ಗೊಂದಲದ ಗೂಡಾದ ಎಸ್ಸಿ, ಎಸ್ಟಿ ಸಭೆ

hnp1
ಹೊಳೆನರಸೀಪುರ ತಾಲೂಕು ಕಚೇರಿ ಸಭಾಂಗಣದಲ್ಲಿ ಎಚ್.ಡಿ.ರೇವಣ್ಣ ಅವರ ಅಧ್ಯಕ್ಷತೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಹಿತರಕ್ಷಣಾ ಸಮಿತಿ ಸಭೆ ನಡೆಯಿತು. ಎಸ್.ವಿಶ್ವನಾಥ್‌, ಗೋಪಾಲ್, ಮಹೇಂದ್ರ ಇದ್ದರು.
Published on

ಹೊಳೆನರಸೀಪುರ: ಐದು ವರ್ಷಗಳಿಂದ ಶಾಸಕ ಎಚ್.ಡಿ.ರೇವಣ್ಣ ದಲಿತರ ಕುಂದುಕೊರತೆ ಸಭೆ ನಡೆಸಿಲ್ಲ ಎಂಬ ವಿಚಾರಕ್ಕೆ ಶಾಸಕರ ಎದುರೇ ಕಾಂಗ್ರೆಸ್ ಹಾಗೂ ಜೆಡಿಎಸ್‌ನ ದಲಿತ ಮುಖಂಡರು ವಾಗ್ವಾದಕ್ಕಿಳಿದು ಇಡೀ ಸಭೆ ಗೊಂದಲದ ಗೂಡಾಗಿ ಪರಿಣಮಿಸಿತು.

ಸಮಾಜ ಕಲ್ಯಾಣ ಇಲಾಖೆ ವತಿಯಿಂದ ತಾಲೂಕು ಕಚೇರಿ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ತಾಲೂಕು ಮಟ್ಟದ ಪರಿಶಿಷ್ಟ ಜಾತಿ ಮತ್ತು ಪಂಗಡದ ಹಿತರಕ್ಷಣಾ ಸಮಿತಿ ಸಭೆಯಲ್ಲಿ ದಲಿತ ಸಂಘಟನೆಗಳ ಮುಖಂಡರ ನಡುವೆ ಮಾತಿನ ಚಕಮಕಿ ನಡೆಯಿತು.

ಶಾಸಕ ಎಚ್.ಡಿ.ರೇವಣ್ಣ ಸಭೆಗೆ ಹಾಜರಾಗುತ್ತಿದ್ದಂತೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಟಿ.ಲಕ್ಷ್ಮಣ್ ಶಾಸಕರನ್ನು ಉದ್ದೇಶಿಸಿ, ಐದು ವರ್ಷದಿಂದ ನೀವು ಏಕೆ ದಲಿತರ ಕುಂದುಕೊರತೆ ಸಭೆ ನಡೆಸಿಲ್ಲ? ಶಾಸಕರಾಗಿ ಇದುವರೆಗೂ ದಲಿತರ ಕುಂದುಕೊರತೆಗಳ ಸಭೆ ಕರೆಯದೆ ಇರುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನೆ ಮಾಡುತ್ತಿದ್ದಂತೆಜೆಡಿಎಸ್ ಪಕ್ಷದ ಕೆಲ ದಲಿತ ಮುಖಂಡರು ಲಕ್ಷ್ಮಣ್ ವಿರುದ್ಧ ಹರಿಹಾಯ್ದರು. ಪರಿಸ್ಥಿತಿ ಕೈ ಮೀರಿ ಮಾತಿಗೆ ಮಾತು ಬೆಳೆದು ಸಭೆಯಲ್ಲಿ ಗದ್ದಲ ಏರ್ಪಟ್ಟಿತು. ಕೂಡಲೇ ಮಧ್ಯ ಪ್ರವೇಶಿಸಿದ ಶಾಸಕ ಎಚ್.ಡಿ.ರೇವಣ್ಣ ದಲಿತ ಮುಖಂಡರನ್ನು ಸಮಾಧಾನ ಮಾಡಿ ಸಮಸ್ಯೆ ಬಗ್ಗೆ ಚರ್ಚಿಸಲು ಮುಂದಾದರು.

ದಸಂಸ ರಾಜ್ಯ ಸಂಚಾಲಕ ಎಂ.ಸೋಮಶೇಖರ್ ಮಾತನಾಡಿ, ಎಸ್‌ಸಿ, ಎಸ್‌ಟಿ ಗುತ್ತಿಗೆದಾರರು ಹೆಚ್ಚಾಗಿದ್ದು ಅವರಿಗೆ ಕಾಮಗಾರಿಗಳ ವಿಷಯದಲ್ಲಿ 50 ಲಕ್ಷ ರೂ.ಗಳಿಗೆ ಪ್ಯಾಕೇಜ್ ಮಾಡುತ್ತಿದ್ದು, ದಲಿತ ಗುತ್ತಿಗೆದಾರರು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಒಂದು ಕೋಟಿ ರೂ.ವರೆಗೆ ಪ್ಯಾಕೇಜ್ ಮಾಡಬೇಕೆಂದು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು ಅಧಿಕಾರಿಗಳನ್ನು ಕರೆದು ಇನ್ನು ಮುಂದೆ ಒಂದು ಕೋಟಿ ರೂ.ವರೆಗೂ ಪ್ಯಾಕೇಜ್ ಮಾಡಬೇಕೆಂದು ಸಲಹೆ ನೀಡಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಟಿ.ಲಕ್ಷ್ಮಣ್ ಮಾತನಾಡಿ, ಎಸ್‌ಸಿ, ಎಸ್‌ಟಿ ಮೀಸಲಾತಿ ಹಣದಲ್ಲಿ ತಾಲೂಕು ಕಚೇರಿಯ ಎದುರಿಗೆ ನಿರ್ಮಾಣಗೊಂಡಿರುವ ಗಣಪತಿ ಪೆಂಡಾಲ್ ಮುಂಭಾಗದ ಕೋರ್ಟ್‌ವರೆಗಿನ ಕಾಂಕ್ರೀಟ್ ರಸ್ತೆ ಮಾಡಿದ್ದೀರಿ. ಈ ಹಣ ದುರ್ಬಳಕೆಯಾಗಿದೆ. ದಲಿತ ಕಾಲನಿಗೆ ಬಳಸಬೇಕಾದ ಹಣವನ್ನು ಇಂತಹ ಕಾಮಗಾರಿಗೆ ಬಳಸಿಕೊಂಡಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು, ಇದು ನನ್ನ ಗಮನಕ್ಕೆ ಬಂದಿಲ್ಲ. ಕೂಡಲೇ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.

