

ಗೋಣಿಕೊಪ್ಪ: ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ನೂತನ ಶಾಸಕರಾಗಿ ಆಯ್ಕೆಯಾದ ನಂತರ ಮೊದಲ ಬಾರಿಗೆ ವಾಣಿಜ್ಯನಗರಿ ಗೋಣಿಕೊಪ್ಪಕ್ಕೆ ಭಾನುವಾರ ಭೇಟಿ ನೀಡಿದ ಅಜ್ಜಿಕುಟ್ಟಿರ ಎಸ್.ಪೊನ್ನಣ್ಣ ಪಟ್ಟಣದ ಕಸ ವಿಲೇವಾರಿ ಘಟಕ, ಬಸ್ ನಿಲ್ದಾಣ, ಪಂಚಾಯಿತಿ ಪೌರಕಾರ್ಮಿಕರ ವಸತಿ ಗೃಹ ಸೇರಿದಂತೆ ವಿವಿಧೆಡೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕೆಲವೊಂದು ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಸೂಚಿಸಿದರು.
ನಗರದ ಕಸ ವಿಲೆವಾರಿ ಘಟಕಕ್ಕೆ ಭೇಟಿ ನೀಡಿದ ಶಾಸಕ ಪೊನ್ನಣ್ಣ ಕಸ ವಿಲೇವಾರಿ ವಿಷಯದಲ್ಲಿ ಪಂಚಾಯಿತಿ ಮೊದಲ ಆದ್ಯತೆ ನೀಡಿ ಸಮರ್ಪಕವಾಗಿ ಕಸ ವಿಲೇವಾರಿ ಮಾಡುವಂತೆ ಪಂಚಾಯಿತಿ ಅಧ್ಯಕ್ಷರು ಹಾಗೂ ಪಿಡಿಒಗೆ ನಿರ್ದೇಶನ ನೀಡಿದರು. ಹೃದಯ ಭಾಗದಲ್ಲಿ ಇಂತಹ ಅವ್ಯವಸ್ಥೆ ಮರುಕಳಿಸಬಾರದು. ಕಸ ವಿಲೇವಾರಿಗೆ ಸಂಬಂಧಿಸಿದಂತೆ ತುರ್ತು ಕ್ರಮ ಕೈಗೊಳ್ಳಬೇಕು ಎಂದು ಶಾಸಕರು ತಿಳಿಸಿದರು.
ಶಾಶ್ವತ ಪರಿಹಾರ ಕಂಡುಕೊಳ್ಳಿ: ಕಸ ವಿಲೇವಾರಿ ಘಟಕದಲ್ಲಿ ದಿನನಿತ್ಯ ಹೆಚ್ಚಿನ ಪ್ರಮಾಣದಲ್ಲಿ ಕಸ ಸಂಗ್ರಹಣೆಯಾಗುತ್ತಿದೆ. ಇದನ್ನು ವಿಂಗಡಿಸುವುದು ಕಷ್ಟವಾಗುತ್ತಿದೆ. ಸಾಕಷ್ಟು ಕಸಗಳನ್ನು ಕಳುಹಿಸಿಕೊಡಲಾಗಿದೆ. ಈ ಹಿಂದೆ ಅರವತ್ತೋಕ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಟ್ಟು ಬಳಿ ಕಸ ವಿಲೇವಾರಿಗೆ ಸ್ಥಳ ನಿಗದಿಪಡಿಸಿ ಪಂಚಾಯಿತಿಯಿಂದ 20 ಲಕ್ಷ ರೂ. ಅನುದಾನವನ್ನು ಕಸ ಘಟಕಕ್ಕೆ ವಿನಿಯೋಗಿಸಲಾಗಿದೆ. ಪೊನ್ನಂಪೇಟೆ, ಅರುವತ್ತೋಕ್ಕಲು ಪಂಚಾಯಿತಿಗಳು ಅನುದಾನವನ್ನು ವಿನಿಯೋಗಿಸಿದೆ. ನಂತರ ಈ ಘಟಕದಲ್ಲಿ ಕಸ ವಿಲೆವಾರಿಗೆ ಕೆಲವು ಸಮಸ್ಯೆಗಳು ಎದುರಾದವು. ಈ ಬಗ್ಗೆ ನೀವು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ಶಾಶ್ವತ ಪರಿಹಾರ ಕಂಡುಕೊಳ್ಳಲು ಸಹಕಾರ ನೀಡಬೇಕೆಂದು ಗ್ರಾಪಂ ಅಧ್ಯಕ್ಷೆ ಸೌಮ್ಯಾ ಬಾಲು, ಸದಸ್ಯರಾದ ಶರತ್‌ಕಾಂತ್, ಎಂ.ಮಂಜುಳಾ ಅವರಿಗೆ ಸೂಚಿಸಿದರು.