

ಬೂದಿಕೋಟೆ: ರಾಜ್ಯ ಸರ್ಕಾರದಿಂದ ಬೆಂಬಲ ಬೆಲೆ ಯೋಜನೆಯಲ್ಲಿ ರಾಗಿ ಖರೀದಿ ಕೇಂದ್ರಗಳನ್ನು ತೆರೆಯಲಾಗಿದ್ದು, ಹಲವು ಗೊಂದಲ ಹಾಗೂ ನೂಕು ನುಗ್ಗಲು ನಡುವೆ ರೈತರು ರಾಗಿ ಮಾರಾಟಕ್ಕೆ ಮುಂದಾಗಿದ್ದಾರೆ.
ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ(ಕೆಎಫ್‌ಸಿಎಸ್‌ಸಿ) ದಿಂದ ತೆರೆಯಲಾಗಿರುವ ರಾಗಿ ಖರೀದಿ ಕೇಂದ್ರಗಳಲ್ಲಿ ರಾಗಿ ಮಾರಾಟ ಮಾಡಲು ಕಳೆದ ವರ್ಷಕ್ಕಿಂತ ಈ ವರ್ಷ ರೈತರು ಹೆಚ್ಚಿನ ಆಸಕ್ತಿ ತೋರಿದ್ದಾರೆ. ಬಂಗಾರಪೇಟೆಯಲ್ಲಿ ರಾಗಿ ಮಾರಾಟಕ್ಕೆ ಇಲ್ಲಿಯವರೆಗೂ 37199 ಕ್ವಿಂಟಾಲ್ ಮಾರಾಟಕ್ಕೆ 2567 ರೈತರು ನೋಂದಾಯಿಸಿಕೊಂಡಿದ್ದಾರೆ. ಈ ಪೈಕಿ ಎರಡು ದಿನಗಳಲ್ಲಿ ಸುಮಾರು 1400 ಕ್ವಿಂಟಾಲ್ ರಾಗಿಯನ್ನು ಸರ್ಕಾರ ಖರೀದಿ ಮಾಡಿದೆ.
ಬೆಂಬಲ ಬೆಲೆ ಏರಿಕೆ: ಸರ್ಕಾರದಿಂದ ಪ್ರತಿ ಕ್ವಿಂಟಾಲ್ ರಾಗಿಗೆ ಕಳೆದ ವರ್ಷ 3295 ರೂ. ನಿಗದಿಪಡಿಸಲಾಗಿತ್ತು. ಈ ವರ್ಷ 3377 ರೂ. ನೀಡಲಾಗುತ್ತಿದೆ. ಪ್ರತಿ ಎಕರೆಗೆ 10 ಕ್ವಿಂಟಾಲ್‌ನಂತೆ ಗರಿಷ್ಠ 20 ಕ್ವಿಂಟಾಲ್‌ವರೆಗೆ ರಾಗಿ ಖರೀದಿಗೆ ಅವಕಾಶ ಕಲ್ಪಿಸಿರುವ ಕಾರಣ ದೊಡ್ಡ ರೈತರಿಗೆ ನಿರಾಸೆಯಾಗಿದೆ.
ನಿತ್ಯ ಅಲೆದಾಟ: ಮಾರಾಟಕ್ಕೆ ತಂದಿರುವ ರಾಗಿಯ ಗುಣಮಟ್ಟ ಸರಿ ಇಲ್ಲ ಎಂದು ಅಧಿಕಾರಿಗಳು ಕಿರುಕುಳ ನೀಡುತ್ತಿದ್ದಾರೆ ಎಂದು ಕೆಲ ರೈತರು ಆರೋಪಿಸಿದ್ದಾರೆ. ಈ ವಿಷಯವಾಗಿ ರೈತರು ಹಾಗೂ ಅಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆಯುವುದು ಸಾಮಾನ್ಯವಾಗಿದೆ. ಬೆಳೆ ಸಮೀಕ್ಷೆಯಲ್ಲಿ ರೈತರು ಸರಿಯಾದ ರೀತಿಯಲ್ಲಿ ಬೆಳೆ ಮಾಹಿತಿ ನಮೂದಿಸದ ಕಾರಣ ಬೆಳೆ ಅದಲು ಬದಲಾಗಿ ರಾಗಿ ಮಾರಾಟ ಮಾಡಲು ನೋಂದಣಿ ಮಾಡಿಸಲು ಸಾಧ್ಯವಾಗದೆ ನಿತ್ಯ ಕಚೇರಿಗೆ ಅಲೆದಾಡುವ ಸ್ಥಿತಿಯಿದೆ.