ಪೌರಕಾರ್ಮಿಕರ ಮುಖಂಡ ವರ್ಮ ಮಾತನಾಡಿ, ಪೌರಕಾರ್ಮಿಕರ ಬೀದಿಗಳಿಗೆ ಕಾಂಕ್ರೀಟ್ ರಸ್ತೆ ಮಾಡಿಲ್ಲ. ಕೇವಲ ಬಡಾವಣೆಯಲ್ಲಿರುವ ಪಿರಿಯಾಪಟ್ಟಣದಮ್ಮ ದೇವಾಲಯದವರೆಗೆ ಮಾತ್ರ ರಸ್ತೆ ಮಾಡಿದ್ದಾರೆ ಎಂದು ದೂರಿದರು. ಕೆಲವು ರೈತರು 53 ನಮೂನೆಯಲ್ಲಿ ಅರ್ಜಿ ಹಾಕಿಕೊಂಡು 30-40 ವರ್ಷದಿಂದ ಸಾಗುವಳಿ ಮಾಡಿಕೊಂಡು ಬರುತ್ತಿದ್ದಾರೆ. ಅಂತಹವರಿಗೆ ಕೂಡಲೇ ಸಾಗುವಳಿ ಚೀಟಿ ನೀಡಿ ಖಾತೆ ಮಾಡಿಸಿಕೊಡಬೇಕೆಂದು ದಲಿತ ಮುಖಂಡರು ಆಗ್ರಹಿಸಿದರು. ತಾಲೂಕಿನ ದೊಡ್ಡಕಾಡನೂರಿನ ಬಳಿ ಇರುವ ಕಲ್ಲೋಡೆ ಬಾರೆಯಲ್ಲಿ ದಲಿತರ ಜಮೀನನ್ನು ಅಕ್ರಮವಾಗಿ ವಶಪಡಿಸಿಕೊಂಡು ಕಲ್ಲು ಗಣಿಗಾರಿಕೆ ಮಾಡುತ್ತಿದ್ದಾರೆ. ಇದರಿಂದ ಕೃಷಿ ಚಟುವಟಿಕೆಗೆ ತೊಂದರೆ ಆಗಿದೆ. ಗಣಿಗಾರಿಕೆ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಬೇಕೆಂದು ಒತ್ತಾಯಿಸಿದರು.

ಶಾಸಕ ಎಚ್.ಡಿ.ರೇವಣ್ಣ ಮಾತನಾಡಿ, ದಲಿತ ಕಾಲನಿಯಲ್ಲಿ ಚರಂಡಿ, ರಸ್ತೆ, ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.

ದಲಿತ ಮುಖಂಡರಾದ ಎಚ್.ಆರ್.ಕೃಷ್ಣಮೂರ್ತಿ, ಕುಮಾರ್, ಸಿ.ಆರ್.ಮಂಜುನಾಥ, ಚಿನ್ನಸ್ವಾಮಿ, ವಕೀಲ ಎಚ್.ಆರ್. ಮಂಜುನಾಥ, ಪುರಸಭೆ ಸದಸ್ಯರಾದ ಹನುಮಂತರಾಜ್, ಜವರೇಶ, ಲಕ್ಕೂರು ಬಸವರಾಜ್, ಜಿಪಂ ಮಾಜಿ ಸದಸ್ಯ ಎಚ್.ವೈ. ಚಂದ್ರಶೇಖರ್, ತಹಸೀಲ್ದಾರ್ ವಿಶ್ವನಾಥ್, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಪಿ.ಆರ್.ಗೋಪಾಲ್, ಸಮಾಜ ಕಲ್ಯಾಣಾಧಿಕಾರಿ ಕೌಸರ್, ಬಿಸಿಎಂ ಇಲಾಖೆ ಮಂಜುನಾಥ್, ನಗರಠಾಣೆ ಪಿಎಸ್‌ಐ ಅರುಣ್, ಬಿಆರ್‌ಸಿ ಅಧಿಕಾರಿ ಭಾಗ್ಯಮ್ಮ, ಬಿಇಒ ಸೋಮ ಲಿಂಗೇಗೌಡ, ಜಿಪಂ ಇಂಜಿನಿಯರ್ ಪ್ರಶಾಂತ್, ತಾಲೂಕು ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net