

ಗೋಕಾಕ: ಗೋಕಾಕ ತಾಲೂಕನ್ನು ನೂತನ ಜಿಲ್ಲೆಯನ್ನಾಗಿ ಘೋಷಿಸುವಂತೆ ಆಗ್ರಹಿಸಿ ಗೋಕಾಕ ಜಿಲ್ಲಾ ಹೋರಾಟ ಚಾಲನಾ ಸಮಿತಿ, ವಕೀಲರ ಸಂಘ ಹಾಗೂ ವಿವಿಧ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ಗುರುವಾರ ಪ್ರತಿಭಟಿಸಲಾಯಿತು.
ನಗರದ ಬಸವೇಶ್ವರ ವೃತ್ತದಲ್ಲಿ ಸೇರಿದ ನಗರ ಹಾಗೂ ಗ್ರಾಮೀಣ ಭಾಗದಿಂದ ಆಗಮಿಸಿದ್ದ ಸಾರ್ವಜನಿಕರು ಸಚಿವ ಉಮೇಶ ಕತ್ತಿ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಿ, ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಜಿಲ್ಲಾ ಹೋರಾಟ ಚಾಲನಾ ಸಮಿತಿ ಅಧ್ಯಕ್ಷ, ಶೂನ್ಯ ಸಂಪಾದನ ಮಠದ ಪೀಠಾಧಿಪತಿ ಮುರುಘರಾಜೇಂದ್ರ ಸ್ವಾಮೀಜಿ ಮಾತನಾಡಿ, ಬೆಳಗಾವಿ ಜಿಲ್ಲೆಯನ್ನು ವಿಭಜಿಸಿ ಹೊಸ ಜಿಲ್ಲೆ ಮಾಡುವುದಾದರೆ ಮೊದಲು ಗೋಕಾಕ ಜಿಲ್ಲೆ ಮಾಡಲೇಬೇಕು. ಪಿ.ಸಿ.ಗದ್ದಿಗೌಡರ, ಹುಂಡೇಕರ ಹಾಗೂ ವಾಸುದೇವ ಆಯೋಗಗಳ ವರದಿ ಆಧರಿಸಿ
1997ರಲ್ಲಿ ಮಾಜಿ ಸಿಎಂ, ದಿ.ಜೆ.ಎಚ್.ಪಟೇಲ್ ಅವರು ಗೋಕಾಕ ಜಿಲ್ಲೆ ಎಂದು ಘೋಷಿಸಿದ್ದರು. ಕಾರಣಾಂತರಗಳಿಂದ ಮತ್ತೆ ತಾವು ಹೊರಡಿಸಿದ್ದ ಗೆಜೆಟ್ ಅನ್ನು ರದ್ದುಪಡಿಸಿದ್ದರು. ಅಂದಿನಿಂದ ಇಂದಿನವರೆಗೆ ಗೋಕಾಕ ಜಿಲ್ಲೆಗೆ ಆಗ್ರಹಿಸಿ ನಿರಂತರ ಹೋರಾಟ ಮಾಡಿ ಕಾಲಕಾಲಕ್ಕೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗುತ್ತಿದ್ದರೂ ಉಮೇಶ ಕತ್ತಿ ಅವರು ಬೆಳಗಾವಿಯನ್ನು ವಿಭಾಗೀಯವಾಗಿ ಮೂರು ಜಿಲ್ಲೆಯನ್ನಾಗಿ ಮಾಡಬೇಕು ಎಂದು ಹೇಳಿಕೆ ನೀಡಿ ಗೋಕಾಕ ಜನರನ್ನು ಕೆರಳಿಸಿದ್ದಾರೆ.
