

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ
ನಮ್ಮ ದೇಶದಲ್ಲಿ ಗೋವುಗಳು ಮಾತೃ ಸ್ಥಾನ ಪಡೆದಿವೆ. ಎಲ್ಲಿ ಗೋಹತ್ಯೆ ನಡೆದಿವೆಯೋ ಆ ದೇಶಗಳಲ್ಲಿ ಅವಘಡಗಳು ಸಂಭವಿಸಿವೆ. ಮುಂದಿನ 8 ವರ್ಷಗಳಲ್ಲಿ ಇನ್ನಷ್ಟು ದೇಶಗಳು ಬಾಧೆ ಅನುಭವಿಸಲಿವೆ ಎಂದು ಗೌರಿಗದ್ದೆಯ ದತ್ತಾಶ್ರಮದ ವಿನಯ ಗುರೂಜಿ ಭವಿಷ್ಯ ನುಡಿದರು.
ತಾಲೂಕಿನ ಭಂಡಿವಾಡ ಗ್ರಾಮದಲ್ಲಿ ಭಾನುವಾರ ಏರ್ಪಡಿಸಿದ್ದ ಪಂಚವಟಿ ಗೋಶಾಲೆ ಉದ್ಘಾಟನೆ ಹಾಗೂ ಸಾವಯವ ಕೃಷಿ ದೀಕ್ಷಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮುಂದೊಂದು ದಿನ ರಾಜಕೀಯ ಕೊನೆಗೊಳ್ಳಬಹುದು. ಆದರೆ, ಧರ್ಮಕ್ಕೆ ಅಂತ್ಯವಿಲ್ಲ. ಇದನ್ನು ಅರಿತು ನಾವು ಜೀವನ ನಡೆಸಬೇಕಿದೆ. ಉನ್ನತ ಚಿಂತನೆಗಳಿಂದ ನಾವು ಪ್ರಬಲರಾಗಬಹುದು ಎಂದರು.
ಪಾರಂಪರಿಕ ವೈದ್ಯ ಡಾ. ಹನುಮಂತ ಮಳಲಿ ಮಾತನಾಡಿ, ಆಕಳ ಹೊಟ್ಟೆಯಲ್ಲಿ ಅಚ್ಚೇರು ಬಂಗಾರು ಎಂಬ ಗಾದೆ ಇದೆ. ಇದು ಸತ್ಯವಾಗಿಯೂ ಹೌದು. ಅದರ ಪ್ರತಿಯೊಂದು ಭಾಗವೂ ಬಂಗಾರವೇ. ಇಂಥ ಬಂಗಾರವನ್ನು ನಾವು, ನೀವೆಲ್ಲ ಸಾಕಬೇಕು. ರೋಗ-ರುಜಿನಗಳಿಂದ ದೂರ ಇರಬೇಕು. ನಮ್ಮ ದೇಶದಲ್ಲಿ 2 ಕೋಟಿ 95 ಲಕ್ಷ ಜನರು ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದಾರೆ. ಪ್ರತಿ ದಿನ 6 ಸಾವಿರ ಕ್ಯಾನ್ಸರ್ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಮನೆಯಲ್ಲಿ ಗೋವು ಇದ್ದರೆ ಸಾಕು ಈ ರೋಗದಿಂದ ಮುಕ್ತಿ ಪಡೆಯಬಹುದು ಎಂದರು.
ಗದಗ ಶ್ರೀ ಶಿವಾನಂದ ಬೃಹನ್ಮಠದ ಶ್ರೀ ಸದಾಶಿವಾನಂದ ಭಾರತೀ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ವಿಜಯಪುರ ಜ್ಞಾನಯೋಗಾಶ್ರಮದ ಶ್ರೀ ಸಿದ್ದೇಶ್ವರ ಸ್ವಾಮಿಗಳು ನಮ್ಮ ಪಾಲಿನ ದೈವ. ಅವರೊಟ್ಟಿಗೆ ಒಡನಾಟವಿದ್ದ ನಮಗೆ ಇಂದಿಗೂ ದುಃಖದಿಂದ ಹೊರಬರಲು ಆಗುತ್ತಿಲ್ಲ. ಅವರು ಹೇಳಿದ ಪ್ರತಿಯೊಂದು ಕೆಲಸವನ್ನು ನಾವು ಮಾಡಬೇಕು ಎಂದರಲ್ಲದೆ, ಗೋವು ನಮ್ಮ ಸಂಸ್ಕಾರದ ಅಸ್ಮಿತೆ ಎಂದರು.
ಪಂಚವಟಿ ಗೋಶಾಲೆಯ ಮುಖ್ಯಸ್ಥ ಡಾ. ಎ.ಸಿ. ವಾಲಿ ಮಹಾರಾಜ ಪ್ರಾಸ್ತಾವಿಕವಾಗಿ ಮಾತನಾಡಿ, ಈ ಪಂಚವಟಿಯಲ್ಲಿ 7 ವಿಭಾಗಗಳನ್ನು ತೆರೆಯಲು ಉದ್ದೇಶಿಸಲಾಗಿದೆ. ಇದರಲ್ಲಿ 4 ಕರು ಸಾಕಣೆ, ಒಂದು ಕುದುರೆ ಸಾಕಣೆ ಹಾಗೂ ಉಳಿದೆರಡು ದೇಸಿ ಹಸುಗಳನ್ನು ಸಾಕಣೆಗೆ ವಿಭಾಗ ಮಾಡಲಾಗುವುದು. ಪ್ರತಿ ವರ್ಷ ಮೂರು ದಿನಗಳವರೆಗೆ ಗೋ ಉತ್ಸವ ಆಚರಿಸಲಾಗುವುದು. 10 ಆಕಳುಗಳನ್ನು ರೈತರಿಗೆ ದಾನ ಮಾಡಲಾಗುವುದು. ಸಾವಯವ ಕೃಷಿಗೆ ಉತ್ತೇಜನ ನೀಡಲಾಗುವುದು ಎಂದರು.
ಶಿಗ್ಗಾಂವಿಯ ವಿರಕ್ತಮಠದ ಶ್ರೀ ಸಂಗನಬಸವ ಸ್ವಾಮಿಗಳು ಸಮ್ಮುಖ ವಹಿಸಿದ್ದರು. ಈಶ್ವರಪ್ಪ ಉಳ್ಳಾಗಡ್ಡಿ ಅಧ್ಯಕ್ಷತೆ ವಹಿಸಿದ್ದರು. ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಯಿತು.
ಕರ್ನಾಟಕ ಲೋಕಸೇವಾ ಆಯೋಗದ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ ದಂಪತಿ, ಸದಸ್ಯೆ ಬಿ.ವಿ. ಗೀತಾ, ವರದಶ್ರೀ ಫೌಂಡೇಷನ್ ಅಧ್ಯಕ್ಷ ಮಲ್ಲಿಕಾರ್ಜುನ ರಡ್ಡೇರ ಇತರರು ಉಪಸ್ಥಿತರಿದ್ದರು.