ಗೊಲ್ಲಾಳೇಶ್ವರ ವಚನಗಳಲ್ಲಿ ಅರಿವಿನ ಬೆಳಕು

shivani sanman
ಭಾಲ್ಕಿಯ ಚನ್ನಬಸವಾಶ್ರಮದಲ್ಲಿ ಆಯೋಜಿಸಿದ್ದ ಗೊಲ್ಲಾಳೇಶ್ವರ ಜಯಂತ್ಯುತ್ಸವದಲ್ಲಿ ಸರಿಗಮಪ ಸೀಜನ್-೨೧ರ ವಿಜೇತೆ ಶಿವಾನಿ ಶಿವದಾಸ ಸ್ವಾಮಿ ಅವರನ್ನು ಸನ್ಮಾನಿಸಲಾಯಿತು. ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು, ಶ್ರೀ ಗುರುಬಸವ ಪಟ್ಟದ್ದೇವರು, ಶ್ರೀ ಮಹಾಲಿಂಗ ಸ್ವಾಮೀಜಿ ಇತರರಿದ್ದರು.
Published on

ಭಾಲ್ಕಿ: ಶರಣ ಗೊಲ್ಲಾಳೇಶ್ವರ ವಚನಗಳು ಅನುಭಾವದ ಖಣಿಯಾಗಿವೆ. ಅವರ ಸಾಹಿತ್ಯದಲ್ಲಿ ಅರಿವಿನ ಬೆಳಕು ಇದೆ ಎಂದು ಬಸವಕಲ್ಯಾಣ ಅನುಭವ ಮಂಟಪ ಟ್ರಸ್ಟ್​ನ ಅಧ್ಯಕ್ಷ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ನುಡಿದರು.

ಪಟ್ಟಣದ ಚನ್ನಬಸವಾಶ್ರಮ ಪರಿಸರದಲ್ಲಿ ಹಿರೇಮಠ ಸಂಸ್ಥಾನದ ವತಿಯಿಂದ ಭಾನುವಾರ ರಾತ್ರಿ ಆಯೋಜಿಸಿದ್ದ ೩೧೨ನೇ ಮಾಸಿಕ ಶರಣ ಸಂಗಮ ಮತ್ತು ಕುರುಬ ಗೊಲ್ಲಾಳೇಶ್ವರ ಜಯಂತ್ಯುತ್ಸವದಲ್ಲಿ ಮಾತನಾಡಿದ ಅವರು, ಬಸವಣ್ಣನವರ ನೇತೃತ್ವದಲ್ಲಿ ರೂಪತಾಳಿದ ಕಲ್ಯಾಣ ಕ್ರಾಂತಿಯಲ್ಲಿ ಭಾಗಿಯಾದ ಗೊಲ್ಲಾಳೇಶ್ವರರು ಹಲವು ವಚನಗಳು ರಚಿಸಿದ್ದಾರೆ ಎಂದರು.

ಗೊಲ್ಲೇಶ್ವರ ವಚನಗಳಲ್ಲಿ ಅನುಭಾವದ ಆಳ, ಅಗಲ ಗೋಚರಿಸುತ್ತದೆ. ಅವರ ಜೀವನ ಮತ್ತು ವಚನ ಸಂದೇಶ ನಮಗೆ ಮಾದರಿ. ವಚನ ಸಾಹಿತ್ಯವನ್ನು ಪ್ರತಿಯೊಬ್ಬರೂ ಓದಬೇಕು ಎಂದು ತಿಳಿಸಿದರು.

ಝೀ ಕನ್ನಡ ವಾಹಿನಿಯ ಸರಿಗಮಪ ಸೀಜನ್-೨೧ರ ಸ್ಪರ್ಧೆಯಲ್ಲಿ ಗಡಿ ಭಾಗದ ಬೀದರ್‌ನ ಶಿವಾಜಿ ಸ್ವಾಮಿ ವಿಜೇತರಾಗಿರುವುದು ಅತ್ಯಂತ ಖುಷಿ ತಂದುಕೊಟ್ಟಿದೆ. ಆ ವೇದಿಕೆಯಲ್ಲಿ ಶರಣ ಸಂಸ್ಕೃತಿಯನ್ನು ಮೆರೆದಿರುವುದು ನಮ್ಮೆಲ್ಲರಿಗೆ ಹೆಮ್ಮೆ ತಂದಿದೆ. ಅವರ ಕುಟುಂಬದ ಎಲ್ಲರೂ ಹಣೆಯ ಮೇಲೆ ವಿಭೂತಿ ಧರಿಸಿ ತಮ್ಮ ಕಲೆ ಪ್ರದರ್ಶನ ಮಾಡುವ ಮೂಲಕ ನಾಡಿಗೆ ಶರಣ ಸಂಸ್ಕೃತಿಯ ಪ್ರಭಾವ ತೋರಿಸಿದ್ದಾರೆ ಎಂದು ಹೇಳಿದರು.

ನಿಂಗಣ್ಣ ಎಸ್. ಗಚ್ಚಿನಮನಿ ಉದ್ಘಾಟಿಸಿದರು. ಪುರಸಭೆ ಮಾಜಿ ಅಧ್ಯಕ್ಷ ಶರಣಪ್ಪ ಛತ್ರೆ ಅಧ್ಯಕ್ಷತೆ ವಹಿಸಿದ್ದರು. ಶಿವರಾಜ ಮಲ್ಲೇಶಿ ಬಸವ ಗುರುವಿನ ಪೂಜೆ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಝೀ ಕನ್ನಡ ವಾಹಿನಿಯ ಸರಿಗಮಪ ಸೀಜನ್-೨೧ರ ವಿಜೇತೆ ಶಿವಾನಿ ಶಿವದಾಸ ಸ್ವಾಮಿ ಹಾಗೂ ಅಂತಾರಾಷ್ಟ್ರೀಯ ಶಾಂತಿ ಪುರಸ್ಕೃತ ಡಾ.ಮನ್ಮಥ ಢೋಳೆ, ಪಿಎಚ್‌ಡಿ ಪಡೆದ ಶಿವಲಿಂಗ ಹೇಡೆ ಅವರನ್ನು ಶ್ರೀಮಠದಿಂದ ಸನ್ಮಾನಿಸಲಾಯಿತು.

ಹಿರೇಮಠ ಸಂಸ್ಥಾನದ ಪೀಠಾಧಿಪತಿ ಶ್ರೀ ಗುರುಬಸವ ಪಟ್ಟದ್ದೇವರು, ಶ್ರೀ ಮಹಾಲಿಂಗ ಸ್ವಾಮೀಜಿ ನೇತೃತ್ವ ವಹಿಸಿದ್ದರು. ಪುರಸಭೆ ಸದಸ್ಯ ಬಾಲಾಜಿ ಖೇಡಕರ್, ಪ್ರಮುಖರಾದ ಪಂಢರಿ ಮೇತ್ರೆ, ಸಂಜು ಗುಂಜರಗೆ, ಶಿವದಾಸ ಸ್ವಾಮಿ, ಶ್ರೀದೇವಿ ಶರಣಪ್ಪ ಬಿರಾದಾರ್ ಇತರರಿದ್ದರು. ವೀರಣ್ಣ ಕುಂಬಾರ ನಿರೂಪಣೆ ಮಾಡಿ, ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net