ಗೋಡೆ ಬರಹ ಖಂಡಿಸಿ ಬ್ರಾಹ್ಮಣ ಸಂಘಟನೆಗಳ ಒಕ್ಕೂಟದಿಂದ ಪ್ರತಿಭಟನೆ

2
Published on

ಮೈಸೂರು: ದೆಹಲಿಯ ಜೆಎನ್‌ಯು ವಿಶ್ವವಿದ್ಯಾಲಯದ ಗೋಡೆಗಳ ಮೇಲೆ ಬ್ರಾಹ್ಮಣ ಜನಾಂಗದ ವಿರುದ್ಧ ಬರೆದಿರುವ ಕಿಡಿಗೇಡಿಗಳನ್ನು ಬಂಧಿಸುವಂತೆ ಆಗ್ರಹಿಸಿ ಮೈಸೂರು ನಗರ, ಜಿಲ್ಲಾ ಬ್ರಾಹ್ಮಣ ಸಂಘ ಹಾಗೂ ಮೈಸೂರು ಬ್ರಾಹ್ಮಣ ಸಂಘಟನೆಗಳ ಒಕ್ಕೂಟದಿಂದ ನಗರದಲ್ಲಿ ಶನಿವಾರ ಪ್ರತಿಭಟನೆ ನಡೆಯಿತು.
ಸಮಾಜದ ಶಾಂತಿ ಕದಡುವ ಇಂತಹ ಗೋಡೆ ಬರಹಗಳನ್ನು ತಡೆಯಬೇಕು. ಯಾರೂ ಇಂತಹ ಕೃತ್ಯವೆಸಗುತ್ತಿದ್ದಾರೆ. ಅಂತಹವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ನಗರದ ನ್ಯಾಯಾಲಯದ ಮುಂಭಾಗದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಸುಪ್ರೀಂಕೋರ್ಟ್ ತೀರ್ಪಿನಂತೆ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಆರ್ಥಿಕವಾಗಿ ಹಿಂದುಳಿದವರಿಗೆ ಶೇ.10ರಷ್ಟು ಮೀಸಲು ನೀಡುವ ಕ್ರಮವನ್ನು ತಪ್ಪಾಗಿ ಅರ್ಥೈಸಲಾಗುತ್ತಿದೆ. ಸುಮಾರು 144 ಮೇಲ್ಜಾತಿ ಹಾಗೂ ಪಂಗಡಗಳಿಗೆ ಶೇ.10ರಷ್ಟು ಮೀಸಲಾತಿ ದೊರೆತರೂ ಕೇವಲ ಬ್ರಾಹ್ಮಣರಿಗೆ ಮೀಸಲು ನೀಡಲಾಗುತ್ತಿದೆ ಎಂಬಂತೆ ಸಮಾಜದಲ್ಲಿ ಬಿಂಬಿಸಲಾಗುತ್ತಿದೆ ಎಂದು ದೂರಿದರು.
ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ.ಟಿ. ಪ್ರಕಾಶ್ ಮಾತನಾಡಿ, ಬ್ರಾಹ್ಮಣ ಜನಾಂಗದ ಮೇಲೆ ಕೆಲವು ಕಿಡಿಗೇಡಿಗಳು ಪದೇ ಪದೆ ಅವಹೇಳನಕಾರಿಯಾದ ಹೇಳಿಕೆ ನೀಡುವ ಮೂಲಕ ಸಮಾಜದಲ್ಲಿ ಶಾಂತಿ ಕದಡಲು ಮುಂದಾಗುತ್ತಿದ್ದಾರೆ. ಈ ಹಿಂದೆ ಪ್ರಗತಿಪರ ಹೋರಾಟಗಾರ ಪ. ಮಲ್ಲೇಶ್ ಬ್ರಾಹ್ಮಣ ಜನಾಂಗದ ವಿರುದ್ಧ ಮಾತನಾಡಿ ರಾಜ್ಯದಲ್ಲಿ ಬ್ರಾಹ್ಮಣ ಸಮಾಜ ಭುಗಿಲೇಳುವಂತೆ ಮಾಡಿದ್ದರು. ಈಗ ಶಾಸಕ ಯತೀಂದ್ರ ಸಿದ್ದರಾಮಯ್ಯ ಅವರು ಬ್ರಾಹ್ಮಣ ಜನಾಂಗ ಶೇ.3ರಷ್ಟು ಇದ್ದು, ಶೇ.10 ರಷ್ಟು ಮೀಸಲಾತಿ ಕಲ್ಪಿಸಲಾಗಿದೆ ಎಂದು ಸಾರ್ವಜನಿಕ ವೇದಿಕೆಯಲ್ಲಿ ತಪ್ಪಾಗಿ ಹೇಳಿ ಜಾತಿ, ಜಾತಿಗಳ ವಿರುದ್ಧ ಸಂಘರ್ಷ ಬಿತ್ತುವ ಕೆಲಸಕ್ಕೆ ಮುಂದಾಗಿದ್ದಾರೆ ಎಂದು ಆರೋಪಿಸಿದರು.
ಶಿಕ್ಷಣದ ಮೂಲಕ ಭವಿಷ್ಯದ ಯುವಕರನ್ನು ರೂಪಿಬೇಕಿರುವ ಜೆಎನ್‌ಯುನಲ್ಲಿ ದೇಶದ ವಿರುದ್ಧ ಘೋಷಣೆ ಕೂಗುವಂತಹ ಚಟುವಟಿಕೆ ಸೇರಿದಂತೆ ಅನೇಕ ಕಾನೂನು ಬಾಹಿರ ಚಟುವಟಿಕೆ ನಡೆಸಲು ಅವಕಾಶ ನೀಡಲಾಗುತ್ತಿದೆ. ಎಲ್ಲರಿಗೂ ಶಿಕ್ಷಣ ದೊರೆಯಬೇಕು ಎನ್ನುವ ಸರ್ಕಾರದ ನಿಯಮಕ್ಕೆ ವಿರುದ್ಧವಾಗಿ ಬ್ರಾಹ್ಮಣರು ಜೆಎನ್‌ಯು ಬಿಟ್ಟು ಹೋಗಿ ಎಂದು ಗೋಡೆಗಳ ಮೇಲೆ ಬರೆಯಲಾಗಿದೆ. ಇಂತಹ ಕಿಡಿಗೇಡಿಗಳನ್ನು ಬಂಧಿಸಿ ಕ್ರಮಕೈಗೊಳ್ಳಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು.
ಬ್ರಾಹ್ಮಣ ಅಭಿವೃದ್ಧಿ ಮಂಡಳಿ ನಿರ್ದೇಶಕ ಎಂ.ಆರ್. ಬಾಲಕೃಷ್ಣ, ಇಳೈಆಳ್ವಾರ್ ಸ್ವಾಮಿ, ಲೇಖಕ ರಂಗನಾಥ್, ನಗರಪಾಲಿಕೆ ಮಾಜಿ ಸದಸ್ಯೆ ಸೌಭಾಗ್ಯ ಮೂರ್ತಿ, ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆಯ ಪ್ರಧಾನ ಕಾರ್ಯದರ್ಶಿ ವಿಕ್ರಂ ಅಯ್ಯಂಗಾರ್, ಮುಖಂಡರಾದ ಅಜಯ್ ಶಾಸ್ತ್ರಿ, ರಾಕೇಶ್ ಭಟ್, ಮುಳ್ಳೂರು ಗುರುಪ್ರಸಾದ್, ಕಡಕೊಳ ಜಗದೀಶ್, ವಿಕಾಸ್ ಶಾಸ್ತ್ರಿ, ಸುಧೀಂದ್ರ, ಓಂಶ್ರೀನಿವಾಸ್, ಅಪೂರ್ವಾ ಸುರೇಶ್, ಮಿರ್ಲೆ ಫಣೀಶ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net