ಸ್ಮಾರ್ಟ್‌ಕ್ಲಾಸ್ ಮೂಲಕ ಮಕ್ಕಳ ಕಲಿಕೆ ಹೆಚ್ಚು ಸದೃಢಗೊಳಿಸಲು ಸಾಧ್ಯ

Through SmartClass children's learning can be enhanced
ಗೊಳಸಂಗಿ ಸಮೀಪದ ವಂದಾಲ ಗ್ರಾಮದ ಭಾಗ್ಯವಂತಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಜರುಗಿದ ಪ್ರತಿಭಾ ಕಾರಂಜಿಯಲ್ಲಿ ಅತಿಥಿಗಳೊಂದಿಗೆ ಛದ್ಮವೇಷಧಾರಿ ಮಕ್ಕಳು.
Published on

ಗೊಳಸಂಗಿ: ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣ ಪಡೆಯುವ ಬಹುತೇಕ ಬಡ ಮಕ್ಕಳ ಕಲಿಕೆಯನ್ನು ಇನ್ನಷ್ಟು ಸದೃಢಗೊಳಿಸಲು ಶಾಲೆಗೆ ಒಂದಾದರೂ ಸಮುದಾಯದ ಸಹಭಾಗಿತ್ವದಲ್ಲಿ ಸ್ಮಾರ್ಟ್‌ಕ್ಲಾಸ್ ಅಳವಡಿಸಿಕೊಳ್ಳುವುದು ಅಗತ್ಯವಾಗಿದೆ ಎಂದು ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಗಲಿ ಹೇಳಿದರು.

ಸಮೀಪದ ವಂದಾಲದ ಭಾಗ್ಯವಂತಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಜರುಗಿದ ವಂದಾಲ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಅವರು ಮಾತನಾಡಿದರು.

ಸ್ಮಾರ್ಟ್‌ಕ್ಲಾಸ್‌ನ ಪ್ರಯೋಜನ ಅಪಾರ, ಕಲಿಕೆಯ ಜತೆಗೆ ತಂತ್ರಜ್ಞಾನಗಳ ಸಮ್ಮಿಲನದಿಂದ ಕಲಿಕೆಯ ವ್ಯಾಪ್ತಿ ವಿಶಾಲವಾಗಲು ಸಾಧ್ಯವಿದೆ. ಆಯಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಯಾವುದೇ ಅನುದಾನದಲ್ಲಾದರೂ ಸಹಾಯ ಮಾಡಿ ಆಯಾ ಸರ್ಕಾರಿ ಶಾಲೆಗಳ ಸಬಲೀಕರಣಕ್ಕೆ ಪ್ರಯತ್ನ ಪಡಬೇಕಿದೆ. ಅದಕ್ಕಾಗಿ ಸಂಘದಿಂದ ಜಿಪಂ ಸಿಇಒಗೆ ಮನವಿ ಸಲ್ಲಿಸಲಾಗುವುದು.

ಡಿಡಿಪಿಐ ಎನ್.ಎಚ್. ನಾಗೂರ ಪ್ರತಿಭಾ ಕಾರಂಜಿಗೆ ಚಾಲನೆ ನೀಡಿ ಮಾತನಾಡಿ, ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಲಲಿತಕಲೆಗಳು ಬಹುಮುಖ್ಯ. ಅಂತಹ ಕಲೆಯ ಪ್ರಕಾರಗಳನ್ನು ಮಕ್ಕಳಲ್ಲಿ ಪ್ರಕಾಶಗೊಳಿಸಲು ಪ್ರತಿಭಾ ಕಾರಂಜಿ ನೆರವಾಗುತ್ತದೆ. ಮಕ್ಕಳಲ್ಲಿ ಓದಿನ ಜತೆ ಇನ್ನಿತರ ಚಟುವಟಿಕೆಗಳ ಮನೋಭಿಲಾಷೆ ಹೆಚ್ಚಿರುತ್ತದೆ. ಆ ಮನೋಭಿಲಾಷೆ ತಿಳಿದುಕೊಂಡು ಅವುಗಳಿಗೆ ಶಿಕ್ಷಕರು ಸ್ಪಂದಿಸಬೇಕಿದೆ ಎಂದರು.

ಶಿಕ್ಷಕರಿಗೆ ವೇತನವೂ ಹೆಚ್ಚಿದೆ. ತಮ್ಮ ಮನಸ್ಸಿಗೆ ದ್ರೋಹ ಬಗೆಯದಂತೆ ಕಾರ್ಯನಿರ್ವಹಿಸಿ, ಸರ್ಕಾರಿ ಶಾಲೆಗಳ ಸಬಲೀಕರಣಕ್ಕೆ ಹೆಚ್ಚು ಒತ್ತು ನೀಡುವ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ವಸಂತ ರಾಠೋಡ ಮಾತನಾಡಿ, ಮಕ್ಕಳ ಮನೋವೈಚಾರಿಕ ಮಟ್ಟವನ್ನು ಅರಿತುಕೊಂಡು ಶಿಕ್ಷಕ ಬೋಧಿಸಬೇಕು. ಜತೆಗೆ ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆಗಳನ್ನು ಗುರುತಿಸಿ, ಅದಕ್ಕೆ ಪ್ರೋತ್ಸಾಹಿಸಬೇಕು. ಶಿಕ್ಷಣದ ಜತೆ ಕ್ರೀಡೆ, ಲಲಿತಕಲೆಗಳಿಗೂ ಮಹತ್ವ ನೀಡಬೇಕು ಎಂದರು.

ಶಂಕರಿ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಎಸ್.ಬಿ. ಇಜೇರಿ ಅಧ್ಯಕ್ಷತೆ ವಹಿಸಿದ್ದರು. ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಶೇಡಶ್ಯಾಳ, ಭಾಗ್ಯವಂತಿ ಶಾಲೆಯ ಚೇರ್ಮನ್ ರವೀಂದ್ರ ಪತ್ತಾರ, ಗಂಗಾಧರ ರಾಂಪೂರ, ಡಾ. ಪ್ರಕಾಶ ಬೀಳಗಿ, ಬಿ.ಟಿ. ಗೌಡರ, ಆರ್.ಬಿ. ಗೌಡರ, ಪಾಂಡು ರಾಠೋಡ, ಉದಯಕುಮಾರ ಬಶೆಟ್ಟಿ, ಎಚ್.ಎಚ್. ದೊಡಮನಿ, ಜುಬೇರ್ ಕೆರೂರ, ಆರ್.ಎ. ನದಾಫ್, ವಿ.ಕೆ. ಮಸೂತಿ, ಎಂ.ಎಂ. ಮುಲ್ಲಾ, ಎಂ.ಆರ್. ಮಕಾನದಾರ ಇತರರಿದ್ದರು.

ಸಮೂಹ ಸಂಪನ್ಮೂಲ ವ್ಯಕ್ತಿ ಸುರೇಶ ಹುರಕಡ್ಲಿ ಪ್ರಾಸ್ತಾವಿಕ ಮಾತನಾಡಿದರು. ಎಂ.ಎಂ. ಮುಲ್ಲಾ ನಿರೂಪಿಸಿದರು. ದಾನೇಶ್ವರಿ ಬಳೂರಗಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net