

ಮುಳಗುಂದ: ಪಟ್ಟಣ ವ್ಯಾಪ್ತಿಯಲ್ಲಿ ಉತ್ತಮ ಮಳೆಯಾಗಿದೆ. ಹೀಗಾಗಿ ಯೂರಿಯಾ ಸಣ್ಣ ಕಾಳಿನ ಗೊಬ್ಬರಕ್ಕೆ ಬೇಡಿಕೆ ಹೆಚ್ಚಾಗಿದ್ದು ರೈತರು ಖರೀದಿಗಾಗಿ ಅಂಗಡಿಗಳಿಗೆ ಮುಗಿ ಬೀಳುತ್ತಿದ್ದಾರೆ.
ಈಗಾಗಲೇ ಬಿತ್ತನೆ ಮಾಡಿದ ಬಿಟಿ ಹತ್ತಿ, ಹಸಿಮೆಣಸು, ಗೋವಿನ ಜೋಳ, ಶೇಂಗಾ ಬೆಳೆಗಳು ಮಳೆಯಿಂದ ಚೇತರಿಕೆ ಕಂಡಿವೆ. ಸೋಮವಾರ ಬಿರುಸಿನ ಮಳೆಯಾಗಿದ್ದು, ಹೊಲಗಳಲ್ಲಿ ತೇವಾಂಶ ಹೆಚ್ಚಾಗತೊಡಗಿದೆ. ಬೆಳೆಗಳ ರಕ್ಷಣೆ ಮತ್ತು ಅಧಿಕ ಇಳುವರಿಗಾಗಿ ರೈತರು ಯೂರಿಯಾ ಗೊಬ್ಬರ ಬಳಸಲು ಮುಂದಾಗಿದ್ದಾರೆ. ಆದರೆ, ಪಟ್ಟಣದಲ್ಲಿ ಎರಡು ದಿನದಿಂದ ಸಣ್ಣ ಕಾಳಿನ ಯೂರಿಯಾ ಗೊಬ್ಬರ ಲಭ್ಯವಾಗುತ್ತಿಲ್ಲ. ದೊಡ್ಡ ಕಾಳಿನ ಯೂರಿಯಾ ಗೊಬ್ಬರ ಸಾಕಷ್ಟು ಪ್ರಮಾಣದಲ್ಲಿದೆ. ಆದರೆ, ಇದನ್ನು ಭೂಮಿಗೆ ಹಾಕಿದ ನಂತರ ಕರಗಲು ಬಹಳ ಸಮಯ ತೆಗೆದುಕೊಳ್ಳುತ್ತದೆ ಎನ್ನುವ ಕಾರಣದಿಂದ ರೈತರು ಖರೀದಿಗೆ ಮುಂದಾಗುತ್ತಿಲ್ಲ.
ಕೆಲವೆಡೆ ಕಾಳ ಸಂತೆಯಲ್ಲಿ ಯೂರಿಯಾ 450 ರೂ.ಗೆ ಮಾರಾಟವಾಗುತ್ತಿದೆ ಎನ್ನುವ ಆರೋಪ ಕೇಳಿ ಬಂದಿದೆ. ಇನ್ನು ಲಭ್ಯವಿರುವ ಅಂಗಡಿಯಲ್ಲಿ ಒಬ್ಬರಿಗೆ ಎರಡು ಚೀಲ ಮಾತ್ರ ಕೊಡುತ್ತಿದ್ದಾರೆ. ಈ ಬಗ್ಗೆ ಕೃಷಿ ಅಧಿಕಾರಿಗಳು ಗಮನ ಹರಿಸಿ ಸಣ್ಣ ಕಾಳಿನ ಯುರಿಯಾ ಗೊಬ್ಬರ ಸರಬರಾಜಿಗೆ ಮುಂದಾಗಬೇಕು. ಕಾಳ ಸಂತೆಯಲ್ಲಿ ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿರುವವರ ಮೇಲೆ ಕ್ರಮ ಜರುಗಿಸಬೇಕೆಂದು ರೈತರು ಆಗ್ರಹಿಸಿದ್ದಾರೆ.
