

ಗೋಕರ್ಣ: ಭಾನುವಾರ ಜನತಾ ಕರ್ಫ್ಯೂ ಹಿನ್ನೆಲೆಯಲ್ಲಿ ಪ್ರಸಿದ್ಧ ಪ್ರವಾಸಿ ಕೇಂದ್ರ ಮತ್ತು ಯಾತ್ರಾ ಸ್ಥಳ ಗೋಕರ್ಣ ಸಂಪೂರ್ಣವಾಗಿ ನಿರ್ಜನವಾಯಿತು. ಎಲ್ಲ ಮುಖ್ಯ ರಸ್ತೆಗಳು, ಬೀಚ್ಗಳು ಮತ್ತು ಮಂದಿರ ಪರಿಸರದಲ್ಲಿ ಹುಡುಕಿದರೂ ಜನರು ಕಾಣ ಸಿಗಲಿಲ್ಲ. ಸಾರಿಗೆ ಬಸ್ ಮತ್ತು ಖಾಸಗಿ ವಾಹನಗಳು ಕೂಡ ರಸ್ತೆಗಿಳಿಯಲಿಲ್ಲ. ಎಲ್ಲ ಮಂದಿರಗಳಲ್ಲಿ ದಿನಕ್ಕಿಂತ ಮುಂಚೆಯೇ ಮಹಾಪೂಜೆ ನೆರವೇರಿಸಿ ಬೀಗ ಹಾಕಲಾಯಿತು. ಪ್ರತಿ ದಿನ ತಪ್ಪದೆ ದೇವಾಲಯಗಳಲ್ಲಿ ಪೂಜೆ ಸಲ್ಲಿಸುವ ಸ್ಥಳೀಯ ಅನೇಕರು ಬೆಳಗ್ಗಿನ ಏಳು ಗಂಟೆಯೊಳಗೇ ತಮ್ಮ ತಮ್ಮ ಪೂಜೆ ಪೂರೈಸಿದರು.
ಐತಿಹಾಸಿಕ ದಾಖಲೆ: ಸಾಮಾನ್ಯವಾಗಿ ಯಾವುದೇ ಬಂದ್ ಅಥವಾ ಕರ್ಫ್ಯೂ ಇದ್ದರೂ ಇಲ್ಲಿನ ನಾನಾ ಪೌರಾಣಿಕ ಸ್ಥಳಗಳಲ್ಲಿ ಕ್ಷೇತ್ರ ಪುರೋಹಿತರು ಮತ್ತು ವೈದಿಕರ ನೇತೃತ್ವದಲ್ಲಿ ನಡೆಯುತ್ತಿದ್ದ ವಿವಿಧ ಧಾರ್ವಿುಕ ಕಾರ್ಯಗಳು ಭಾನುವಾರ ಒಂದೂ ನಡೆಯದೆ ಐತಿಹಾಸಿಕ ದಾಖಲೆಗೆ ಕಾರಣವಾಯಿತು. ಕ್ಷೇತ್ರದ ಎಲ್ಲ ಪುರೋಹಿತರು ಮತ್ತು ವೈದಿಕರು ಕರ್ಫ್ಯೂಗೆ ಅಖಂಡ ಬೆಂಬಲವಿತ್ತು ತಮ್ಮ ಕರ್ತವ್ಯ ಮೆರೆದರು. ಇದರಿಂದಾಗಿ ನಿತ್ಯ ಸಾವಿರಾರು ಜನ ಸ್ನಾನ ಮಾಡಿ ಪಿತೃ ಕಾರ್ಯ ಮತ್ತು ಇನ್ನಿತರ ಧಾರ್ವಿುಕ ಕಾರ್ಯ ಮಾಡುವ ಕೋಟಿತೀರ್ಥ ಪುಷ್ಕರಣಿ ಭಾನುವಾರ ನಿರ್ಜನವಾಗಿತ್ತು. ಧಾರ್ವಿುಕ ಕೆಲಸ ಮಾಡಿಸುವ ಎಲ್ಲ ಪಿತೃಶಾಲೆಗಳಿಗೆ ಬೀಗ ಹಾಕಲಾಗಿತ್ತು. ಸಮುದ್ರ ತೀರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸರ ಹೊರತಾಗಿ ಬೇರೆ ಯಾರೂ ಇರಲಿಲ್ಲ. ಕರ್ಫ್ಯೂ ಹಿನ್ನೆಲೆಯಲ್ಲಿ ವಿದೇಶಿಯರು ಕೂಡಾ ಹೊರ ಬೀಳಲಿಲ್ಲ. ಇವೆಲ್ಲವುಗಳಿಂದಾಗಿ ಗೋಕರ್ಣದ ಸದ್ಯದ ಇತಿಹಾಸದಲ್ಲಿ ಅಭೂತಪೂರ್ವ ಎನಿಸಿತು.