

ಚಾಮರಾಜನಗರ: ಕುಲದ ಸಂಸ್ಕೃತಿಯಾಗಿರುವ ಕಲೆಯನ್ನು ಸಕಲ ಕುಲಕ್ಕೂ ಪ್ರಸ್ತುತಿ ಪಡಿಸಿದ, ದೇಶ- ವಿದೇಶದವರೆಗೂ ಹಬ್ಬಿಸಿ ಖ್ಯಾತಿ ಗಳಿಸಿದ ತಾತನ ಹಾದಿಯಲ್ಲೇ ಸಾಗುತ್ತಿರುವ ಮೊಮ್ಮಗನ ಸುದೀರ್ಘ ವರ್ಷಗಳ ಕಲಾಸೇವೆಗೆ ಮೊದಲ ಬಾರಿಗೆ ಪ್ರಶಸ್ತಿಯ ಗರಿ ಲಭಿಸಿದೆ.
ಕರ್ನಾಟಕದ ವಿಶಿಷ್ಟ ಜನಪದ ಕಲೆಯಾಗಿರುವ ಗೊರವರ ಕುಣಿತದ ಗಾರುಡಿಗನಾಗಿದ್ದವರು ರಾಮಸಮುದ್ರದ ದಿ.ಪುಟ್ಟಮಲ್ಲೇಗೌಡರು. ಈ ಕಲೆಯ ಕೊಂಡಿಯಾಗಿರುವ ಇವರ ಮೊಮ್ಮಗ ಶಿವರಾಮೇಗೌಡ ಈ ಸಲದ ಕರ್ನಾಟಕ ಜಾನಪದ ಪರಿಷತ್ತಿನಿಂದ ‘ಜಾನಪದ ಲೋಕ ಪ್ರಶಸ್ತಿ’ಗೆ ಆಯ್ಕೆಯಾಗಿದ್ದಾರೆ.
ರಾಮನಗರದ ಜಾನಪದ ಲೋಕದಲ್ಲಿ ಬುಧವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಪರಿಷತ್ತಿನ ಅಧ್ಯಕ್ಷ ಪ್ರೊ.ಹಿ.ಚಿ.ಬೋರಲಿಂಗಯ್ಯ ಪ್ರಶಸ್ತಿಗೆ ಆಯ್ಕೆಯಾಗಿರುವುದನ್ನು ೋಷಿಸಿದ್ದಾರೆ. ಕಲಬುರಗಿ, ಉತ್ತರ ಕನ್ನಡ, ಬಳ್ಳಾರಿ, ತುಮಕೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳ ಕಲಾವಿದರು ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಅಂತೆಯೇ ಚಾಮರಾಜನಗರ ಜಿಲ್ಲೆಯಿಂದ ಶಿವರಾಮೇಗೌಡಗೆ ಹಾಸನದ ಡಾ.ರಾಜೇಗೌಡ ಹೊಸಹಳ್ಳಿಯವರ ತಾಯಿ ರಂಗಮ್ಮ ಮತ್ತು ತಂದೆ ಎಚ್.ಎಸ್.ರಂಗಪ್ಪ ಹೆಸರಿನಲ್ಲಿ ಕೊಡ ಮಾಡುವ ಜಾನಪದ ಲೋಕ ದತ್ತಿನಿಧಿ ಪ್ರಶಸ್ತಿಗೆ ಆಯ್ಕೆ ಮಾಡಿದ್ದಾರೆ. ೆ.8 ಮತ್ತು 9ರಂದು ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದ್ದು, 10 ಸಾವಿರ ರೂ. ನಗದು ಮತ್ತು ಪಾರಿತೋಷಕವನ್ನು ಪ್ರಶಸ್ತಿ ಒಳಗೊಂಡಿರುತ್ತದೆ.
