ಗೊರೆಯೂರು ಗ್ರಾಮದಲ್ಲಿ ದಾರಿ ಒತ್ತುವರಿ ತೆರವು

17 HANUR 5
Published on

ಹನೂರು: ತಾಲೂಕಿನ ಶಾಗ್ಯ ಸಮೀಪದ ಗೊರೆಯೂರು ಗ್ರಾಮದಲ್ಲಿ ಒತ್ತುವರಿಯಾಗಿದ್ದ ಸರ್ಕಾರಿ ದಾರಿಯನ್ನು ಮಂಗಳವಾರ ತಹಸೀಲ್ದಾರ್ ವೈ.ಕೆ. ಗುರುಪ್ರಸಾದ್ ಅವರು ಪೊಲೀಸ್ ಬಂದೋಬಸ್ತ್‌ನೊಂದಿಗೆ ತೆರೆವುಗೊಳಿಸಿದರು.

ಗ್ರಾಮದ ಹೊರವಲಯದಲ್ಲಿನ ಸರ್ವೇ ನಂಬರ್108/ಎ ನಲ್ಲಿ ಸರ್ಕಾರಿ ಜಾಗವಿದ್ದು, ರೈತರು ತಿರುಗಾಡುವ ಬಂಡಿ ದಾರಿಯಾಗಿತ್ತು. ಆದರೆ, ಹಲವು ವರ್ಷಗಳಿಂದ ಕೆಲವರು ಒತ್ತುವರಿ ಮಾಡಿಕೊಂಡಿದ್ದರು. ಇದರಿಂದ ಈ ಭಾಗದ ರೈತರು ಓಡಾಡಲು ತುಂಬಾ ಸಮಸ್ಯೆ ಉಂಟಾಗಿತ್ತು. ಜತೆಗೆ ಈ ಬಗ್ಗೆ ಆಗಾಗ್ಗೆ ಸಂಬಂಧಪಟ್ಟವರ ಜತೆ ಮಾತಿನ ಚಕಮಕಿ ನಡೆಯುತ್ತಲೇ ಇತ್ತು. ಇದರಿಂದ ರೈತರು ತುಂಬಾ ತೊಂದರೆ ಅನುಭವಿಸುತ್ತಿದ್ದರು.

ಈ ಬಗ್ಗೆ ಗ್ರಾಮದ ಸೆಲ್ವರಾಜು ಎಂಬುವರು ಸರ್ಕಾರಿ ದಾರಿಯನ್ನು ತೆರೆವುಗೊಳಿಸಿ ಓಡಾಡಲು ಅನುಕೂಲ ಕಲ್ಪಿಸುವಂತೆ 2024, ಆ.1 ರಂದು ತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸಿದ್ದರು. ಈ ಹಿನ್ನೆಲೆ ಕಂದಾಯ ಇಲಾಖೆಯ ಅಧಿಕಾರಿಗಳಿಂದ ಸರ್ವೇ ಕಾರ್ಯ ನಡೆಸಿದ್ದು, ಒತ್ತುವರಿಯಾಗಿರುವುದು ದೃಢಪಟ್ಟಿತ್ತು. ಮಂಗಳವಾರ ತಹಸೀಲ್ದಾರ್ ವೈ.ಕೆ. ಗುರುಪ್ರಸಾದ್ ಅವರು ಅಗತ್ಯ ಕ್ರಮವಹಿಸಿ ಆರ್‌ಐ ಶೇಷಣ್ಣ, ಭೂ ಮಾಪಕ ಶಂಕರಶೆಟ್ಟಿ ಹಾಗೂ ಎಎಸ್‌ಐ ಶಿವಶಂಕರ್ ನೇತೃತ್ವದಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್‌ನೊಂದಿಗೆ ತೆರಳಿ ಒತ್ತುವರಿ ದಾರಿ ತೆರೆವುಗೊಳಿಸುವುದರ ಮೂಲಕ ಓಡಾಡಲು ಅನುಕೂಲ ಕಲ್ಪಿಸಿದ್ದು, ರೈತರು ನಿಟ್ಟುಸಿರು ಬಿಟ್ಟಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net