ಗೋ ಮೂತ್ರ ಸಿಂಪಡಿಸಿ ಈದ್ಗಾ ಮೈದಾನ ಶುದ್ಧೀಕರಿಸಿದ ಮುತಾಲಿಕ್

h11-mutalik 1
Published on

ಹುಬ್ಬಳ್ಳಿ: ಇಲ್ಲಿಯ ಕಿತ್ತೂರ ಚನ್ನಮ್ಮ ವೃತ್ತದ ಬಳಿಯ ಈದ್ಗಾ ಮೈದಾನದಲ್ಲಿ ಗುರುವಾರ ಟಿಪ್ಪು ಜಯಂತಿ ಆಚರಿಸಿದ ಹಿನ್ನೆಲೆಯಲ್ಲಿ ಶ್ರೀ ರಾಮ ಸೇನೆ ಸಂಸ್ಥಾಪಕ ಪ್ರಮೋದ ಮುತಾಲಿಕ ಮೈದಾನದಲ್ಲಿ ಶುಕ್ರವಾರ ಗೋ ಮೂತ್ರ ಸಿಂಪಡಿಸಿ ಕನಕ ಜಯಂತಿ ಆಚರಿಸಿದರು.

ಈದ್ಗಾ ಮೈದಾನದಲ್ಲಿ ಎಐಎಂಐಎಂ ಪಕ್ಷದಿಂದ ಟಿಪ್ಪು ಜಯಂತಿ ಆಚರಣೆಗೆ ಮನವಿ ಮಾಡಿದ ಬೆನ್ನಲ್ಲೇ ಶ್ರೀರಾಮ ಸೇನೆ ಕನಕ ಜಯಂತಿ ಆಚರಣೆಗೆ ಅವಕಾಶ ಕೇಳಿತ್ತು. ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯು ಟಿಪ್ಪು ಸೇರಿ ಎಲ್ಲ ಜಯಂತಿ ಆಚರಣೆಗೆ ಶರತ್ತುಬದ್ಧ ಅನುಮತಿ ನೀಡಿತ್ತು. ಈ ಹಿನ್ನೆಲೆಯಲ್ಲಿ ಗುರುವಾರ ಟಿಪ್ಪು ಜಯಂತಿ ಆಚರಿಸಲಾಗಿತ್ತು.

ಶುಕ್ರವಾರ ಬೆಳಗ್ಗೆ ಪ್ಲಾಸ್ಟಿಕ್ ಲೋಟದಲ್ಲಿ ಗೋ ಮೂತ್ರ ಹಿಡಿದುಕೊಂಡು ಬಂದಿದ್ದ ಮುತಾಲಿಕ್ ಮೈದಾನದ ಸುತ್ತ ಸಿಂಪಡಿಸಿದರು. ಬಳಿಕ ಭಕ್ತ ಕನಕದಾಸರ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿ ಪೂಜೆ ಸಲ್ಲಿಸಿದರು. ಮೈದಾನದಲ್ಲಿ ಪೆಂಡಾಲ್ ಹಾಕಲಾಗಿತ್ತು.

‘ಇದು ಪವಿತ್ರವಾದ ನೆಲ. ಇಲ್ಲಿ ನಿನ್ನೆ ಮತಾಂಧ, ಕ್ರೂರಿ, ಹಿಂದು ವಿರೋಧಿ ಟಿಪ್ಪು ಜಯಂತಿ ಆಚರಿಸುವ ಮೂಲಕ ಈ ನೆಲವನ್ನು ಅಪವಿತ್ರಗೊಳಿಸಲಾಗಿದೆ. ಅದಕ್ಕೆ ನಾವೆಲ್ಲ ಸೇರಿ ಗೋ ಮೂತ್ರ ಸಿಂಪಡಿಸಿ ಮೈದಾನವನ್ನು ಪವಿತ್ರವನ್ನಾಗಿ ಮಾಡಿ ಕನಕ ಜಯಂತಿ ಆಚರಣೆ ಮಾಡಿದ್ದೇವೆ. ಭಕ್ತ ಕನಕದಾಸರ ವಿಚಾರಧಾರೆ, ಸಂದೇಶ ಇವತ್ತಿಗೂ ಪ್ರಸ್ತುತವಾಗಿದೆ. ಒಡಕು, ಅಸಮಾನತೆ ಹೆಚ್ಚುತ್ತಿರುವ ಇಂದಿನ ಸಮಾಜದಲ್ಲಿ ಏಕತೆಯ ಸಂದೇಶ ಸಾರಿರುವ ಭಕ್ತ ಕನಕದಾಸರ ಆಶೀರ್ವಾದ ಪಡೆಯುವುದು ನಮ್ಮೆಲ್ಲರಿಗೆ ತುಂಬಾ ಅವಶ್ಯಕತೆ ಇದೆ’ ಎಂದು ಮುತಾಲಿಕ್ ಹೇಳಿದರು.

ಕನಕದಾಸ ಜಯಂತಿ ಆಚರಣೆ ಹಿನ್ನೆಲೆಯಲ್ಲಿ ವ್ಯಾಪರ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net