ಗೋಣಿಕೊಪ್ಪಕ್ಕೆ ಬೇಕಿದೆ ಸುಸಜ್ಜಿತ ಕ್ರೀಡಾಂಗಣ

24 gkp 01
Published on

ಗೋಣಿಕೊಪ್ಪ: ಪ್ರಕೃತಿ ಸೌಂದರ್ಯಕ್ಕೆ ಹೆಸರುವಾಸಿಯಾದ ಕೊಡಗು ಜಿಲ್ಲೆ ಕ್ರೀಡೆಗೂ ಅಷ್ಟೇ ಹೆಸರುವಾಸಿಯಾಗಿದೆ. ಈಗಾಗಲೇ ಹಲವಾರು ಕ್ರೀಡಾಪಟುಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸಿ ಜಿಲ್ಲೆಗೆ ಹೆಸರು ತಂದಿದ್ದಾರೆ. ಈಗಲೂ ಹಲವಾರು ಕ್ರೀಡಾಪಟುಗಳು ಕ್ರೀಡೆಯಲ್ಲಿ ತೊಡಗಿಸಿಕೊಂಡವರಿದ್ದಾರೆ. ಜಿಲ್ಲೆಯ ಮುಖ್ಯ ಆಕರ್ಷಣೆ ಹಾಕಿ ಕ್ರೀಡೆ. ಈ ಕ್ರೀಡೆಯಲ್ಲಿಯೇ ಅನೇಕರು ಭಾರತ ತಂಡವನ್ನೂ ಪ್ರತಿನಿಧಿಸಿದವರಿದ್ದಾರೆ. ಆದರೆ, ಕೊಡಗಿನಲ್ಲಿ ಕ್ರೀಡಾಪಟುಗಳಿಗೆ ಮೂಲಸೌಕರ್ಯ ಇಲ್ಲದಿರುವುದು ವಿಪರ್ಯಾಸ.

ಇತ್ತೀಚೆಗೆ ಜಿಲ್ಲೆಯ ಒಂದಷ್ಟು ಕಡೆ ಟರ್ಫ್ ಮೈದಾನಗಳು ನಿರ್ಮಾಣವಾಗಿದೆ. ಆದರೆ, ಗೋಣಿಕೊಪ್ಪದಲ್ಲಿ ಸುಸಜ್ಜಿತ ಕ್ರೀಡಾಂಗಣ ಇಲ್ಲದೆ ಕ್ರೀಡಾಪಟುಗಳು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಇತ್ತೀಚೆಗೆ ಪೊನ್ನಂಪೇಟೆ ತಾಲೂಕು ನಿರ್ಮಾಣವಾಗಿ ಹಲವು ಅಭಿವೃದ್ಧಿ ಕೆಲಸಗಳು ನಡೆಯುತ್ತಿವೆ. ಆದರೆ, ತಾಲೂಕು ಕ್ರೀಡಾಂಗಣದ ಕೊರತೆ ಕಾಡುತ್ತಿದೆ. ಪೊನ್ನಂಪೇಟೆಯಲ್ಲಿ ಸುಸಜ್ಜಿತ ಟರ್ಫ್ ಮೈದಾನವಿದ್ದರೂ ಉಳಿದ ಕ್ರೀಡೆಗೆ ಮೈದಾನದ ಅಗತ್ಯವಿದೆ. ಗೋಣಿಕೊಪ್ಪದಲ್ಲಿ ಇರುವ ಒಂದು ಮೈದಾನದಲ್ಲಿಯೇ ಎಲ್ಲವೂ ಆಗಬೇಕು. ದಸರಾ ಸಂದರ್ಭದಲ್ಲಿ ಸಾಂಸ್ಕೃತಿಕ ವೇದಿಕೆ ನಿರ್ಮಾಣವಾಗುವುದು ಇದೇ ಮೈದಾನದಲ್ಲಿ. ಮೈದಾನ ಬಿಟ್ಟರೆ ಬೇರೆ ಯಾವುದೇ ಮೂಲಸೌಕರ್ಯಗಳು ಇಲ್ಲ. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಅಡಿಯಲ್ಲಿ ಮೈದಾನವಿದೆ. ಪ್ರತಿ ವರ್ಷ ಇಲ್ಲಿ ಹತ್ತಾರು ಕ್ರೀಡಾಕೂಟಗಳು ಆಯೋಜನೆಗೊಳ್ಳುತ್ತವೆ. ಆದರೆ, ಕ್ರೀಡಾಪಟುಗಳಿಗೆ, ಕ್ರೀಡಾಭಿಮಾನಿಗಳಿಗೆ ಪೂರಕ ವ್ಯವಸ್ಥೆ ಇಲ್ಲದಾಗಿದೆ. ಶೌಚಗೃಹ, ಗ್ಯಾಲರಿ ನಿರ್ಮಾಣವಾಗಬೇಕಿದೆ ಎಂಬುದು ಕ್ರೀಡಾಸಕ್ತರ ಮನವಿ.

ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಒಳಾಂಗಣ, ಹೊರಾಂಗಣ ಕ್ರೀಡೆಗೆ ವ್ಯವಸ್ಥೆ ಇದ್ದರೂ ಕ್ರೀಡಾಪಟುಗಳು ಗೋಣಿಕೊಪ್ಪದಿಂದ ಪ್ರತಿನಿತ್ಯ ಅಲ್ಲಿಗೆ ಹೋಗುವುದು ಕಷ್ಟಸಾಧ್ಯ. ಹಾಗಾಗಿ ಗೋಣಿಕೊಪ್ಪದಲ್ಲಿಯೇ ಒಂದು ಸುಸಜ್ಜಿತ ಒಳಾಂಗಣ ಮತ್ತು ಹೊರಾಂಗಣ ಕ್ರೀಡಾಂಗಣ ನಿರ್ಮಾಣವಾಗಬೇಕು ಎಂಬುದು ಇಲ್ಲಿನ ಕ್ರೀಡಾ ಪ್ರಿಯರ ಆಗ್ರಹ.

ನಂ.1 ಕನ್ನಡ ದಿನಪತ್ರಿಕೆ ‘ವಿಜಯವಾಣಿ’ ವತಿಯಿಂದ ನಗರದಲ್ಲಿ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಜಿಪಿಎಲ್ ತಂಡದವರು ಪೊನ್ನಂಪೇಟೆ ತಾಲೂಕಿಗೆ ಸುಸಜ್ಜಿತ ಕ್ರೀಡಾಂಗಣದ ಅಗತ್ಯತೆಯ ಬಗ್ಗೆ ಬೆಳಕು ಚೆಲ್ಲಿದರು.

ಗೋಣಿಕೊಪ್ಪದಲ್ಲಿ ಕ್ರೀಡಾ ಇಲಾಖೆಗೆ ಸೇರಿದ ಹೊರಾಂಗಣ ಮೈದಾನ ಮಾತ್ರ ಇದೆ. ಸಮೀಪದಲ್ಲಿ ಗ್ರಾಪಂಗೆ ಸೇರಿದ ಜಾಗವಿದ್ದು ಅಲ್ಲಿ ಒಳಾಂಗಣ ಕ್ರೀಡಾಂಗಣ ನಿರ್ಮಾಣವಾದರೆ ಈ ಭಾಗದಲ್ಲಿರುವ ಕ್ರೀಡಾಪಟುಗಳಿಗೆ ಉಪಯೋಗವಾಗಲಿದೆ. ಸ್ಪರ್ಧಾತ್ಮಕ ಕ್ರೀಡಾಕೂಟಗಳಲ್ಲಿ ಭಾಗವಹಿಸಬಹುದು ಎನ್ನುತ್ತಾರೆ. ಈಗಾಗಲೇ ಮಳೆಗಾಲ ಮುಗಿಯುತ್ತಾ ಬಂದಿದ್ದು ಜಿಲ್ಲೆಯಲ್ಲಿ ಕ್ರೀಡಾ ಚಟುವಟಿಕೆ ಪ್ರಾರಂಭವಾಗಲಿದೆ. ಈ ಹಿನ್ನೆಲೆಯಲ್ಲಿ ಮೈದಾನದ ಬಗ್ಗೆ ಅಧಿಕಾರಿಗಳು ಗಮನಹರಿಸಿದರೆ ಒಳ್ಳೆಯದು.

ಇತ್ತೀಚೆಗೆ ಗೋಣಿಕೊಪ್ಪ ಮೈದಾನಕ್ಕೆ ಭೇಟಿ ನೀಡಿದ್ದ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಅವರು ಕ್ರೀಡಾಂಗಣವನ್ನು ವೀಕ್ಷಿಸಿ ಮೂಲಸೌಕರ್ಯ ಕಲ್ಪಿಸಿಕೊಡುವ ಭರವಸೆ ನೀಡಿದ್ದಾರೆ. ಕ್ರೀಡಾಂಗಣಕ್ಕೆ ಸುಸಜ್ಜಿತ ಪ್ರೇಕ್ಷಕರ ಗ್ಯಾಲರಿ, ಶೌಚಗೃಹ, ಸೋಲಾರ್ ದೀಪದ ವ್ಯವಸ್ಥೆ ಮಾಡುವಂತೆ ಸೂಚಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net