶೇಷವಾಗಿದೆ. ಸ್ಥಳಕ್ಕೆ ಅರಣ್ಯಾಧಿಕಾರಿಗಳು ಹಾಗೂ ಅರೇಹಳ್ಳಿ ಪೊಲೀಸ್ ಠಾಣಾ ಸಿಬ್ಬಂದಿ, ಸಂಘದ ನಿರ್ದೇಶಕರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ವಿಶೇಷವೆಂದರೆ ಇಲ್ಲಿನ ಗ್ರಾಮ ಪಂಚಾಯಿತಿ ಕಚೇರಿ ಹಾಗೂ ಪ್ರಾಥಾಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಪ್ರತಿನಿತ್ಯ ನೂರಾರು ಜನರು ಹಣಕಾಸಿನ ವ್ಯವಹಾರ ಮತ್ತು ಕೆಲಸ ಕಾರ್ಯಗಳಿಗೆ ಬಂದು ಹೋಗುತ್ತಾರೆ. ಆದರೆ ಕಾಡಾನೆ ಎರಡನೇ ಬಾರಿಗೆ ಗೋದಾಮಿಗೆ ನುಗ್ಗಿ ಅಕ್ಕಿ ತಿಂದಿರುವ ವಿಷಯ ತಿಳಿದು ಬೆಚ್ಚಿ ಬಿದ್ದಿದ್ದಾರೆ.
ತಾಲೂಕಿನಲ್ಲಿ ದಿನದಿಂದ ದಿನಕ್ಕೆ ಕಾಡಾನೆಗಳ ಹಾವಳಿ ಮಿತಿ ಮೀರಿದೆ. ಕಾಡಾನೆಗಳ ದಾಳಿಯಿಂದ ಈ ಭಾಗದಲ್ಲಿ ಬೆಳೆಗಾರರು ಸಾಕಷ್ಟು ನಷ್ಟ ಅನುಭವಿಸಿದರೆ, ಕಾರ್ಮಿಕರು ಸಾರ್ವಜನಿಕರು ಜೀವ ಭಯದಲ್ಲೆ ಓಡಾಡುವಂತ್ತಾಗಿದೆ. ಆಹಾರ ಅರಸಿ ಕಾಡಿನಿಂದ ಹಿಂಡು ಹಿಂಡಾಗಿ ಕಾಫಿ ತೋಟ ಹಾಗೂ ಗದ್ದೆಗಳತ್ತ ನುಗ್ಗುತ್ತಿರುವ ಕಾಡಾನೆಗಳಿಂದಾಗಿ ರೈತರ ಬೆಳೆ ನಾಶವಾಗುತ್ತಿದೆ. ಗ್ರಾಮದಲ್ಲಿನ ಕೆಲ ಮನೆಗಳ ಕಿಟಿಕಿ ಬಾಗಿಲು ಮುರಿದು, ರಾಜಾರೋಷವಾಗಿ ಅಂಗಡಿ ಮುಂಗಟ್ಟುಗಳು, ಮನೆಗಳ ಗೋದಾಮುಗಳಿಗೆ ನುಗ್ಗಿ ಭತ್ತ, ಅಕ್ಕಿ ತಿಂದು ದಾಂದಲೆ ನಡೆಸುತ್ತಿವೆ. ಜತೆಗೆ ಮನೆಗಳ ಅಕ್ಕಪಕ್ಕ, ಹಿಂಬಾಗದಲ್ಲೆ ಬೀಡು ಬಿಡುತ್ತಿರುವುದರಿಂದ ಮಲೆನಾಡು ಭಾಗದ ಗ್ರಾಮಸ್ಥರು ಆತಂಕಕ್ಕೀಡಾಗಿದ್ದು, ಕಾಡಾನೆಗಳ ನಿಯಂತ್ರಣಕ್ಕೆ ಶಾಶ್ವತ ಪರಿಹಾರಕ್ಕೆ ಆಗ್ರಹಿಸಿದ್ದಾರೆ.
ಕಾಫಿ ಬೆಳೆಗಾರರ ಸಂಘದ ತಾಲೂಕು ಅಧ್ಯಕ್ಷ ಚೇತನ್ ಕುಮಾರ್ ಮಾತನಾಡಿ, ಸರ್ಕಾರ ಕಾಡಾನೆ ಹವಳಿ ನಿಯಂತ್ರಣಕ್ಕೆ ಟಾಸ್ಕ್ ಫೋರ್ಸ್ ರಚಿಸಿ ಕೈತೊಳೆದು ಕೊಂಡಿದೆ. ಇದರಿಂದ ಯಾವುದೆ ಪ್ರಯೋಜನವಾಗುತ್ತಿಲ್ಲ. ದಿನದಿಂದ ದಿನಕ್ಕೆ ಮಲೆನಾಡು ಭಾಗದಲ್ಲಿ ಕಾಡಾನೆಗಳ ಉಪಟಳ ಹೆಚ್ಚಾಗುತ್ತಿದೆ. ಕಾಫಿ ಬೆಳೆಗಾರರು, ಕಾರ್ಮಿಕರು ಜೀವಭಯದಲ್ಲಿದ್ದಾರೆ. ಶಾಲಾ ಮಕ್ಕಳಿಗಂತೋ ತುಂಬಾ ತೊಂದರೆಯಾಗುತ್ತಿದೆ. ಆದ್ದರಿಂದ ರಾಜ್ಯ ಮತ್ತು ಕೇಂದ್ರ ಸರ್ಕಾರ ಕಾಡಾನೆಗಳನ್ನು ಶಾಶ್ವತವಾಗಿ ಸ್ಥಾಳಂತರಿಸಲು ಮುಂದಾಗಬೇಕು. ಇಲ್ಲದಿದ್ದಲ್ಲಿ ಉಗ್ರ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.
ವಲಯ ಅರಣ್ಯಾಧಿಕಾರಿ ವಿನಯ್ ಕುಮಾರ್, ಉಪ ಅರಣ್ಯ ಸಂರಕ್ಷಣಾಧಿಕಾರಿ ರಘು, ಅರೇಹಳ್ಳಿ ಪಿಎಸ್‌ಐ ಸುರೇಶ್, ಸಂಘದ ಕಾರ್ಯದರ್ಶಿ ಸತೀಶ್ ಕುಮಾರ್, ಆಹಾರ ಇಲಾಖೆ ಸಿರಸ್ತೆದಾರ್ ಮಂಜುನಾಥ್ ಸೇರಿದಂತೆ ಸಂಘದ ನಿರ್ದೇಶಕರು ಮತ್ತು ಗ್ರಾಮಸ್ಥರಿದ್ದರು.