ಹಾಸನ: ಹಾಸನ ಜಿಲ್ಲೆಯಲ್ಲಿ ಮಳೆಯ ಅಬ್ಬರ ಮುಂದುವರಿದಿದೆ. ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಮನೆಯ ಗೋಡೆ ಕುಸಿದು ಬಿದ್ದು ಬಾಲಕ ಸಾವನ್ನಪ್ಪಿರುವ ಘಟನೆ ಚನ್ನರಾಯಪಟ್ಟಣ ತಾಲ್ಲೂಕಿನ, ನುಗ್ಗೇಹಳ್ಳಿ ಹೋಬಳಿ, ಭೂವನಹಳ್ಳಿ (ವಡ್ಡರಹಟ್ಟಿ) ಗ್ರಾಮದಲ್ಲಿ ನಡೆದಿದೆ.
ಪ್ರಜ್ವಲ್ (13) ಮೃತಪಟ್ಟ ಬಾಲಕ. ವಿಜಯಕುಮಾರ್-ಚೈತ್ರ ದಂಪತಿಗೆ ಇಬ್ಬರು ಮಕ್ಕಳಿದ್ದು ಪ್ರಜ್ವಲ್ ಮೂರಾರ್ಜಿ ದೇಸಾಯಿ ಶಾಲೆಯಲ್ಲಿ ಏಳನೇ ತರಗತಿ ಓದುತ್ತಿದ್ದ. ಮೂರು ದಿನ ಹಾಸ್ಟೆಲ್‌ಗೆ ರಜೆ ನೀಡಿದ್ದರಿಂದ ನಿನ್ನೆ ಸಂಜೆ ವಿಜಯಕುಮಾರ್ ಮಗನನ್ನು ಮನೆಗೆ ಕರೆದುಕೊಂಡು ಬಂದಿದ್ದರು.
ಸ್ನೇಹಿತರೊಂದಿಗೆ ಆಟವಾಡಿದ ಪ್ರಜ್ವಲ್ ಮನೆಗೆ ಬಂದು ಊಟ ಮಾಡಿ ಹತ್ತು ಗಂಟೆಯವರೆಗೂ ಟಿವಿ ನೋಡಿ ಅಜ್ಜಿ ತಾಯಮ್ಮ, ಅಣ್ಣ ಮನು ಮಂಚದ ಮೇಲೆ ಮಲಗಿದ್ದಾನೆ. ಅಣ್ಣನೊಂದಿಗೆ ಜಗಳವಾಡಿ ನಂತರ ನೆಲದ ಮೇಲೆ ಮಲಗಿದ್ದು, ಅಜ್ಜಿ ಮಂಚದ ಮೇಲೆಯೇ ಮಲಗು ಎಂದರು ಕೇಳದೆ ಸೆಕೆ ಎಂದು ನೆಲದ ಮೇಲೆ ಪ್ರತ್ಯೇಕವಾಗಿ ಮಲಗಿದ್ದಾನೆ. ಮಳೆಯಿಂದ ಗೋಡೆ ಶೀತಗೊಂಡಿದ್ದು, ಮುಂಜಾನೆ ನಾಲ್ಕು ಗಂಟೆ ಸಮಯದಲ್ಲಿ ಕುಸಿದು ಪ್ರಜ್ವಲ್ ತಲೆಯ ಬಿದ್ದಿದ್ದು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ.
ಅಜ್ಜಿ ತಾಯಮ್ಮಗೂ ಗಾಯಗಳಾಗಿದ್ದು ಕೂದಲೆಳೆ ಅಂತರದಲ್ಲಿ ಪ್ರಜ್ವಲ್ ಅಜ್ಜಿ ತಾಯಮ್ಮ ಹಾಗೂ ಅಣ್ಣ ಮನು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನಾ ಸ್ಥಳಕ್ಕೆ ತಹಸೀಲ್ದಾರ್ ಗೋವಿಂದ ರಾಜು, ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ವರಮಹಾಲಕ್ಷ್ಮಿ ಹಬ್ಬದ ದಿನ ಸಂಭ್ರಮದಲ್ಲಿರಬೇಕಾದ ಮನೆಯಲ್ಲಿ ಸೂತಕ ಮನೆ ಮಾಡಿದೆ. ಮಗನನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು. ನುಗ್ಗೇಹಳ್ಳಿ ಪೊಲೀಸ್ ಠಾಣೆ ಪ್ರಕರಣ ದಾಖಲಾಗಿದೆ.