

ನುಗ್ಗೇಹಳ್ಳಿ: ರಾಜ್ಯದಲ್ಲಿ ಯೂರಿಯಾ ಹಾಗೂ ರಸಗೊಬ್ಬರ ಅಭಾವಕ್ಕೆ ರಾಜ್ಯ ಸರ್ಕಾರದ ಅಸಹಕಾರ ಹಾಗೂ ನಿರ್ಲಕ್ಷೃವೇ ಕಾರಣ. ಈ ವಿಚಾರವಾಗಿ ಕೇಂದ್ರ ಸರ್ಕಾರದ ಮೇಲೆ ಆರೋಪ ಮಾಡುವುದು ಸರಿಯಲ್ಲ ಎಂದು ಶಾಸಕ ಸಿ.ಎನ್.ಬಾಲಕೃಷ್ಣ ಹೇಳಿದರು.
ಹೋಬಳಿಯ ಹೊನ್ನಮಾರನಹಳ್ಳಿ ಗ್ರಾಮದಲ್ಲಿ ಹೋಬಳಿ ರೈತ ಸಂಪರ್ಕ ಕೇಂದ್ರದ ವತಿಯಿಂದ ಎಫ್‌ಎನ್‌ಎಸ್ ಆಹಾರ ಮತ್ತು ಪೌಷ್ಟಿಕಾಂಶ ಯೋಜನೆ ಅಡಿಯಲ್ಲಿ ಬುಧವಾರ ಬಿತ್ತನೆ ರಾಗಿ ಮತ್ತು ಸಾವಯವ ಗೊಬ್ಬರ ಹಾಗೂ ಕೃಷಿ ಪರಿಕರಗಳನ್ನು ಉಚಿತವಾಗಿ ರೈತರಿಗೆ ವಿತರಿಸಿ ಮಾತನಾಡಿದರು.
ರಾಜ್ಯದಲ್ಲಿ ಈ ಬಾರಿ ಸರ್ಕಾರದ ಅಸಹಕಾರ ಮತ್ತು ನಿರ್ಲಕ್ಷೃದಿಂದ ಯೂರಿಯಾ ಮತ್ತು ಗೊಬ್ಬರದ ಅಭಾವ ಉಂಟಾಗಿದ್ದು ಇದರಿಂದ ಕೆಲವು ಕಡೆಗಳಲ್ಲಿ ರೈತರಿಗೆ ಕೃಷಿ ಚಟುವಟಿಕೆ ನಡೆಸಲು ಸಮಸ್ಯೆಯಾಗುತ್ತಿದೆ. ಇನ್ನೂ ಅನೇಕ ಕಡೆಗಳಲ್ಲಿ ಯೂರಿಯಾ ಮತ್ತು ಗೊಬ್ಬರಕ್ಕಾಗಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ರಾಜ್ಯ ಸರ್ಕಾರ ಮುಂಗಾರು ಪ್ರಾರಂಭದಲ್ಲೇ ಮಳೆಯ ಹವಾಮಾನ ವೈಪರೀತ್ಯವನ್ನು ತಜ್ಞರಿಂದ ಮಾಹಿತಿ ಪಡೆದು ಹೆಚ್ಚಿನ ದಾಸ್ತಾನು ತರಿಸಲು ಹೆಚ್ಚು ಮುತುವರ್ಜಿ ವಹಿಸಬೇಕಾಗಿತ್ತು. ಈಗ ಕೇಂದ್ರ ಸರ್ಕಾರದ ಮೇಲೆ ಆರೋಪ ಮಾಡುವುದು ಸರಿಯಲ್ಲ. ಈಗಲೂ ಈ ವಿಚಾರವನ್ನು ಗಂಭೀರವಾಗಿ ರಾಜ್ಯ ಸರ್ಕಾರ ಪರಿಗಣಿಸಿ ಒಂದು ವಾರದ ಒಳಗಡೆ ಹೆಚ್ಚಿನ ದಾಸ್ತಾನು ತರಿಸುವ ಮೂಲಕ ರೈತರಿಗೆ ನೆರವಾಗುವಂತೆ ಮನವಿ ಮಾಡಿದರು.
ಜಿಲ್ಲೆ ಹಾಗೂ ತಾಲೂಕಿನಲ್ಲಿ ಹೆಚ್ಚಿನ ಅಭಾವ ಉಂಟಾಗಿಲ್ಲ. ತಾವು ತಾಲೂಕಿನ ಎಲ್ಲ ಸಹಕಾರ ಸಂಘಗಳ ಮೂಲಕವೂ ಯೂರಿಯಾ ಮತ್ತು ರಸಗೊಬ್ಬರ ಮಾರಾಟಕ್ಕೆ ಹೆಚ್ಚಿನ ಅನುವು ಮಾಡಿಕೊಟ್ಟಿದ್ದರಿಂದ ಹೆಚ್ಚಿನ ಸಮಸ್ಯೆ ಉದ್ಭವಿಸಿಲ್ಲ ಎಂದರು.