ಬಳುವಳಿಯಾಗಿ ಬಂದ ಕಲೆ:
ಜಿಲ್ಲೆಯ ಪ್ರಮುಖ ಕಲೆಗಳಲ್ಲಿ ಗೊರವರ ಕುಣಿತವೂ ಒಂದು. ವೀರಭದ್ರ ಸ್ವಾಮಿಗೆ ವೀರಗಾಸೆ, ಮಂಟೇಸ್ವಾಮಿಗೆ ನೀಲಗಾರರು, ಮಹದೇಶ್ವರನಿಗೆ ಕಂಸಾಳೆಯವರು ಇದ್ದಂತೆಯೇ ಮೈಲಾರದೇವ, ಮುಡುಕುತೊರೆ ಮಲ್ಲಯ್ಯ, ಶ್ರೀಶೈಲದ ಮಲ್ಲಿಕಾರ್ಜುನನಿಗೆ ಗೊರವರು ಇದ್ದಾರೆ. ಜಿಲ್ಲೆಯಲ್ಲಿ ಗೊರವರ ಕುಣಿತಕ್ಕೆ ಪ್ರಸಿದ್ಧಿ ಪಡೆದುಕೊಂಡಿದ್ದವರು ದಿ.ಪುಟ್ಟಮಲ್ಲೇಗೌಡರು. ದೇಶ ವಿದೇಶಗಳಿಗೆ ಹೋಗಿ ಕಲಾ ಪ್ರದರ್ಶನ ನೀಡಿದ್ದಾರೆ. ಹಲವಾರು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ಸಾಂಸ್ಕೃತಿಕ ರಾಯಭಾರಿಯಾಗಿ ರಾರಾಜಿಸಿದ್ದರು.
ಇವರ ಕುಲದ ಸಂಸ್ಕೃತಿಯಾಗಿರುವ ಗೊರವರ ಕುಣಿತ ಮಗ ಗಿರಿಯಗೌಡ ಬಳಿಕ ಮೊಮ್ಮಗ ಶಿವರಾಮೇಗೌಡಗೆ ರಕ್ತತವಾಗಿ ಬಳುವಳಿಯಾಗಿ ಬಂದಿದೆ. ಸುಮಾರು 12 ವರ್ಷ ವಯಸ್ಸಿನಲ್ಲಿದ್ದಾಗ ಗೊರವರದ ದೀಕ್ಷೆ ಪಡೆದುಕೊಂಡ ಶಿವರಾಮೇಗೌಡಗೆ ಈಗ ಅಂದಾಜು 72 ವರ್ಷ ವಯಸ್ಸಾಗಿದೆ. ಆದರೆ ಗೊರವರ ಕುಣಿತಕ್ಕೆ ಇಳಿದರೆ 12ರ ಬಾಲಕನಷ್ಟೇ ಉತ್ಸಾಹಿ. ಓದಿಲ್ಲದ ಶಿವರಾಮೇಗೌಡ ಕಲೆಯ ಕಲಿಕೆಯಲ್ಲಿ ವಿಧೇಯ ವಿದ್ಯಾರ್ಥಿ. ಈ ಕಲೆಯಲ್ಲಿ ಪ್ರಖ್ಯಾತಿ ಪಡೆದುಕೊಂಡಿದ್ದ ತಾತ ಪುಟ್ಟಮಲ್ಲೇಗೌಡರ ಗರಡಿಯಲ್ಲಿ ಬೆಳೆದಿರುವ ಹಿನ್ನೆಲೆಯಲ್ಲಿ ಗೊರವರ ಕುಣಿತದ ಸೊಗಸನ್ನು ಹೆಚ್ಚು ಮಾಡುತ್ತಾರೆ. ದೆಹಲಿ, ಜಯಪುರ, ತಮಿಳುನಾಡು ಇನ್ನಿತರೆ ರಾಜ್ಯಗಳಿಗೂ ತೆರಳಿ ಗೊರವರ ಕುಣಿತ ಪ್ರದರ್ಶನ ನೀಡಿದ್ದಾರೆ. ಗೊರವರ ಕುಣಿತ ಕೇವಲ ಕಲೆಗೆ ಸೀಮಿತವಾಗಿಲ್ಲ. ಕುಲದ ಪೂಜೆಗೂ ಸಲ್ಲಿಕೆಯಾಗುತ್ತಿದೆ. ಹಬ್ಬರಿಗೆ ಗೊರವರ ವೇಷ ಧರಿಸಿ ಮನೆ ಮನೆಗೆ ತೆರಳಿ ಉಪದಾನ ಮಾಡುತ್ತಾರೆ. ಗೃಹ ಪ್ರವೇಶಗಳ ಪೂಜೆಗೂ ಇವರು ಇರಲೇಬೇಕು. ಇವರ ಮಗ ಮಹದೇವಸ್ವಾಮಿ ಮುಂದುವರೆಸಿಕೊಂಡು ಬರುತ್ತಿದ್ದಾರೆ.