ನೂಕು ನುಗ್ಗಲು: ರಾಗಿ ಮಾರಾಟ ಕೇಂದ್ರದಲ್ಲಿ ಖರೀದಿಗೆ ಬೆಳಗ್ಗೆ 9.30ರಿಂದ 1.30ರವರೆಗೂ ಸಮಯ ನಿಗದಿ ಮಾಡಿರುವ ಕಾರಣ ರೈತರು ನಾ ಮುಂದು ತಾ ಮುಂದು ಎಂದು ರಾಗಿ ಮಾರಾಟಕ್ಕೆ ಮುಂದಾಗಿದ್ದಾರೆ. ಇದರ ಜತೆಗೆ ರಾಗಿ ಮಾರಾಟಕ್ಕೆ ನೋಂದಾಯಿಸಲು ಕಾಲಾವಕಾಶ ಮುಗಿದಿರುವ ಕಾರಣ ಇನ್ನೂ ನೋಂದಾಯಿಸದಿರುವ ಬಹಳಷ್ಟು ರೈತರು ಮಾರಾಟ ಕೇಂದ್ರಕ್ಕೆ ಬಂದು ಹೋಗುತ್ತಿರುವುದು ಸಾಮಾನ್ಯವಾಗಿದೆ.
ಸರ್ಕಾರದ ಖರೀದಿ ಕೇಂದ್ರದಲ್ಲಿ ದಲ್ಲಾಳಿಗಳ ಕಾಟವಿಲ್ಲದೆ ರಾಗಿಗೆ ಉತ್ತಮ ಬೆಲೆ ಸಿಗುತ್ತಿದೆ. ಆದರೆ ನಾನು 3 ಎಕರೆ ಪ್ರದೇಶದಲ್ಲಿ ರಾಗಿ ಮತ್ತು ಹುರಳಿ ಬೆಳೆದಿದ್ದರೆ ಬೆಳೆ ಸಮೀಕ್ಷೆ ಮಾಡಿರುವವರು ನೀಲಗಿರಿ ಎಂದು ನಮೂದಿಸಿರುವ ಕಾರಣ ಬೆಂಬಲ ಬೆಲೆಗೆ ರಾಗಿ ಮಾರಾಟ ಮಾಡಲು ಆಗುತ್ತಿಲ್ಲ. ರಾಜಣ್ಣ, ರೈತ, ದೊಡ್ಡ ಚಿನ್ನಹಳ್ಳಿ ಸುಮಾರು ಮೂರು ಎಕರೆಯಲ್ಲಿ ರಾಗಿ ಬೆಳೆಯಲಾಗಿತ್ತು. ನಮ್ಮನ್ನು ದೊಡ್ಡ ರೈತರು ಎಂದು ಗುರುತಿಸಲಾಗಿದೆ. ಇದರಿಂದಾಗಿ 20 ಕ್ವಿಂಟಾಲ್‌ಗಿಂತ ಹೆಚ್ಚಿನ ರಾಗಿ ಮಾರಾಟ ಮಾಡಲು ಸಾಧ್ಯವಾಗುತ್ತಿಲ್ಲ. ಸರ್ಕಾರ ಕಳೆದ ವರ್ಷದಂತೆ 50 ಕ್ವಿಂಟಾಲ್‌ವರೆಗೆ ರಾಗಿ ಮಾರಾಟಕ್ಕೆ ಅವಕಾಶ ನೀಡಬೇಕು. ನಾರಾಯಣಪ್ಪ, ತಳೂರು ಗ್ರಾಮ ಖರೀದಿ ಕೇಂದ್ರದಲ್ಲಿ ನೋಂದಣಿಯಾದ ರೈತರಿಂದ ರಾಗಿ ಪಡೆಯಲಾಗುತ್ತಿದ್ದು, ಕೆಲ ರೈತರು ಗುಣಮಟ್ಟ ಕಡಿಮೆ ಇರುವ ರಾಗಿ ತಂದಿದ್ದಾರೆ. ಬೆಂಗಳೂರಿನಿಂದ ಅಧಿಕಾರಿಗಳು ಬಂದಿದ್ದು, ಗುಣಮಟ್ಟ ಪರೀಕ್ಷಿಸಿ ರಾಗಿ ಪಡೆಯಲಾಗುತ್ತಿದೆ. ನಾವೇ ಚೀಲ ಕೊಡುತ್ತಿದ್ದು, ಈ ಮೊದಲು ಚೀಲಕ್ಕೆ ನೀಡುತ್ತಿದ್ದ 24 ರೂಪಾಯಿ ನೀಡಲಾಗುತ್ತಿಲ್ಲ. ಕಲೀಂ ಉಲ್ಲಾ ಷರೀಫ್, ಖರೀದಿ ಅಧಿಕಾರಿ, ಕೆಎಫ್‌ಸಿಎಸ್‌ಸಿ, ಬಂಗಾರಪೇಟೆ