

ಹಾಸನ: ತಾಲೂಕಿನ ಗೊರೂರಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಅಮೆರಿಕನ್ ಮಹಿಳೆ ಸುಜನ್ನೆ ಹ್ಯಾಂಚೆಟ್ ಅವರೊಂದಿಗೆ ಸೋಮವಾರ ಪುಸ್ತಕ ಓದು ಸಂವಾದ ಯಶಸ್ವಿಯಾಗಿ ನಡೆಯಿತು.
ಕಾರ್ಯಕ್ರಮದಲ್ಲಿ ಸಾಹಿತಿ ಗೊರೂರು ಅನಂತರಾಜು ಮಾತನಾಡಿ, ಶ್ರೀಮತಿ ಸುಜನ್ನೆ ಹ್ಯಾಂಚೆಟ್ ಅವರ ಪತಿ ಸ್ಟೆನ್ಲೆ ರೆಜೆಲ್‌ಸನ್ ಅವರು 1967-1968 ಕಾಲಾವಧಿಯಲ್ಲಿ 2 ವರ್ಷ ಹಾಸನದಲ್ಲಿದ್ದರು. ಗೊರೂರು ಮತ್ತು ಪೊನ್ನಾಥಪುರ ಗ್ರಾಮಗಳನ್ನು ಆಯ್ಕೆ ಮಾಡಿಕೊಂಡು ಇಲ್ಲಿಯೇ ವಾಸವಿದ್ದು ಕ್ಷೇತ್ರ ಕಾರ್ಯ ಅಧ್ಯಯನ ಮಾಡಿ ಪ್ರಕಟಿಸಿರುವ ಪುಸ್ತಕ ‘ಫುಡ್ ಕಮ್ಯುನಿಟಿ ಆ್ಯಂಡ್ ದಿ ಸ್ಪಿರಿಟ್ ವರ್ಲ್ಡ್,’ ಇದು ಸ್ಟೆನ್ಲೆ ರೆಜೆಲ್‌ಸನ್ ಅವರ ಪಿಎಚ್‌ಡಿ ಪ್ರಬಂಧ. ತಮ್ಮ ಅಧ್ಯಯನಕ್ಕಾಗಿ ಭಾರತದ ಈ 2 ಗ್ರಾಮಗಳನ್ನು ಆಯ್ಕೆ ಮಾಡಿಕೊಂಡು, ಇಲ್ಲಿಯ ಜನಜೀವನ, ಆಹಾರ ಪದ್ಧತಿ, ಹಬ್ಬ ಆಚರಣೆಗಳು ಇತ್ಯಾದಿ ಸಾಮಾಜಿಕ ವಿಷಯಗಳನ್ನು ಛಾಯಾಚಿತ್ರ ಸಮೇತ ಕಲೆಹಾಕಿದ್ದಾರೆ ಎಂದು ತಿಳಿಸಿದರು.
ಇದು ಸ್ಥಳೀಯ ವಿದ್ಯಾರ್ಥಿಗಳಿಗೆ ಅಧ್ಯಯನಕ್ಕೆ ಉಪಯುಕ್ತವಾಗಿದೆ. ಗೊರೂರು ಸೋಮಶೇಖರ್ ಅವರು ತಮ್ಮ ಗೊರೂರು ನೆನಪುಗಳು ಕೃತಿಯಲ್ಲಿ ಅಮೆರಿಕನ್ ಮಹಿಳೆ ಎಂಬ ಅಧ್ಯಾಯದಲ್ಲಿ ಇವರ ಕುರಿತ್ತಾಗಿ ಸ್ವಾರಸ್ಯಕರವಾಗಿ ಬರೆದಿದ್ದಾರೆ. ಈ ಪುಸ್ತಕವನ್ನು ಕಾಲೇಜು ಗ್ರಂಥಾಲಯಕ್ಕೆ ತಾವು ನೀಡುತ್ತಿದ್ದು ಈ ಕೃತಿಯ ಅಧ್ಯಯನ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ನಂತರದ ಕಾಲಘಟ್ಟದ ಗೊರೂರು ಗ್ರಾಮ ಜೀವನ ಬದುಕಿನ ಚಿತ್ರಣವನ್ನು ಸೊಗಸಾಗಿ ನಿರೂಪಿಸಿದೆ ಎಂದರು.
ಕಾಲೇಜಿನ ಪ್ರಾಂಶುಪಾಲರು ಡಿ. ಶೋಭಾ ಮಾತನಾಡಿ, ಡಾ. ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರು ಈ ಊರಿನ ಪ್ರಸಿದ್ಧ ಸಾಹಿತಿಗಳಾಗಿ ಸಾಹಿತ್ಯದ ನೆಲೆಗಟ್ಟಿನಲ್ಲಿ ಈ ಊರ ಗ್ರಾಮದ ಬದುಕನ್ನು ತಮ್ಮ ಪ್ರಬಂಧ ಸಾಹಿತ್ಯದಲ್ಲಿ ನವೀರು ಹಾಸ್ಯದಲ್ಲಿ ಚಿತ್ರಿಸಿದ್ದಾರೆ. ಕಾಲೇಜು ಗ್ರಂಥಾಲಯಕ್ಕೆ ಮೇಡಂ ಅವರು ನೀಡಿರುವ ಪುಸ್ತಕಗಳನ್ನು ವಿದ್ಯಾರ್ಥಿಗಳು ಒಬ್ಬೊಬ್ಬರು ಒಂದೊಂದು ಎರವಲು ಪಡೆದು ಓದಿ ಅಭಿಪ್ರಾಯ ಬರೆದು ತರಬೇಕೆಂದು ತಿಳಿಸಿದರು.
ಸಂವಾದದಲ್ಲಿ ಸುಜನ್ನೆ ಹ್ಯಾಂಚೆಟ್ ಮಾತನಾಡಿ, ಸ್ಟೆನ್ಲೆ ರೆಜೆಲ್‌ಸನ್‌ರವರು 1972ರಲ್ಲಿ ಕೊಲಂಬಿಯ ಯೂನಿವರ್ಸಿಟಿಗಾಗಿ ಸಂಶೋಧಿಸಿದ ಪಿಎಚ್‌ಡಿ ಪ್ರಬಂಧ ಕೃತಿ. ನನಗೆ ಈಗ 83 ವರ್ಷ. 56 ವರ್ಷಗಳ ಹಿಂದೆ ಇಲ್ಲಿ ವಾಸವಿದ್ದೆ. ಇಲ್ಲಿಯ ಜನರ ಪ್ರೀತಿ, ವಿಶ್ವಾಸ ಸ್ಮರಣೆಯಲ್ಲಿ ಉಳಿದಿದೆ ಎಂದರು.
ಕಾಲೇಜು ವತಿಯಿಂದ ಸುಜನ್ನೆ ಹ್ಯಾಂಚೆಟ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಗ್ರಾಮದ ವೇದಮೂರ್ತಿ, ಯಾಕೂಬ್, ಬಿ.ಡಿ. ಜಗದೀಶ್, ಕಾಲೇಜಿನ ಉಪನ್ಯಾಸಕರು ಉಪಸ್ಥಿತರಿದ್ದರು.