ಜಿಲ್ಲೆಯಲ್ಲಿ ಅಂದಾಜು 600 ಟನ್ ಯೂರಿಯಾ ಗೊಬ್ಬರ ದಾಸ್ತಾನಿದೆ. ಎಲ್ಲೂ ಕೊರತೆ ಇಲ್ಲ. ಆದರೆ, ರೈತರು ಸಣ್ಣ ಕಾಳಿನ ಯೂರಿಯಾ ಗೊಬ್ಬರಕ್ಕೆ ಆದ್ಯತೆ ನೀಡುತ್ತಿದ್ದಾರೆ. ಸಣ್ಣ ಮತ್ತು ದೊಡ್ಡ ಕಾಳಿನಲ್ಲಿ ಯಾವುದೇ ವ್ಯತ್ಯಾಸವಿಲ್ಲ. ಎರಡನ್ನೂ ಬಳಸಬಹುದಾಗಿದೆ. ಈ ಬಗ್ಗೆ ರೈತರಿಗೆ ಸಾಕಷ್ಟು ಮಾಹಿತಿ ನೀಡಲಾಗಿದೆ. | ಮಲ್ಲಯ್ಯ ಕೊರಣ್ಣವರ ಕೃಷಿ ಸಹಾಯಕ ಅಧಿಕಾರಿ ಗದಗ
ಭಾರಿ ಮಳೆಗೆ ನೆಲಕ್ಕುರುಳಿದ ಕಬ್ಬು
ಮುಂಡರಗಿ: ಪಟ್ಟಣ ಸೇರಿ ತಾಲೂಕಿನಾದ್ಯಂತ ಸೋಮವಾರ ರಾತ್ರಿ ಉತ್ತಮ ಮಳೆಯಾಗಿದೆ.
ಭಾರಿ ಬಿರುಗಾಳಿ ಬೀಸಿದ ಕಾರಣ ತಾಲೂಕಿನ ಬೀಡನಾಳ, ಬೀಡನಾಳ ತಾಂಡಾ ಮೊದಲಾದ ಗ್ರಾಮಗಳಲ್ಲಿ ಕಬ್ಬು ಬೆಳೆ ನೆಲಕ್ಕುರುಳಿದೆ. ಮಳೆಯಿಂದ ಕೆಲವೆಡೆ ತೋಟಗಾರಿಕೆ ಬೆಳೆಗಳು ಹಾನಿಯಾಗಿವೆ. ಕಳೆದ ತಿಂಗಳು ಸುರಿದ ಮುಂಗಾರು ಮಳೆಯಲ್ಲಿ ಬಿತ್ತನೆ ಮಾಡಿದ್ದ ಹೆಸರು, ಸೂರ್ಯಕಾಂತಿ, ಗೋವಿನಜೋಳ ಮೊದಲಾದ ಬೆಳೆಗಳು ಮಳೆ ಇಲ್ಲದೆ ಒಣಗುವ ಹಂತ ತಲುಪಿದ್ದವು. ಸೋಮವಾರ ಸುರಿದ ಮಳೆಯು ಒಣಗುತ್ತಿದ್ದ ಬೆಳೆಗೆ ಮರು ಜೀವ ನೀಡಿದಂತಾಗಿದೆ. ಬೆಳೆ ಹಾನಿ ಅನುಭವಿಸಿದ ರೈತರಿಗೆ ಸರ್ಕಾರ ಪರಿಹಾರ ನೀಡಬೇಕು ಎಂದು ರೈತರಾದ ಕೊಪ್ಪಣ್ಣ ಕೊಪ್ಪಣ್ಣವರ, ಗಣೇಶ ನಾಯಕ ಒತ್ತಾಯಿಸಿದ್ದಾರೆ.