ಗೋಕರ್ಣದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಸರಳ ಆಚರಣೆ

12gkn1-a2-
Published on

ಗೋಕರ್ಣ: ಪರಶಿವ ಕ್ಷೇತ್ರ ಗೋಕರ್ಣದಲ್ಲಿ ಬಹು ವಿಜೃಂಭಣೆಯಿಂದ ಪ್ರತಿ ವರ್ಷ ನಡೆಯುತ್ತಿದ್ದ ಶ್ರೀಕೃಷ್ಣ ಜನ್ಮಾಷ್ಟಮಿ ಕರೊನಾ ಆತಂಕದ ಹಿನ್ನೆಲೆಯಲ್ಲಿ ಯಾವುದೇ ಅಬ್ಬರವಿಲ್ಲದೆ ನಿರ್ಜನವಾಗಿ ಅತ್ಯಂತ ಸರಳವಾಗಿ ಆಚರಿಸಲ್ಪಟ್ಟಿತು. ವಿವಿಧ ಮಂದಿರಗಳಲ್ಲಿ ಸರ್ಕಾರದ ನಿಯಮ ಪಾಲಿಸಿ ನಡೆದ ಕಾರ್ಯಕ್ರಮದಲ್ಲಿ ಸಂಘಟಕರನ್ನು ಹೊರತಾಗಿ ಸಾರ್ವಜನಿಕ ಭಕ್ತರು ಭಾಗವಹಿಸಿರಲಿಲ್ಲ.

ಶ್ರೀರಾಮಚಂದ್ರಾಪುರ ಮಠದ ಮೂಲ ತಾಣ ಅಶೋಕೆಯಲ್ಲಿ ಚಾತುರ್ವಸ್ಯ ವ್ರತ ನಿರತ ಶ್ರೀರಾಘವೇಶ್ವರ ಭಾರತೀ ಅವರಿಂದ ಜನ್ಮಾಷ್ಟಮಿ ನಿಮಿತ್ತ ವಿಶೇಷ ಪೂಜಾರಾಧನೆ ನಡೆಯಿತು. ನಂತರ ಬಗೆ ಬಗೆಯ ಹೂಗಳಿಂದ ನಿರ್ವಿುಸಲಾದ ಸಾಲಂಕೃತ ಮಂಟಪದಲ್ಲಿ ಕಟ್ಟಲಾದ ಹೂವಿನ ತೊಟ್ಟಿಲಲ್ಲಿ ಮಲಗಿದ ಬಾಲಗೋಪಾಲನಿಗೆ ಮಂಗಳಾರತಿ ಎತ್ತಿ ಶ್ರೀಗಳು ತೊಟ್ಟಲ ತೂಗಿದರು. ಬಾಲಗೋಪಾಲ ವೇಷಧಾರಿ ಮಕ್ಕಳು ಕೂಡ ತೊಟ್ಟಿಲ ತೂಗಿ ಬಾಲಕೃಷ್ಣನಿಗೆ ಜೋಗಳ ಹಾಡಿದರು. ಕಾರ್ಯಕ್ರಮದಲ್ಲಿ ಶ್ರೀ ಪರಿವಾರ, ಕೆಲವೇ ಕೆಲವು ಕಾರ್ಯಕರ್ತರು ಮತ್ತು ನಾಲ್ಕು ಚಿಣ್ಣರು ಮಾತ್ರ ಪಾಲ್ಗೊಂಡರು.

ಮಹಾಬಲೇಶ್ವರ ಮಂದಿರದಲ್ಲಿ ಮೊಸರು ಗಡಿಗೆ ಉತ್ಸವದಲ್ಲಿ ಅಗತ್ಯವಾಗಿ ಬೇಕಾದ ಬೆರಳೆಣಿಕೆಯ ಜನ ಮಾತ್ರ ಇದ್ದರು. ರಥಬೀದಿಯ ಲಕ್ಷ್ಮೀ ವೆಂಕಟೇಶ ಮಂದಿರದಲ್ಲಿ ನಡೆಯುತ್ತಿದ್ದ ಭಜನಾ ಸಪ್ತಾಹ ಮತ್ತು ಮೊಸರು ಗಡಿಗೆ ಉತ್ಸವ ರದ್ದುಪಡಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net