

ಮೂಡಿಗೆರೆ: ಗೋಣಿಬೀಡು ನಾಡಕಚೇರಿ ಉದ್ಘಾಟಿಸಿದ ಶಾಸಕಿ ನಯನಾ ಮೋಟಮ್ಮ ಅವರು ನಾಡಕಚೇರಿ ಸಮೀಪದ ಪೊಲೀಸ್ ಠಾಣೆಗೆ ದಿಢೀರ್ ಭೇಟಿ ನೀಡಿ ಪರಿಶೀಲಿಸಿದರು. ಠಾಣೆಯಲ್ಲಿರುವ ಕಡತಗಳ ಬಗ್ಗೆ ಮಾಹಿತಿ ಪಡೆದರು. ಲಾಕಪ್‌ಗೆ ಟಾರ್ಪಲ್ ಕಟ್ಟಿರುವ ಬಗ್ಗೆ ಪ್ರಶ್ನಿಸಿದರು. ಕಳೆದ ಲೋಕಸಭಾ ಚುನಾವಣೆಯಲ್ಲಿ ಸಾರ್ವಜನಿಕರಿಂದ ಬಂದೂಕುಗಳನ್ನು ಪಡೆದು ಠಾಣೆಯಲ್ಲಿ ಜಮೆ ಮಾಡಲಾಗಿತ್ತು. ಚುನಾವಣೆ ಮುಗಿದ ನಂತರ ಎಲ್ಲರೂ ಬಂದೂಕುಗಳನ್ನು ವಾಪಸ್ ಕೊಂಡೊಯ್ದಿದ್ದಾರೆ. ಇನ್ನು ಕೆಲವರು ಬಂದೂಕುಗಳನ್ನು ಕೊಂಡೊಯ್ಯಲು ಬಾಕಿ ಇದೆ ಎಂದು ಪಿಎಸ್‌ಐ ಹರ್ಷವರ್ಧನ್ ಮಾಹಿತಿ ನೀಡಿದರು. ಠಾಣೆಯ ಕಟ್ಟಡದಲ್ಲಿ ನೀರು ಸೋರಿಕೆಯಾಗುತ್ತಿರುವುದನ್ನು ಗಮನಿಸಿ ಅದನ್ನು ಕೂಡಲೇ ದುರಸ್ತಿ ಪಡಿಸುವಂತೆ ಸೂಚಿಸಿದರು. ಕಟ್ಟಡ ದುರಸ್ತಿಗೆ ಹಿರಿಯ ಅಧಿಕಾರಿಗಳಿಂದ ಆದೇಶ ಬಂದಿದೆ. ಸದ್ಯದಲ್ಲೇ ದುರಸ್ತಿಯಾಗಲಿದೆ ಎಂದು ಮಾಹಿತಿ ನೀಡಿದರು. ಪತಿ, ಪತ್ನಿ ಕಲಹ ಸೇರಿದಂತೆ ಮಹಿಳೆಯರ ಮೇಲಿನ ದೌರ್ಜನ್ಯಗಳ ಬಗ್ಗೆ ಮಹಿಳಾ ಸಿಬ್ಬಂದಿ ಜತೆ ಮಾಹಿತಿ ಪಡೆದರು. ಠಾಣೆಗೆ ಭೇಟಿ ನೀಡುವ ಸಾರ್ವಜನಿಕ ರೊಂದಿಗೆ ಸೌಜನ್ಯದಿಂದ ವರ್ತಿಸಬೇಕು. ಜನರ ಕೆಲಸವನ್ನು ತ್ವರಿತವಾಗಿ ವಿಲೇವಾರಿ ಮಾಡಬೇಕು ಎಂದು ಸೂಚಿಸಿದರು.