

ಮಲ್ಲು ಕಳಸಾಪುರ ಲಕ್ಷೆ್ಮೕಶ್ವರ
ಖರ್ಚು-ವೆಚ್ಚ ತುಸು ಕಡಿಮೆ ಮಾಡಬಹುದು ಮತ್ತು ಆಳಿನ ಸಮಸ್ಯೆ ಸರಳವಾಗಿ ನಿಭಾಯಿಸಬಹುದು ಎಂಬ ಲೆಕ್ಕಾಚಾರ ಇಟ್ಟುಕೊಂಡು ಹೆಚ್ಚಿನ ಸಂಖ್ಯೆಯಲ್ಲಿ ರೈತರು ಮುಂಗಾರಿ-ಹಿಂಗಾರಿ ಹಂಗಾಮಿನಲ್ಲಿ ಗೋವಿನಜೋಳ ಬೆಳೆದಿದ್ದಾರೆ. ಆದರೆ, ಕರೊನಾ ಎಫೆಕ್ಟ್ನಿಂದ ದರ ಇಳಿಕೆ ಕಂಡಿದ್ದು, ಬೆಳೆಗಾರರನ್ನು ಕಂಗಾಲಾಗಿಸಿದೆ.
ಗೋವಿನಜೋಳದ ಫಸಲು ಕೈಗೆ ಬಂದ ಪ್ರಾರಂಭದ ದಿನಗಳಲ್ಲಿ ಪ್ರತಿ ಕ್ವಿಂಟಾಲ್ಗೆ 2000 ರೂ. ಇದ್ದ ದರವು ಕರೊನಾ ಎಫೆಕ್ಟ್ನಿಂದ 1000 ರೂ.ಗೆ ಇಳಿದಿದೆ. ಈಗ ಈ ದರಕ್ಕೂ ಕೊಳ್ಳುವವರಿಲ್ಲದಂತಾಗಿದೆ. ಕೋಳಿ ಮತ್ತು ಪಶು ಆಹಾರ ಉತ್ಪಾದನೆಗೆ ಬಹುತೇಕ ಪ್ರಮಾಣದಲ್ಲಿ ಗೋವಿನಜೋಳ ಬಳಸಲಾಗುತ್ತದೆ. ಆದರೆ, ಕಳೆದ ಒಂದು ತಿಂಗಳಿಂದ ಕರೊನಾ ಪ್ರಭಾವದಿಂದ ಕೋಳಿ ಸಾಕಾಣಿಕೆ ಉದ್ಯೋಗದ ಮೇಲೆ ಕರಿ ಛಾಯೆ ಆವರಿಸಿದ್ದು, ಕೋಳಿಗಳ ಮಾರಣ ಹೋಮ ಮಾಡಲಾಗುತ್ತಿದೆ. ಅಲ್ಲದೆ, 15 ದಿನಗಳಿಂದ ಲಾಕ್ ಡೌನ್ ಘೊಷಿಸಿದ್ದು, ಸಾರಿಗೆ ಸಂಚಾರ ಮತ್ತು ವ್ಯಾಪಾರ ವಹಿವಾಟು ಸ್ತಬ್ಧಗೊಂಡಿದೆ. ಹೀಗಾಗಿ, ಗೋವಿನಜೋಳ ಕೇಳುವವರೇ ಇಲ್ಲದಂತಾಗಿದೆ.