ಎಫ್‌ಎನ್‌ಎಸ್ ಯೋಜನೆ ಅಡಿಯಲ್ಲಿ ಒಬ್ಬ ರೈತರಿಗೆ 2311ರೂ. ಗಳ ವೆಚ್ಚದಲ್ಲಿ ರಾಗಿ ಮತ್ತು ಸಾವಯವ ಗೊಬ್ಬರ ಬೇವಿನ ಎಣ್ಣೆ ಕೀಟನಾಶಕ ಸೇರಿದಂತೆ ಇನ್ನಿತರ ಕೃಷಿ ಪರಿಕರಗಳನ್ನು ಸುಮಾರು 280 ರೈತರಿಗೆ ಉಚಿತವಾಗಿ ವಿತರಣೆ ಮಾಡಲಾಗುತ್ತಿದೆ. ಇದರ ಸದುಪಯೋಗವನ್ನು ಗ್ರಾಮಸ್ಥರು ಬಳಸಿಕೊಂಡು ಕೃಷಿಯಲ್ಲಿ ಹೆಚ್ಚು ಇಳುವರಿ ಪಡೆಯುವಂತೆ ಸಲಹೆ ನೀಡಿದರು.
ಒಂದು ಎಕರೆ ರಾಗಿಗೆ ವಿಮಾ ಇಲಾಖೆ 344 ರೂ.ಗಳನ್ನು ನಿಗದಿ ಮಾಡಿದ್ದು, ಹವಾಮಾನ ವೈಪರೀತ್ಯದಿಂದ ಬೆಳೆ ಹಾಳಾದರೆ ಪ್ರತಿ ಎಕರೆಗೆ 17 ಸಾವಿರ ರೂ. ಸಹಾಯಧನ ಸಿಗಲಿದೆ. ರೈತರು ನೋಂದಣಿ ಮಾಡಿಸಲು ಆಗಸ್ಟ್ 16 ಕೊನೆಯ ದಿನವಾಗಿದೆ ತಡ ಮಾಡದೆ ನೋಂದಾಯಿಸಿಕೊಳ್ಳುವಂತೆ ಸಲಹೆ ನೀಡಿದರು.
ಈಗಾಗಲೇ ಹೋಬಳಿ ರೈತ ಸಂಪರ್ಕ ಕೇಂದ್ರದ ವತಿಯಿಂದ ಹೋಬಳಿ ವ್ಯಾಪ್ತಿಯ 1500 ರೈತರಿಗೆ ಸ್ಪ್ರಿಂಕ್ಲರ್ ಸೆಟ್ ಹಾಗೂ 500 ರೈತರಿಗೆ ಸಹಾಯಧನದಲ್ಲಿ ಪಿವಿಸಿ ಪೈಪ್ ನೀಡಲಾಗಿದೆ. ಮುಂಬರುವ ದಿನಗಳಲ್ಲೂ ಬೇಡಿಕೆಗೆ ಅನುಗುಣವಾಗಿ ರೈತರಿಗೆ ವಿತರಣೆ ಮಾಡುವಂತೆ ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದರು.
ತಾಲೂಕಿನಲ್ಲಿ ತೆಂಗು ಬೆಳೆಗೆ ನುಸಿ ಗರಿ ಚುಕ್ಕೆ ರೋಗ, ಕೊಳೆರೋಗ ಸೇರಿದಂತೆ ಅನೇಕ ರೋಗಗಳು ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ವ್ಯಾಪಿಸಿದೆ. ಈ ಸಮಸ್ಯೆಯ ಬಗ್ಗೆ ಆಗಸ್ಟ್‌ನಲ್ಲಿ ನಡೆಯುವ ವಿಧಾನಸಭಾ ಅಧಿವೇಶನದಲ್ಲಿ ತಾಲೂಕಿನ ತೆಂಗಿನ ಬೆಳೆಗಾರರ ಪರವಾಗಿ ಸರ್ಕಾರದ ಗಮನ ಸೆಳೆಯುವುದಾಗಿ ತಿಳಿಸಿದರು.
ನುಗ್ಗೇಹಳ್ಳಿ ಗ್ರಾಪಂ ಅಧ್ಯಕ್ಷ ಎನ್.ಆರ್.ಶಿವಕುಮಾರ್, ಹೋಬಳಿ ಕೃಷಿ ಅಧಿಕಾರಿ ಜಿ.ವಿ.ದಿನೇಶ್, ಎಪಿಎಂಸಿ ಮಾಜಿ ಅಧ್ಯಕ್ಷ ದೊರೆಸ್ವಾಮಿ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಎಚ್.ಬಿ.ವಿಠ್ಠಲ್ ಕುಮಾರ್, ನಾಗರಿಕ ವೇದಿಕೆ ಅಧ್ಯಕ್ಷ ತೋಟಿ ನಾಗರಾಜ್, ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷ ಎಚ್.ಬಿ.ರಂಗಸ್ವಾಮಿ, ಸಂಪತ್ ಕುಮಾರ್, ಗ್ರಾಪಂ ಸದಸ್ಯ ಸವಿತಾ ಯೋಗೀಶ್, ಹೊನ್ನೇಗೌಡ, ನಟರಾಜ್ ಯಾದವ್, ಮಂಜುನಾಥ್, ಮಂಜಣ್ಣ ರೈತ ಸಂಘದ ಮುಖಂಡ ಬಸವರಾಜು, ಶಿವಣ್ಣ, ಬೋರೇಗೌಡ, ಕೃಷ್ಣಮೂರ್ತಿ, ಸುರೇಶ್, ಜಯರಾಮ್, ಕಾಂತರಾಜ್, ದೇವರಾಜ್, ಎಚ್.ಬಿ. ಶೇಖರ್, ಕೃಷಿ ಇಲಾಖೆ ಸಿಬ್ಬಂದಿ ವಿಜಯಕುಮಾರ್, ರಾಜೇಶ್ವರಿ ಇತರರು ಇದ್ದರು.