

ಕಟಕೋಳ: ಉತ್ತರ ಕರ್ನಾಟಕದ ಧರ್ಮಸ್ಥಳ ಎಂದೇ ಖ್ಯಾತಿ ಗಳಿಸಿರುವ ಸುಕ್ಷೇತ್ರ ಗೊಡಚಿಯಲ್ಲಿ ಆ.9ರಂದು ನೂಲೋತ್ಸವ ಸಂಭ್ರಮದಿಂದ ನಡೆಯಲಿದೆ.
ಶ್ರಾವಣ ಮಾಸದಲ್ಲಿ ಬರುವ ನೂಲು ಹುಣ್ಣಿಮೆ ದಿನವಾದ ಆ.9ರಂದು ಶ್ರೀ ವೀರಭದ್ರೇಶ್ವರ ಸ್ವಾಮಿ ಹಾಗೂ ಶ್ರೀ ಭದ್ರಕಾಳಿ ಮಾತೆಗೆ 11 ಜನ ಶಾಸಿಗಳಿಂದ ಮಹಾರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ, ಮಹಾ ಮಂಗಳಾರತಿ ಜರುಗುವುದು. ನಂತರ ಬೆಳಗ್ಗೆ 11 ಗಂಟೆಗೆ ಶಿಂಧೆ ಮಹಾರಾಜರ ವಂಶಸ್ಥರು ಹಾಗೂ ಸಕಲ ಸದ್ಭಕ್ತರೊಳಗೊಂಡು ಸಕಲ ವೈಭವದೊಂದಿಗೆ ವೀರಭದ್ರೇಶ್ವರ ಹಾಗೂ ಭದ್ರಕಾಳಿ ದೇವರ ಹಾಗೂ ನೂಲೋತ್ಸವ ಜರುಗುವುದು.
ನೂಲೋತ್ಸವ ಜಾತ್ರೆಗೆ ರಾಜ್ಯದ ಮೂಲೆ ಮೂಲೆಗಳಿಂದ ಅಪಾರ ಭಕ್ತರು ಆಗಮಿಸಿ ದರ್ಶನಾಶೀರ್ವಾದ ಪಡೆದು ಪುನೀತರಾಗುತ್ತಾರೆ. ಅನೇಕ ಊರಿನ ಭಕ್ತರು ಅನ್ನದಾಸೋಹ ಸೇವೆ ಸಲ್ಲಿಸುತ್ತಾರೆ. ನೂಲೋತ್ಸವ ಅಂಗವಾಗಿ ಗೊಡಚಿ ಗ್ರಾಮದ ಮನೆ ಮನೆಗಳ ಮುಂದೆ ರಂಗೋಲಿ ಹಾಕಿ ತಳಿರು ತೋರಣ ಕಟ್ಟಿ ಸಿಂಗರಿಸುತ್ತಾರೆ. ಈ ಕಾರ್ಯಕ್ರಮಕ್ಕಾಗಿ ದೇವಸ್ಥಾನ ಕಮಿಟಿ ಕೂಡ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದೆ.
ಕ್ಷೇತ್ರದಲ್ಲಿ ಶ್ರಾವಣ ಕಳೆ: ಶ್ರಾವಣ ಮಾಸದ ನಿಮಿತ್ತ ಸುಕ್ಷೇತ್ರ ಗೊಡಚಿ ಸನ್ನಿಧಿಗೆ ಭಕ್ತರು ಭೇಟಿ ನೀಡಿ ವೀರಭದ್ರನ ದರ್ಶನ ಪಡೆದು ಪುನೀತರಾಗುತ್ತಿದ್ದಾರೆ. ಶ್ರಾವಣ ಮಾಸದ ಸೋಮವಾರ ಸುತ್ತಲಿನ ಗ್ರಾಮಗಳಾದ ಕಟಕೋಳ, ಚಂದರಗಿ, ಸುನ್ನಾಳ, ತೊರಣಗಟ್ಟಿ ಸೇರಿದಂತೆ ಇತರ ಗ್ರಾಮಗಳಿಂದ ಜನರು ಆಗಮಿಸಿ ಭಕ್ತಿ ಮೆರೆಯುತ್ತಿದ್ದಾರೆ. ದೂರದ ಊರುಗಳಿಂದಲೂ ಭಕ್ತರು ಆಗಮಿಸಿ ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸುತ್ತಾರೆ.
ಉತ್ತರ ಕರ್ನಾಟಕದ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಗೊಡಚಿಗೆ ಪ್ರತಿದಿನ ವಿವಿಧ ಊರುಗಳಿಂದ ಭಕ್ತರು ಆಗಮಿಸುತ್ತಾರೆ. ಇದೀಗ ಶ್ರಾವಣ ಮಾಸವಾಗಿರುವ ಕಾರಣ ಭಕ್ತರ ಸಂಖ್ಯೆ ಹೆಚ್ಚಿದೆ. ಸುಕ್ಷೇತ್ರ ಗೊಡಚಿಯಲ್ಲಿ ನೂಲೋತ್ಸವ ಆಚರಣೆ ಮಾಡುವುದು ಅರ್ಥಪೂರ್ಣವಾಗಿದೆ. ಈ ಕ್ಷೇತ್ರಕ್ಕೆ ಬರುವ ಭಕ್ತರ ಅನುಕೂಲಕ್ಕಾಗಿ ಹೆಚ್ಚಿನ ಸಾರಿಗೆ ಸೌಲಭ್ಯ ಕಲ್ಪಿಸಬೇಕು.
| ಈಶ್ವರ ಕರೀಕಟ್ಟಿ ಪುರಸಭೆ ಸದಸ್ಯರ ಮುನವಳ್ಳಿ