ಗೊರೂರು ವೈಚಾರಿಕತೆಯ ಪ್ರತಿಪಾದಿ: ಲೇಖಕ ಜಗದೀಶ್ ಕೊಪ್ಪ ಅಭಿಮತ

23
Published on

ಮೈಸೂರು: ನಿರಂತರ ಫೌಂಡೇಷನ್‌ನಿಂದ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ಕೃತಿಗಳ ಆಧಾರಿತ, ಮಂಜುನಾಥ ಎಲ್.ಬಡಿಗೇರ ಅವರ ನಿರ್ದೇಶನದಲ್ಲಿ ರಂಗರೂಪಕ್ಕೆ ಇಳಿದ ‘ಗೊರೂರು’ ನಾಟಕ ಪ್ರಥಮ ಪ್ರದರ್ಶನದಲ್ಲಿಯೇ ಮೆಚ್ಚುಗೆಗೆ ಪಾತ್ರವಾಯಿತು.
ಕಲಾಮಂದಿರದ ಆವರಣದಲ್ಲಿರುವ ಕಿರು ರಂಗಮಂದಿರದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ನಾಟಕ ಕಿಕ್ಕಿರದ ಪ್ರೇಕ್ಷಕರ ಮನಗೆದ್ದಿತು. ನಾಟಕಕ್ಕೆ ಚಾಲನೆ ನೀಡಿ ಮಾತನಾಡಿದ ಲೇಖಕ ಜಗದೀಶ್ ಕೊಪ್ಪ ಅವರು, ಗೊರೂರು ರಾಮಸ್ವಾಮಿ ಅಯ್ಯಂಗಾರ್ ಕನ್ನಡದ ಲವಲವಿಕೆಯ ಲೇಖಕ. ಗ್ರಾಮೀಣ ಜನಸಂಸ್ಕೃತಿಯನ್ನು ತಮ್ಮ ಕೃತಿಗಳಲ್ಲಿ ವೈವಿಧ್ಯಮಯವಾಗಿ ದಾಖಲಿಸಿದ್ದಾರೆ. ಗಾಂಧೀಜಿಯಿಂದ ಪ್ರಭಾವಿತರಾಗಿದ್ದ ಗೊರೂರು ವೈಚಾರಿಕತೆಯ ಪ್ರತಿಪಾದಿ. ತಮ್ಮೂರಿನ ವಿವಿಧ ಸಮುದಾಯಗಳ ಜನರ ವ್ಯಕ್ತಿಚಿತ್ರಣ, ಸಮುದಾಯಗಳ ಚಿತ್ರಣದ ಮೂಲಕವೇ ಅದನ್ನು ಕಟ್ಟಿ ಕೊಟ್ಟಿರುವುದು ವಿಶೇಷ ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಸುದರ್ಶನ್ ಮಾತನಾಡಿ, ತಮ್ಮ ಬರಹದ ಮೂಲಕ ಸಾಮಾಜಿಕ ಪ್ರಜ್ಞೆ ಮೂಡಿಸಿದ್ದ ರಾಮಸ್ವಾಮಿ ಅಯ್ಯಂಗಾರ್ ಅವರ ಹಾಸನ ಜಿಲ್ಲೆಯಲ್ಲಿರುವ ಗೊರೂರು ಮನೆಯನ್ನು ಸಂರಕ್ಷಣೆ ಮಾಡಬೇಕಾದ ಅಗತ್ಯವಿದೆ. ಹಿಂದೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದರೆ ಈಗ ಅದು ಏನಾಗಿದೆ ಎನ್ನುವುದು ತಿಳಿದಿಲ್ಲ. ಸಾಹಿತ್ಯಾಸಕ್ತರು ಸಂರಕ್ಷಣೆ ವಿಷಯದಲ್ಲಿ ಸಹಕಾರ ನೀಡಬೇಕಿದೆ ಎಂದು ಹೇಳಿದರು.
ರಾಮಸ್ವಾಮಿ ಅಯ್ಯಂಗಾರ್ ಅವರು ಸ್ವಾತಂತ್ರ್ಯ ಪೂರ್ವದಲ್ಲಿಯೇ ವೈಚಾರಿಕವಾದ ಕೃತಿಗಳನ್ನು ರಚಿಸಿದವರು. ಅವರ ನಮ್ಮ ಊರಿನ ರಸಿಕರು ಕೃತಿಯು ನಾಟಕದಲ್ಲಿ ಹೆಚ್ಚು ಪ್ರಭಾವ ಹೊಂದಿದೆ ಎಂದರು.
ಫೌಂಡೇಷನ್‌ನ ಪ್ರಸಾದ್ ಕುಂದೂರು, ಸುಗುಣಾ, ಶ್ರೀನಿವಾಸ್ ಪಾಲಹಳ್ಳಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net