ಜವಾಬ್ದಾರಿಯುತ ಸ್ಥಾನದಲ್ಲಿದ್ದುಕೊಂಡು ಅವರು ಅಸಮಂಜಸ ಹೇಳಿಕೆ ನೀಡುವುದು ಘನತೆಗೆ ಶೋಭೆ ತರುವಂತದ್ದಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸರ್ಕಾರ ಎಚ್ಚೆತ್ತುಕೊಂಡು ಕೂಡಲೇ ಗೋಕಾಕ ಜಿಲ್ಲೆಯನ್ನಾಗಿ ಘೋಷಣೆ ಮಾಡಬೇಕು. ಇಲ್ಲದಿದ್ದರೆ ಗೋಕಾಕ ಜನ ಹೋರಾಟದ ಹಾದಿ ತುಳಿಯಬೇಕಾಗುತ್ತದೆ ಎಂದು ಸರ್ಕಾರವನ್ನು ಎಚ್ಚರಿಸಿದರು. ಮುಖಂಡರಾದ ಬಸಗೌಡ ಪಾಟೀಲ, ಬಿ.ಆರ್.ಕೊಪ್ಪ, ಎಂ.ಆರ್.ಬೋವಿ, ಶಶಿಧರ ದೇಮಶೆಟ್ಟಿ ಮಾತನಾಡಿ, ಸರ್ಕಾರ ಎಚ್ಚೆತ್ತುಕೊಂಡು ಗೋಕಾಕ ನೂತನ ಜಿಲ್ಲೆ ಘೋಷಿಸಬೇಕೆಂದು ಆಗ್ರಹಿಸಿದರು. ನಗರಸಭೆ ಅಧ್ಯಕ್ಷ ಜಯಾನಂದ ಹುಣಚ್ಯಾಳಿ, ನಿಂಗಪ್ಪ ಕುರಬೇಟ, ಬಿಜೆಪಿ ನಗರ ಮಂಡಳ ಅಧ್ಯಕ್ಷ ಭೀಮಶಿ ಭರಮನ್ನವರ, ಎಲ್. ಟಿ.ತಪಸಿ, ಶಂಕರ ಗೋರೋಶಿ, ಬಸವರಾಜ ಖಾನಪ್ಪನವರ, ಗಣಪತಿ ಈಳಿಗೇರ ಇತರರು ಇದ್ದರು.
ಗೋಕಾಕ ಜಿಲ್ಲೆಗಾಗಿ 4 ದಶಕಗಳಿಂದ ನಡೆಯುತ್ತಿರುವ ಹೋರಾಟಕ್ಕೆ ಜಾರಕಿಹೊಳಿ ಸಹೋದರರು ಬೆಂಬಲ ನೀಡಿ, ಮುಖ್ಯಮಂತ್ರಿಗಳ ಬಳಿ ನಿಯೋಗ ಕರೆದೊಯ್ದು ಗೋಕಾಕ ಜಿಲ್ಲೆ ಮಾಡುವಂತೆ ಒತ್ತಾಯಿಸಿದ್ದಾರೆ. ಒಂದು ಸರ್ಕಾರ ತೆಗೆದು ಮತ್ತೊಂದು ಸರ್ಕಾರ ರಚಿಸುವ ಶಕ್ತಿ ಇರುವ ಜಾರಕಿಹೊಳಿ ಸಹೋದರರಿಗೆ ಗೋಕಾಕ ಜಿಲ್ಲೆ ಮಾಡಿಸುವುದು ದೊಡ್ಡ ಕೆಲಸವಲ್ಲ. ನಾಲ್ವರು ಜಾರಕಿಹೊಳಿ ಸಹೋದರರು ಮನಸ್ಸು ಮಾಡಿದರೆ ಗೋಕಾಕ ಜಿಲ್ಲೆಯಾಗುವುದರಲ್ಲಿ ಎರಡು ಮಾತಿಲ್ಲ. ಆ ನಿಟ್ಟಿನಲ್ಲಿ ಪ್ರಯತ್ನಿಸಬೇಕು ಎಂದು ಶ್ರೀಗಳು ಹೇಳಿದರು.