ಗೋಣಿಕೊಪ್ಪದಲ್ಲಿ ಈದ್ ಉಲ್ ಫಿತರ್ ಆಚರಣೆ

31 gkp 001
Published on

ಗೋಣಿಕೊಪ್ಪಲು: ಸಹೋದರತೆ, ಉದಾರತೆ, ಮಾನವೀಯತೆ ಮತ್ತು ಸಮರ್ಪಣಾ ಮನೋಭಾವದ ಸಂಕೇತವಾಗಿರುವ ಈದ್ ಉಲ್ ಫಿತರ್ ಹಬ್ಬವನ್ನು ಸೋಮವಾರ ಗೋಣಿಕೊಪ್ಪಲಿನಲ್ಲಿ ಸಡಗರದಿಂದ ಆಚರಿಸಲಾಯಿತು.

ಗೋಣಿಕೊಪ್ಪಲು, ಪೊನ್ನಂಪೇಟೆ ಸೇರಿದಂತೆ ಸುತ್ತಮುತ್ತಲಿನ ಎಲ್ಲ ಮಸೀದಿಗಳಲ್ಲಿ ಈದುಲ್ ಫಿತರ್‌ನ ಅಂಗವಾಗಿ ವಿಶೇಷ ಪ್ರಾರ್ಥನೆ ನಡೆಸಲಾಯಿತು. ಗೋಣಿಕೊಪ್ಪಲು ಬಸ್ ನಿಲ್ದಾಣದ ಮುಂಭಾಗದಲ್ಲಿರುವ ಶಾಫಿ ಜುಮ್ಮಾ ಮಸೀದಿಯಲ್ಲಿ ಬೆಳಗ್ಗೆ 8.30 ಗಂಟೆಗೆ ನಡೆದ ಪ್ರಾರ್ಥನೆಯಲ್ಲಿ ಸಾವಿರಾರು ಜನರು ಪಾಲ್ಗೊಂಡಿದ್ದರು.

ಮಸೀದಿಯಲ್ಲಿ ನಡೆದ ಸಾಮೂಹಿಕ ಪ್ರಾರ್ಥನೆಗೆ ನೇತೃತ್ವ ನೀಡಿದ ಗೋಣಿಕೊಪ್ಪಲು ಶಾಫಿ ಜುಮಾ ಮಸೀದಿಯ ಖತೀಬರಾದ ಮೊಹಮ್ಮದ್ ಅಲಿ ಪೈಜ್ಜಿ ಈದ್ ಸಂದೇಶದಲ್ಲಿ ಮಾತನಾಡಿ, ಒಂದು ತಿಂಗಳ ಕಾಲ ಹಗಲಿನಲ್ಲಿ ನಿರಂತರವಾಗಿ ಮಾಡಿದ ಉಪವಾಸವನ್ನು ಅಂತ್ಯಗೊಳಿಸುವ ಹಬ್ಬದ ಪ್ರತೀಕವೇ ಈದ್ ಉಲ್ ಫಿತ್. ಈ ಹಬ್ಬ ಮುಸ್ಲಿಮರು ಅನುಭವಿಸಿದ ಆಧ್ಯಾತ್ಮಿಕ ಶುದ್ಧೀಕರಣದ ರಂಜಾನ್ ತಿಂಗಳ ಅಂತ್ಯವನ್ನು ಸೂಚಿಸುತ್ತದೆ. ಒಂದು ತಿಂಗಳು ಉಪವಾಸ ಇದ್ದು, ಎಲ್ಲಾ ದುರ್ನಡತೆಗಳಿಂದ ದೇಹ ಹಾಗೂ ಆತ್ಮವನ್ನು ಶುಚಿಗೊಳಿಸಿದ ವ್ಯಕ್ತಿಯು ಆ ಹುರುಪನ್ನು ಮುಂದುವರಿಸಲು ದೃಢ ಸಂಕಲ್ಪ ಕೈಗೊಳ್ಳಬೇಕಿದೆ. ಹಸಿವಿನಿಂದ ಕಲಿತ ಪಾಠವನ್ನು ಸಮಾಜಸೇವೆಯ ಮೂಲಕ ಸಾಕಾರಗೊಳಿಸುವುದರೊಂದಿಗೆ ಭ್ರಾತೃತ್ವ ಮತ್ತು ಸಹಬಾಳ್ವೆಯ ಬದುಕಿಗೆ ಒತ್ತು ನೀಡಬೇಕಿದೆ ಎಂದು ಕರೆ ನೀಡಿದರು.

ಸಾಮೂಹಿಕ ಪ್ರಾರ್ಥನೆಯ ನಂತರ ಪಾಲ್ಗೊಂಡಿದ್ದವರೆಲ್ಲರೂ ಪರಸ್ಪರ ಆಲಿಂಗನ ನಡೆ,ಸಿ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು. ಗೋಣಿಕೊಪ್ಪಲು ಶಾಫಿ ಜುಮ್ಮಾ ಮಸೀದಿಯ ಆಡಳಿತ ಮಂಡಳಿ ಅಧ್ಯಕ್ಷ ಎಂ.ಎಚ್.ನಾಸರ್, ಉಪಾಧ್ಯಕ್ಷ ಎಂ. ಎಂ. ರಶೀದ್, ಪ್ರಧಾನ ಕಾರ್ಯದರ್ಶಿ ಟಿ.ಕೆ. ಅಬ್ದುಲ್ ಸಮ್ಮದ್ ಸೇರಿದಂತೆ ಆಡಳಿತ ಮಂಡಳಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net