ಕೃಷಿ ಮತ್ತು ಕಲಾ ಬದುಕು: ಕಲಾವಿದ ಶಿವರಾಮೇಗೌಡ ವ್ಯವಸಾಯ ಮತ್ತು ಗೊರವರ ಕುಣಿತ ಕಲೆಯೊಂದಿಗೆ ತನ್ನ ಬದುಕನ್ನು ಬೆಸೆದುಕೊಂಡಿದ್ದಾರೆ. ನಗರದ ಹೊರವಲಯದಲ್ಲಿರುವ ಬೂದಿತಿಟ್ಟಿನ ಬಳಿಯ 1 ಎಕರೆ ಜಮೀನಿನಲ್ಲಿ ಕೃಷಿ ಮಾಡುತ್ತಿದ್ದಾರೆ. ಆಹ್ವಾನದ ಮೇರೆಗೆ ಕಲಾ ಪ್ರದರ್ಶನಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಪ್ರತಿ ತಿಂಗಳು ಕಲಾವಿದರ ಮಾಸಾಶನ ಬರುತ್ತಿದೆ. ವಂಶ ಪಾರಂಪರ್ಯವಾಗಿ ಬಂದಿರುವ ಈ ಕಲೆಯನ್ನು ತಾತ ಪುಟ್ಟಮಲ್ಲೇಗೌಡ, ಮಗ ಗಿರಿಯಗೌಡ, ಮೊಮ್ಮಗ ಶಿವಮಲ್ಲೇಗೌಡ, ಇವರ ಮಗ ಮಹದೇವಸ್ವಾಮಿ ಮುಂದುವರೆಸಿದ್ದಾರೆ. ಮಹದೇವಸ್ವಾಮಿ ಕನ್ನಡ ಫಿಲಂ ಚೇಂಬರ್‌ನಿಂದ ಡಾ.ಪುನೀತ್‌ರಾಜ್‌ಕುಮಾರ್ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ನಮ್ಮ ತಾತ ಪುಟ್ಟಮಲ್ಲೇಗೌಡರು ಈ ಕಲೆಯನ್ನು ಉಸಿರನ್ನಾಗಿಸಿಕೊಂಡಿದ್ದರು. ನಾನೂ ಸಹ ಕಲೆಯನ್ನೇ ಬದುಕನ್ನಾಗಿಸಿಕೊಂಡಿದ್ದೇನೆ. ಇದೇ ಮೊದಲ ಬಾರಿಗೆ ನಾನು ಪ್ರಶಸ್ತಿಗೆ ಆಯ್ಕೆಯಾಗಿದ್ದೇನೆ. ಇದಕ್ಕೆ ತುಂಬಾ ಸಂತೋಷವಾಗುತ್ತಿದೆ. ಶಿವರಾಮೇಗೌಡ, ಪ್ರಶಸ್ತಿಗೆ ಆಯ್ಕೆಯಾಗಿರುವ ಕಲಾವಿದ