ಲಕ್ಷೆ್ಮೕಶ್ವರ ತಾಲೂಕಿನ ಎಪಿಎಂಸಿಯಲ್ಲಿ ಗೋವಿನಜೋಳದ ಖರೀದಿ ಮಾಡದ ಕಾರಣ ಕೆಲ ವ್ಯಾಪಾರಸ್ಥರು ನೇರವಾಗಿ ರೈತರಿಂದ ಖರೀದಿಸುತ್ತಿದ್ದಾರೆ. ಕೆಲ ರೈತರು ಬೆಲೆ ಬರಬಹುದು ಎಂದು ಒಂದು ತಿಂಗಳಿಂದ ಗೋವಿನಜೋಳದ ತೆನೆಗಳನ್ನು ಹೊಲದಲ್ಲಿಯೇ ಹಾಕಿದ್ದರೆ, ಇನ್ನೂ ಕೆಲವರು ಯಂತ್ರದ ಸಹಾಯದಿಂದ ರಾಶಿ ಮಾಡಿ ಮಾರಾಟಕ್ಕೆ ಸಿದ್ಧಗೊಳಿಸಿದ್ದಾರೆ. ಸಿದ್ಧಗೊಂಡ ಜೋಳದ ರಾಶಿಯನ್ನು ಈಗ ಅಕಾಲಿಕ ಮಳೆಯಿಂದ ರಕ್ಷಣೆ ಮಾಡಲಾಗದೆ, ಮನೆಗೂ ತರಲಾಗದೆ, ಮಾರುಕಟ್ಟೆಗೂ ಒಯ್ಯಲಾಗದೆ ತ್ರಿಶಂಕು ಸ್ಥಿತಿಯಲ್ಲಿದ್ದಾರೆ ರೈತರು. ಕೃಷಿ ಇಲಾಖೆ ಮಾಹಿತಿ ಪ್ರಕಾರ ಶಿರಹಟ್ಟಿ ಹಾಗೂ ಲಕ್ಷೆ್ಮೕಶ್ವರ ತಾಲೂಕಿನಲ್ಲಿ 14 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಗೋವಿನಜೋಳ ಬಿತ್ತನೆ ಮಾಡಲಾಗಿದೆ.
ಕೃಷಿ ಸಚಿವರು ಗೋವಿನಜೋಳ ರಕ್ಷಣೆಗೆ ರಾಜ್ಯದ ನಾಲ್ಕು ದಿಕ್ಕುಗಳಲ್ಲಿ 4 ಉಗ್ರಾಣಗಳನ್ನು ಗುರುತಿಸಿ ಅಲ್ಲಿ ಸಂಗ್ರಹ ಮಾಡಲು ಸೂಚಿಸಿದ್ದಾರೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ಕಾರ್ಯೋನ್ಮುಖರಾಗಬೇಕು. ಬೆಂಬಲ ಬೆಲೆ ಅಡಿ ಗೋವಿನಜೋಳ ಖರೀದಿಸಬೇಕು ಎಂದು ರೈತರು ಒತ್ತಾಯಿಸಿದ್ದಾರೆ.
2 ಎಕರೆ ಗೋವಿನ ಜೋಳ ಬೆಳೆಯಲು ಗೊಬ್ಬರ, ಬೀಜ, ಕ್ರಿಮಿನಾಶಕ, ಆಳಿನ ಖರ್ಚು ಸೇರಿ ಪ್ರತಿ ಎಕರೆಗೆ 10 ಸಾವಿರ ರೂ. ಖರ್ಚು ಮಾಡಲಾಗಿದೆ. ಎಕರೆಗೆ 8/10 ಕ್ವಿಂಟಾಲ್ ಗೋವಿನ ಜೋಳ ಬಂದಿದ್ದರೂ ಈಗಿನ ಮಾರುಕಟ್ಟೆ ದರದಲ್ಲಿ ಮಾರಿದರೆ ಮಾಡಿದ ಖರ್ಚು ಕೂಡ ಮರಳುವುದಿಲ್ಲ. ಕರೊನಾ ಭೀತಿಯ ಹಿನ್ನೆಲೆಯಲ್ಲಿ ಖರೀದಿದಾರರು ಹಿಂದೇಟು ಹಾಕಿದ್ದಾರೆ. ಆದ್ದರಿಂದ ಸರ್ಕಾರ ಗೋವಿನ ಜೋಳವನ್ನು ಬೆಂಬಲ ಬೆಲೆಯಡಿ ಖರೀದಿಸಬೇಕು.| ನೀಲಪ್ಪ ಟೋಕಾಳಿ, ಗೋವಿನಜೋಳ ಬೆಳೆಗಾರ